ADVERTISEMENT

ಕೇಂದ್ರ ಸಚಿವರ ಭೇಟಿ ಮಾಡಿದ ನಿಯೋಗ

ಕಾಫಿ ಬೆಳೆಗಾರರ ಸಂಕಷ್ಟ ಪರಿಹರಿಸಲು ಕಾಫಿ ಬೆಳೆಗಾರರ ಒಕ್ಕೂಟದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:15 IST
Last Updated 27 ಜೂನ್ 2019, 16:15 IST
ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ರಾಜ್ಯದ ಸಂಸದರ ನೇತೃತ್ವದಲ್ಲಿ ಭೇಟಿ ಮಾಡಿದ ಕಾಫಿ ಬೆಳೆಗಾರರ ಒಕ್ಕೂಟ ಸದಸ್ಯರು ನೆರವು ಕೋರಿ ಮನವಿ ಸಲ್ಲಿಸಿದರು
ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ರಾಜ್ಯದ ಸಂಸದರ ನೇತೃತ್ವದಲ್ಲಿ ಭೇಟಿ ಮಾಡಿದ ಕಾಫಿ ಬೆಳೆಗಾರರ ಒಕ್ಕೂಟ ಸದಸ್ಯರು ನೆರವು ಕೋರಿ ಮನವಿ ಸಲ್ಲಿಸಿದರು   

ಮಡಿಕೇರಿ: ಕಾಫಿ ಕೃಷಿಕರ ವಿವಿಧ ಸಮಸ್ಯೆ ಪರಿಹರಿಸುವಂತೆ ಕೋರಿ ರಾಜ್ಯ ಬೆಳೆಗಾರರ ಒಕ್ಕೂಟದ ನಿಯೋಗವು ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದ ನಿಯೋಗವು, ಕಳೆದ ವರ್ಷ ಮಹಾಮಳೆಯಿಂದ ಕಾಫಿ ಬೆಳೆ ಮತ್ತು ಆಸ್ತಿ ಹಾನಿಯಾಗಿತ್ತು. ಈ ಬಾರಿ ಬರಗಾಲದಿಂದ ಮುಂದಿನ ವರ್ಷಗಳಲ್ಲಿ ಬೆಳೆ ನಷ್ಟವಾಗುವ ಎಲ್ಲಾ ಸಾಧ್ಯತೆಗಳಿದೆ. 26 ವರ್ಷಗಳಿಗೆ ಹೋಲಿಸಿದರೆ, ಈಗ ಕಾಫಿ ಬೆಲೆ ಅತ್ಯಂತ ಕಡಮೆಯಾಗಿದೆ. ಜೂನ್‌ 30, 2019ಕ್ಕೆ ಅನ್ವಯಿಸುವಂತೆ ಕಾಫಿ ಸಾಲದ ಮೇಲೆ ಸಂಪೂರ್ಣ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿತು.

ಭೂಕುಸಿತ ಕಾಫಿ ತೋಟಕ್ಕೆ ಎಕರೆಗೆ ₹ 18 ಲಕ್ಷ ಪರಿಹಾರ ನೀಡಬೇಕು ಎಂದೂ ಕೋರಲಾಯಿತು.

ADVERTISEMENT

ಏನೇನು ಬೇಡಿಕೆ?: ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಬೆಳೆಗಾರರಿಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಕಾಫಿ ಮತ್ತು ಕಾಳುಮೆಣಸಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಕಾಫಿ ಮತ್ತು ಕಾಳುಮೆಣಸಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಸದಸ್ಯರು ಕೋರಿದರು.

ಕಾಫಿ ಉದ್ಯಮಕ್ಕೆ ಸಂಬಂಧಿಸಿದ 7‘ಬಿ’ (ಸೆಂಟ್ರಲ್ ಬೋರ್ಡ್‌ ಡೈರೆಕ್ಟ್ ಟ್ಯಾಕ್ಸ್) ಅನ್ನು ತೆಗೆದು ಹಾಕಬೇಕು. ವಿದೇಶಿ ಕಾಳುಮೆಣಸು ಆಮದನ್ನು ನಿಯಂತ್ರಿಸಬೇಕು. ಕೊಚ್ಚಿನ್ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ₹ 500ಕ್ಕಿಂತ (ಕನಾ೯ಟಕ ಸಕಾ೯ರ ಕೃಷಿ ಬೆಲೆ ಆಯೋಗದ ವರದಿಯ ಅನ್ವಯ) ಹೆಚ್ಚಾದಲ್ಲಿ ಮಾತ್ರ ವಿದೇಶಿ ಕಾಳುಮೆಣಸು ಆಮದಿಗೆ ಅವಕಾಶ ಕೊಡಬೇಕು. ಕಡಿಮೆಯಾದಲ್ಲಿ, ಯಾವುದೇ ಕಾರಣಕ್ಕೂ ಆಮದು ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ಮಾನವ– ವನ್ಯಜೀವಿ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಲೆನಾಡಿನ ಭಾಗದ ಜನಸಾಮಾನ್ಯರು ಪ್ರಾಣಭಯದಿಂದ ಜೀವಿಸುತ್ತಿದ್ದು, ಅದರಲ್ಲೂ ಮುಖ್ಯವಾಗಿ ಕಾಡಾನೆಗಳ ದಾಳಿಗೆ ಪ್ರಾಣಹಾನಿ ಮತ್ತು ಬೆಳೆಹಾನಿ ಸಂಭವಿಸುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಕಾಡಾನೆಗಳಿಗೆ ಕಾಡಿನಲ್ಲಿಯೇ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕಾಡಿನಿಂದ ನಾಡಿಗೆ ಬಾರದಂತೆ ರೈಲ್ವೆ ಕಂಬಿಗಳ ತಡೆಗೋಡೆ ನಿಮಿ೯ಸಬೇಕು ಎಂದು ಬೆಳೆಗಾರರು ಕೋರಿದರು.

ಶೀಘ್ರದಲ್ಲೇ ಕಾಫಿ ಮಂಡಳಿ ಮೂಲಕ ಕಾಫಿ ಬೆಳೆಗಾರರಿಗೆ ಉಳಿಕೆ ಆಗಿರುವ ಸಹಾಯಧನ ಬಿಡುಗಡೆ ಮಾಡಬೇಕು. ಮೂರು ತಿಂಗಳುಗಳಲ್ಲಿ ಕನಿಷ್ಠ 60 ದಿನಗಳ ಕಾಲ ಕೆಲಸ ನಿರ್ವಹಿಸುವ ಕಾಮಿ೯ಕರಿಗೆ ಮಾತ್ರ ಭವಿಷ್ಯನಿಧಿ ಸೌಲಭ್ಯವನ್ನು ನೀಡುವಂತೆ ಕಾನೂನು ರೂಪಿಸಬೇಕು ಎಂದು ಕೋರಿದರು.

ಬಿಳಿಕಾಂಡಕೊರಕದ ನಿಯಂತ್ರಣಕ್ಕೆ ಸೂಕ್ತ ಔಷಧಿ ಕಂಡು ಹಿಡಿಯಲು ಈಗಾಗಲೇ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ಗೆ ವಹಿಸಿರುವ ಯೋಜನೆ ಮುಂದುವರೆಸಬೇಕು. ಕಾಫಿ ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಕಾಫಿ ಉದ್ಯಮದಲ್ಲಿ ಬೆಳೆಗಾರರ ಪರವಾಗಿ ಕಾರ್ಯ ಚಟುವಟಿಕೆ ನಡೆಸಲು ಮಂಡಳಿ ಅಧ್ಯಕ್ಷರಿಗೆ ಅವಕಾಶ ನೀಡಬೇಕು. ಚಿಕೋರಿ ರಹಿತ ಕಾಫಿ ಪುಡಿಗೆ ಕಾನೂನು ತಿದ್ದುಪಡಿ ತಂದು, ಚಿಕೋರಿ ಮಿಶ್ರಿತ ಕಾಫಿ ಪುಡಿಯನ್ನು ಎಫ್‌ಎಸ್‌ಎಸ್ಎಐನಲ್ಲಿ ಕಲಬೆರಕೆ ಎಂದು ಪರಿಗಣಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಬೋಜೇಗೌಡ, ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್, ಪ್ರಧಾನ ಕಾರ್ಯದಶಿ೯ ಮುರಳೀಧರ್ ಎಸ್.ಬಕ್ಕರವಳ್ಳಿ, ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಡಿ.ಎಂ.ವಿಜಯ್, ಸಂಘಟನಾ ಕಾರ್ಯದಶಿ೯ ಕೆ.ಕೆ.ವಿಶ್ವನಾಥ್,ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಪ್ರತಿನಿಧಿ ಪ್ರದೀಪ್ ಪೂವಯ್ಯ ಅವರನ್ನು ಒಳಗೊಂಡ ರಾಜ್ಯ ಬೆಳೆಗಾರರ ಒಕ್ಕೂಟದ ನಿಯೋಗವು ಸಂಸತ್‌ ಸದಸ್ಯರಾದ ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಪ್ರಜ್ವಲ್ ರೇವಣ್ಣ, ಪಿ.ಸಿ.ಮೋಹನ್ ಅವರು ಕೇಂದ್ರ ಸಚಿವರಾದ ಪಿಯುಷ್‌ ಗೋಯಲ್‌ ಹಾಗೂ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.