ADVERTISEMENT

ಜಿಲ್ಲೆಯ ಸಮಸ್ಯೆ ಪರಿಹಾರಕ್ಕೆ ಒಗ್ಗಟ್ಟು ಅಗತ್ಯ: ವೀಣಾ ಅಚ್ಚಯ್ಯ

ವಿಧಾನ ಪರಿಷತ್‌ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಸಲಹೆ; ‘ನೆಲ್ಲಕ್ಕಿ’ ಸ್ಮರಣ ಸಂಚಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:47 IST
Last Updated 29 ಮೇ 2022, 4:47 IST
ನಾಪೋಕ್ಲು ಬಳಿ ನಡೆದ ಸಮಾರಂಭವನ್ನು ಕಲಿಯಂಡ ಡಾಲು ಕಾಳಪ್ಪ ಉದ್ಘಾಟಿಸಿದರು. ಶಾಂತೆಯಂಡ ವೀಣಾ ಅಚ್ಚಯ್ಯ, ಮಾಳೇಟಿರ ಸೀತಮ್ಮ ವಿವೇಕ್, ಕುಂಡ್ಯೊಳಂಡ ರಮೇಶ್ ಮುದ್ದಯ್ಯ, ತೀತಿರ ರೋಷನ್ ಅಪ್ಪಚ್ಚು ಇದ್ದಾರೆ
ನಾಪೋಕ್ಲು ಬಳಿ ನಡೆದ ಸಮಾರಂಭವನ್ನು ಕಲಿಯಂಡ ಡಾಲು ಕಾಳಪ್ಪ ಉದ್ಘಾಟಿಸಿದರು. ಶಾಂತೆಯಂಡ ವೀಣಾ ಅಚ್ಚಯ್ಯ, ಮಾಳೇಟಿರ ಸೀತಮ್ಮ ವಿವೇಕ್, ಕುಂಡ್ಯೊಳಂಡ ರಮೇಶ್ ಮುದ್ದಯ್ಯ, ತೀತಿರ ರೋಷನ್ ಅಪ್ಪಚ್ಚು ಇದ್ದಾರೆ   

ನಾಪೋಕ್ಲು: ‘ಕೊಡಗು ಜಿಲ್ಲೆ ಎದುರಿ ಸುತ್ತಿರುವ ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ವಿಧಾನ ಪರಿಷತ್‌ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು.

ಸಮೀಪದ ವೆಸ್ಟ್‌ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದಿಂದ ಶನಿವಾರ ಏರ್ಪಡಿಸಿದ್ದ ವಜ್ರಮಹೋತ್ಸವ ಸಮಾರಂಭದಲ್ಲಿ ‘ನೆಲ್ಲಕ್ಕಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

‘ಜಿಲ್ಲೆಯ ಕೃಷಿಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ವಂಶ ಪಾರಂಪರ್ಯವಾಗಿ ಬಂದ ಕೃಷಿ ಭೂಮಿಯ ಹಕ್ಕನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಕಾನೂನು ತೊಡಕು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಕೊಡಗಿನ ಜನತೆ ಒಗ್ಗೂಡಬೇಕು’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕಲಿಯಂಡ ಡಾಲು ಕಾಳಪ್ಪ ಮಾತನಾಡಿ, ‘ಗ್ರಾಮದಲ್ಲಿ ಈ ಹಿಂದೆ ಕಡಿಮೆ ಜನಸಂಖ್ಯೆ ಇತ್ತು. ದಾನಿಗಳ ನೆರವಿನಿಂದ ಅಂಬಲ ಶಾಲೆ, ಮಹಿಳಾ ಸಮಾಜ ಯುವಕ ಸಂಘಗಳ ಸ್ಥಾಪನೆಯಾಗಿ ಗ್ರಾಮ ಅಭಿವೃದ್ಧಿ ಕಂಡಿದೆ. 1950–51ನೇ ಸಾಲಿನಲ್ಲಿ ಊರ ದೇವಾಲಯದ ಎಡಭಾಗದಲ್ಲಿ ₹5 ಸಾವಿರ ವೆಚ್ಚದಲ್ಲಿ ನಿರ್ಮಿಸಿದ ಮಹಿಳಾ ಸಮಾಜದ ಕಟ್ಟಡವು ಇಂದಿಗೂ ಸುಸ್ಥಿತಿಯಲ್ಲಿದೆ. ಯುವ ಜನರು ಉತ್ತಮ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್‌ ಮಾತನಾಡಿ, ‘ಜಿಲ್ಲೆಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಬೇಕು’ ಎಂದು ಹೇಳಿದರು.

ಎಲೆಕ್ಟ್ರಿಕಲ್‌ ಎಂಜಿನಿಯರ್ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ‘ನಾಪೋಕ್ಲು ಹೋಬಳಿಯಲ್ಲಿ ವಿದ್ಯುತ್‌ ಸಮಸ್ಯೆ ತೀವ್ರವಾಗಿದೆ. ನಾಪೋಕ್ಲು– ಕಕ್ಕಬ್ಬೆ ವ್ಯಾಪ್ತಿಯಲ್ಲಿ ಎರಡು ಎಕರೆ ಜಾಗ ಸಿಕ್ಕರೆ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಕುಂಡ್ಯೊಳಂಡ ರಮೇಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕುಂಡ್ಯೋಳಂಡ ಸುಬ್ಬಯ್ಯ, ಕೇಟೋಳಿರ ಎಸ್.ಕುಟ್ಟಪ್ಪ, ಬೊಟ್ಟೋಳಂಡ ಡಾಲು ಸೋಮಯ್ಯ, ಅಪ್ಪಚ್ಚಿರ ಸುರೇಶ್ ಬೆಳ್ಯಪ್ಪ, ಕನ್ನಂಬೀರ ಚೆಂಗಪ್ಪ, ಕುಂಬಾರರ ಶಂಕರ, ಕಲಿಯಂಡ ಡಾಲು ಕಾಳಪ್ಪ, ಕಾಂಡಂಡ ಸುಬ್ಬಯ್ಯ ಉಪಸ್ಥಿತರಿದ್ದರು.

ದುಡಿಕೊಟ್ಟು ಪಾಟ್‌ನೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು. ತಂಗವ್ವ ಮತ್ತು ದೇಚಮ್ಮ ಅವರ ಸ್ವಾಗತ ನೃತ್ಯ ಗಮನ ಸೆಳೆಯಿತು. ಕಾಂಡಂಡ ರೇಖಾ ಪೊನ್ನಣ್ಣ ಮತ್ತು ಕುಂಡ್ಯೋಳಂಡ ಸ್ವಪ್ನಾ ಪೂವಯ್ಯ ನಿರೂಪಿಸಿದರು. ಕುಂಡ್ಯೋಳಂಡ ವಿಶುಪೂವಯ್ಯ ವಂದಿಸಿದರು. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.