ADVERTISEMENT

‘ಸಮಸ್ಯೆ ಸುಳಿ’ಯಲ್ಲಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ

ಶನಿವಾರಸಂತೆ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ನರ್ಸ್‌ಗಳ ಕೊರತೆ

ಶ.ಗ.ನಯನತಾರಾ
Published 19 ಮಾರ್ಚ್ 2021, 19:30 IST
Last Updated 19 ಮಾರ್ಚ್ 2021, 19:30 IST
ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರ
ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರ   

ಶನಿವಾರಸಂತೆ: ಎರಡೂವರೆ ದಶಕದ ಹಿಂದೆಯೇ ವಿಶ್ವ ಬ್ಯಾಂಕ್ ನೆರವಿನಿಂದ ₹ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರ ತಾಲ್ಲೂಕಿನಲ್ಲೇ ಭವ್ಯ, ಸುಂದರ ಕಟ್ಟಡ ಹೊಂದಿದೆ ಎಂಬ ಖ್ಯಾತಿ ಪಡೆದಿದ್ದರೂ ಕೆಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.

ಆರೋಗ್ಯ ಕೇಂದ್ರ 30 ಹಾಸಿಗೆಗಳ ಸೌಲಭ್ಯ ಹೊಂದಿದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿ ನಿತ್ಯ 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಇಲ್ಲಿ ಮುಖ್ಯವಾಗಿ ಹೆರಿಗೆ ಸೇರಿದಂತೆ ಹಲವಾರು ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆ.

ಲೇಬರ್ ವಾರ್ಡ್, ಸಾಮಾನ್ಯ ವಾರ್ಡ್, ಶಸ್ತ್ರಚಿಕಿತ್ಸಾ ಕೊಠಡಿ, ಮೈನರ್ ಒ.ಟಿ, ಲಸಿಕೆ ಮತ್ತು ಚುಚ್ಚುಮದ್ದು ವಿಭಾಗ, ಪ್ರಯೋಗಶಾಲೆ, ಫಾರ್ಮಸಿ ವಿಭಾಗ, ಕ್ಷಕಿರಣ ಕೊಠಡಿ, ದಂತ ಚಿಕಿತ್ಸಾ ವಿಭಾಗ, ಆಂಬುಲೆನ್ಸ್ ಸೇವೆ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ.

ADVERTISEMENT

ಮುಖ್ಯವಾಗಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಸೋಂಕಿನ ಸಂದರ್ಭ ಪರೀಕ್ಷೆಗಾಗಿ ಸ್ವ್ಯಾಬ್‌ಗಳನ್ನು ತೆಗೆದು ಮಡಿಕೇರಿಯಲ್ಲಿನ ಕೋವಿಡ್ ಪ್ರಯೋಗಶಾಲೆಗೆ ಕಳುಹಿಸಿ ಕೊಡಲಾಗುತ್ತಿತ್ತು. ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನೂ ಹಮ್ಮಿಕೊಂಡು ವೈದ್ಯಾಧಿಕಾರಿಯೂ ಸೇರಿದಂತೆ ಸಿಬ್ಬಂದಿಗಳಿಗೆ ಹಾಗೂ ಇದೀಗ 60 ವಯೋಮಾನ ದಾಟಿದವರಿಗೆಲ್ಲ ನೀಡಲಾಗುತ್ತಿದೆ.

ಆದರೆ, ಈ ಆರೋಗ್ಯ ಕೇಂದ್ರ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಹಲವು ಸಮಸ್ಯೆಗಳು ಅಡ್ಡಿಯಾಗಿರುವುದೇ ವಿಪರ್ಯಾಸ ಎನ್ನುತ್ತಾರೆ ಸ್ಥಳೀಯರು.

ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಕಾಯಂ ವೈದ್ಯಾಧಿಕಾರಿ ಹುದ್ದೆ ಖಾಲಿಯಿದೆ. ಇಲ್ಲಿಗೆ 4 ತಜ್ಞ ವೈದ್ಯರು ಹಾಗೂ ಒಬ್ಬ ಎಂ.ಬಿ.ಬಿ.ಎಸ್ ವೈದ್ಯರ ಹುದ್ದೆ ಮಂಜೂರಾಗಿದ್ದರೂ ಯಾರೊಬ್ಬರ ನೇಮಕಾತಿಯಾಗಿಲ್ಲ. ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಡಾ.ತನುಜಾ ಹಾಗೂ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಯುಷ್ ವೈದ್ಯೆ ಡಾ.ರಾಜೇಶ್ವರಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 8 ಮಂದಿ ದಾದಿಯರು ಇರಬೇಕಾಗಿದ್ದು ಮೂವರು ದಾದಿಯರು ಮಾತ್ರ ಇದ್ದಾರೆ. ಕ್ಷ-ಕಿರಣ ತಂತ್ರಜ್ಞ ಹಾಗೂ 2 ಫಾರ್ಮಸಿಸ್ಟ್ ಹುದ್ದೆ ಖಾಲಿಯಿದ್ದು ಗುತ್ತಿಗೆ ಆಧಾರದ ಮೇಲೆ ಓರ್ವ ಫಾರ್ಮಸಿಸ್ಟ್ ನೇಮಕ ಮಾಡಲಾಗಿದೆ.

ಆರೋಗ್ಯ ಕೇಂದ್ರದ ಕಚೇರಿಗೆ 1 ಪ್ರಥಮ ದರ್ಜೆ ಸಹಾಯಕರ ಹುದ್ದೆ, 2 ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮಂಜೂರಾಗಿದ್ದರೂ ಆ ಹುದ್ದೆಗಳು ಭರ್ತಿಯಾಗಿಲ್ಲ. ಪ್ರಸ್ತುತ ಕಚೇರಿ ಅಧೀಕ್ಷಕ ಗಿರೀಶ್ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ಈ ಕೇಂದ್ರಕ್ಕೆ ಸಾಮಾನ್ಯವಾಗಿ ರಸ್ತೆ ಅಪಘಾತ, ಆತ್ಮಹತ್ಯೆ, ಹತ್ಯೆ ಮತ್ತಿತರ ಕಾರಣಗಳಿಂದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ತರಲಾಗುತ್ತದೆ. ಆದರೆ, ಇಲ್ಲಿನ ಶವಾಗಾರ ಶಿಥಿಲವಸ್ಥೆಯಲ್ಲಿದ್ದು ಶವ ಪರೀಕ್ಷೆ ಕಷ್ಟಸಾಧ್ಯವಾಗಿದೆ. ಈ ವಿಷಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಹಲವಾರು ಬಾರಿ ಪ್ರಸ್ತಾಪವಾಗಿ ಚರ್ಚಿಸಲ್ಪಟ್ಟಿದೆ. ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪವಾಗಿ, ದುರಸ್ತಿಪಡಿಸುವ ಆಶ್ವಾಸನೆ ದೊರೆತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ.

ಸಮಸ್ಯೆಗಳು ಹಲವಾರಿದ್ದರೂ, ಆರೋಗ್ಯ ಕೇಂದ್ರದ ಮುಂಭಾಗದಲ್ಲೇ ಮಾಡುತ್ತಿರುವ ತ್ಯಾಜ್ಯ ವಿಲೇವಾರಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಕೊಳೆತ ತ್ಯಾಜ್ಯದ ದುರ್ನಾತ ಸಹಿಸಲು ಅಸಾಧ್ಯವಾಗಿದ್ದು ಚಿಕಿತ್ಸೆಗಾಗಿ ಬರುವ ರೋಗಿಗಳ ಮೇಲೆ, ಕರ್ತವ್ಯ ನಿರ್ವಹಿಸುವ ವೈದ್ಯರು, ದಾದಿಯರು ಮತ್ತು ಸಿಬ್ಬಂದಿ ಮೇಲೂ ದುಷ್ಪರಿಣಾಮ ಬೀರುವ ಸಂಭವವಿದೆ.

ಕಸ ಹಾಕುವ ಜಾಗವನ್ನು ತೆರವು
ಗೊಳಿಸಲು ಹಲವಾರು ವರ್ಷಗಳಿಂದ ಪ್ರಯತ್ನ ನಡೆದಿದೆಯಾದರೂ ಪ್ರಯೋಜನವಾಗಲಿಲ್ಲ. ಆರೋಗ್ಯ ರಕ್ಷಾ ಸಭೆಯ ಅಧ್ಯಕ್ಷರು, ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ತ್ಯಾಜ್ಯ ವಿಲೇವಾರಿ ಜಾಗ ಸ್ಥಳಾಂತರವಾಗುತ್ತಲೇ ಇಲ್ಲ.

ಆರೋಗ್ಯ ಕೇಂದ್ರದ ವಾರ್ಡ್‌ಗಳು, ವೈದ್ಯಾಧಿಕಾರಿಗಳ ವಸತಿಗೃಹಗಳೂ ಶಿಥಿಲಾವಸ್ಥೆಯಲ್ಲಿವೆ. ಇವಕ್ಕೂ ದುರಸ್ತಿ ಭಾಗ್ಯ ಒದಗಿ ಬರಬೇಕಿದೆ. ಕೇಂದ್ರದ ಸುತ್ತಲೂ ತಡೆಗೋಡೆ ನಿರ್ಮಾಣದ ಅಗತ್ಯವಿದೆ.

ಇದೊಂದು ಹೈಟೆಕ್ ಆಸ್ಪತ್ರೆಯಾಗಿದ್ದು ಸೌಲಭ್ಯಗಳಿದ್ದರೂ ರೋಗಿಗಳ ಸಂಖ್ಯೆಗೆ ತಕ್ಕಂತೆ ಪರೀಕ್ಷಿಸಿ, ಚಿಕಿತ್ಸೆ ನೀಡುವ ವೈದ್ಯರ, ದಾದಿಯರ ಕೊರತೆಯಿದೆ. ಸರ್ಕಾರದ ಅನುದಾನ ದೊರೆಯುತ್ತಿದ್ದರೂ ಸಮಸ್ಯೆಗಳು ಬಗೆಹರಿದಿಲ್ಲ. ಶನಿವಾರಸಂತೆ ಸುತ್ತಮುತ್ತ ಕೂಲಿಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಸಮಸ್ಯೆಗಳಿದ್ದರೂ ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುಂಭಾಗದಲ್ಲಿ ಸಿಬ್ಬಂದಿಗಳ ಶ್ರಮದಿಂದ ಸುಂದರ ಉದ್ಯಾನವನ ನಿರ್ಮಾಣವಾಗಿದೆ. ಆದ್ದರಿಂದ ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.