ADVERTISEMENT

ಡಿಸೆಂಬರ್‌ ಒಳಗೆ ಪಡೆಯಬೇಕಿದೆ ದೃಢೀಕರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 7:34 IST
Last Updated 20 ಸೆಪ್ಟೆಂಬರ್ 2025, 7:34 IST
ಕಾಫಿ ಬೀಜ
ಕಾಫಿ ಬೀಜ   

ಮಡಿಕೇರಿ: ಐರೋಪ್ಯ ಒಕ್ಕೂಟವು ಅರಣ್ಯ ಕಡಿತ ನಿರ್ಬಂಧ ನೀತಿಯಡಿ ಕಾಫಿ ಬೆಳೆಯನ್ನೂ ತಂದಿದ್ದು, ಭಾರತೀಯ ಕಾಫಿ ರಫ್ತು ವಲಯದಲ್ಲಿ ಕಂಪನ ಸೃಷ್ಟಿಸಿದೆ. 5 ವರ್ಷಗಳಿಂದ ಅರಣ್ಯ ನಾಶ ಮಾಡದೇ ಕಾಫಿ ಬೆಳೆಯಲಾಗುತ್ತಿದೆ ಎಂಬ ದೃಢೀಕರಣವಿದ್ದರೆ ಮಾತ್ರ ಐರೋಪ್ಯ ಒಕ್ಕೂಟ ಕಾಫಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

2025ರ ಡಿಸೆಂಬರ್‌ ಒಳಗೆ ದೃಢೀಕರಣ ಪಡೆಯದಿದ್ದರೆ, ಇಲ್ಲಿನ ಕಾಫಿಯನ್ನು ಒಕ್ಕೂಟ ಖರೀದಿಸುವುದಿಲ್ಲ. ಭಾರತದಿಂದ ಶೇ 50ರಷ್ಟು ಪ್ರಮಾಣದಲ್ಲಿ ಒಕ್ಕೂಟದ ದೇಶಗಳಿಗೆ ಕಾಫಿ ರಫ್ತಾಗುತ್ತಿರುವುದರಿಂದ ಇಲ್ಲಿನ ಬೆಳೆಗಾರರಲ್ಲಿ ಆತಂಕ ಮೂಡಿದೆ.

ಇದಕ್ಕಾಗಿಯೇ ಭಾರತೀಯ ಕಾಫಿ ಮಂಡಳಿಯು ‘ಇಂಡಿಯಾ ಕಾಫಿ ಆ್ಯಪ್’ ರೂಪಿಸಿದ್ದು, ಬೆಳೆಗಾರರು ನೋಂದಣಿ ಮಾಡಿಕೊಳ್ಳಬೇಕು. ಜೊತೆಗೆ, ತೋಟದ ಜಿಯೊಲೊಕೇಶನ್ ಅಪ್‌ಲೋಡ್ ಮಾಡಬೇಕು. ನಂತರ, ಸ್ಥಳೀಯ ಕಾಫಿ ವಿಸ್ತರಣಾಧಿಕಾರಿಯು ‘ಈ ಪ್ರದೇಶದಲ್ಲಿ ಅರಣ್ಯ ನಾಶವಾಗಿಲ್ಲ’ ಎಂದು ದೃಢೀಕರೀಸುತ್ತಾರೆ. ರಫ್ತುಗಾರರು ಅದರ ಪ್ರತಿಯೊಂದಿಗೆ ಕಾಫಿಯನ್ನು ಖರೀದಿಸಿ ರಫ್ತು ಮಾಡುತ್ತಾರೆ. ದೃಢೀಕರಣ ಇಲ್ಲದಿದ್ದರೆ ರಫ್ತುದಾರರು ಖರೀದಿಸುವುದಿಲ್ಲ.

ADVERTISEMENT

ಭಾರತೀಯ ಕಾಫಿಗೆ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಬ್ರೆಜಿಲ್ ಹಾಗೂ ವಿಯಟ್ನಾಂ ಜೊತೆಗೆ ಈಗ ಹೊಸದಾಗಿ ಉಗಾಂಡವೂ ಸೇರ್ಪ‍ಡೆಯಾಗಿದೆ. ಉಗಾಂಡದಲ್ಲಿ ಉತ್ತಮ ಗುಣಮಟ್ಟದ ಕಾಫಿ ಬೆಳೆಯಲಾಗುತ್ತಿದ್ದು, ಇದು ಭಾರತೀಯ ಕಾಫಿಗೆ ಅತಿ ದೊಡ್ಡ ಪ್ರತಿಸ್ಪರ್ಧಿಯಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಒಂದು ವೇಳೆ ಭಾರತೀಯ ಕಾಫಿಯು ಯಾವುದೇ ಕಾರಣಕ್ಕೆ ತಿರಸ್ಕೃತಗೊಂಡರೆ ಆ ಸ್ಥಾನವನ್ನು ಉಗಾಂಡ ಹಾಗೂ ಇನ್ನಿತರ ದೇಶಗಳು ಕಬಳಿಸುವ ಸಾಧ್ಯತೆ ಇದೆ. ಹಾಗಾಗಿ, ಗಡುವಿನ ಒಳಗೆ ಐರೋಪ್ಯ ಒಕ್ಕೂಟದ ಅರಣ್ಯ ಕಡಿತ ನಿರ್ಬಂಧ ನೀತಿಗೆ ಅನುಗುಣವಾದ ದೃಢೀಕರಣ ಭಾರತೀಯ ಕಾಫಿ ಬೆಳೆಗಾರರಿಗೆ ದೊರಕಬೇಕಿದೆ. 

ಕಾಫಿ ಬೀಜಗಳನ್ನು ವಿವಿಧ ವಿನ್ಯಾಸದಲ್ಲಿ ಅಲಂಕರಿಸಲಾಗಿತ್ತು

ದೃಢೀಕರಣ ಪಡೆಯುವುದು ಹೇಗೆ? ಬೆಳೆಗಾರರು ನೇರವಾಗಿ ಐರೋಪ್ಯ ಒಕ್ಕೂಟದ ಮಾರುಕಟ್ಟೆಗೆ ಕಾಫಿ ರಫ್ತು ಮಾಡುತ್ತಿದ್ದರೆ ಅಥವಾ ಕಾಫಿಯನ್ನು ರಫ್ತು ಮಾಡುವ ವ್ಯಾಪಾರಿಗೆ ಮಾರಾಟ ಮಾಡುತ್ತಿದ್ದರೆ 2020 ಡಿಸೆಂಬರ್ 31ರ ನಂತರ ಅರಣ್ಯ ನಾಶವಾದ ಪ್ರದೇಶದಲ್ಲಿ ಕಾಫಿ ಬೆಳೆದಿಲ್ಲ ಎಂಬ ದೃಢೀಕರಣವನ್ನು ಈ ವರ್ಷದ ಡಿಸೆಂಬರ್‌ ಒಳಗೆ ಪಡೆಯಲೇಬೇಕು. ರೈತರು ತಮ್ಮ ಮೊಬೈಲ್‌ನಲ್ಲಿ ‘ಇಂಡಿಯಾ ಕಾಫಿ ಆಪ್’ ಅನ್ನು ಡೌನ್‌ಲೋಡ್ ಮಾಡಿ ಆ್ಯಪ್‌ನಲ್ಲಿ ಬೆಳೆಗಾರರಾಗಿ ನೋಂದಾಯಿಸಿಕೊಳ್ಳಬೇಕು. ತೋಟದ ವಿಸ್ತೀರ್ಣವು 4 ಹೆಕ್ಟೇರ್‌ಗಿಂತ ಕಡಿಮೆ ಇದ್ದರೆ ಸ್ಥಳಾಂಕ (ಜಿಯೊಲೊಕೇಶನ್) 4 ಹೆಕ್ಟೇರ್ ಅಥವಾ ಹೆಚ್ಚು ಇದ್ದರೆ ಬಹುಭುಜ ಆಕಾರ (ಪಾಲಿಗಾನ್) ರಚಿಸಬೇಕು. ಇದನ್ನು ಸ್ಥಳೀಯ ಕಾಫಿ ಮಂಡಳಿ ವಿಸ್ತರಣಾ ಅಧಿಕಾರಿ ಪರಿಶೀಲಿಸಿ ದೃಢೀಕರಿಸುತ್ತಾರೆ. ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.