ADVERTISEMENT

ಮಡಿಕೇರಿ: ಕಾಂಗ್ರೆಸ್‌ನಿಂದ ‘ಮತ ಕಳ್ಳತನ ನಿಲ್ಲಿಸಿ’ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 3:10 IST
Last Updated 13 ಅಕ್ಟೋಬರ್ 2025, 3:10 IST
ಮತ ಕಳ್ಳತನ ಕುರಿತು ಮಡಿಕೇರಿಯ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಭಾನುವಾರ ಕೊಡಗು ಜಿಲ್ಲಾ ಕಾಂಗ್ರೆಸ್  ಸಹಿ ಸಂಗ್ರಹ ಅಭಿಯಾನ ಆರಂಭಿಸಿತು
ಮತ ಕಳ್ಳತನ ಕುರಿತು ಮಡಿಕೇರಿಯ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಭಾನುವಾರ ಕೊಡಗು ಜಿಲ್ಲಾ ಕಾಂಗ್ರೆಸ್  ಸಹಿ ಸಂಗ್ರಹ ಅಭಿಯಾನ ಆರಂಭಿಸಿತು   

ಮಡಿಕೇರಿ: ‘ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಹೊಸ ಹೆಸರಿನ ಸೇರ್ಪಡೆ ಮತ್ತು ಹೆಸರು ತೆಗೆಯುವ ಕುರಿತು ಹೆಚ್ಚಿನ ನಿಗಾ ವಹಿಸಬೇಕು’ ಎಂದು ಕಾಂಗ್ರೆಸ್‌ನ ಕೊಡಗು ಜಿಲ್ಲಾ ಘಟಕ ನಿರ್ಧರಿಸಿತು.

ಇಲ್ಲಿನ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ‘ಮತ ಕಳ್ಳತನ ನಿಲ್ಲಿಸಿ’ ಎಂಬ ಅಭಿಯಾನದ ಅಂಗವಾಗಿ ಭಾನುವಾರ ಸಹಿಸಂಗ್ರಹ ಅಭಿಯಾನ ನಡೆಯಿತು.

ಇದಕ್ಕೂ ಮುನ್ನ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಧರ್ಮಜಾ ಉತ್ತಪ್ಪ, ‘ಈ ಅಭಿಯಾನ ಕೇವಲ ನಗರಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ಬೂತ್‌ಮಟ್ಟದಲ್ಲೂ ಸಹಿ ಸಂಗ್ರಹಿಸಲಾಗುತ್ತದೆ. ಪ್ರತಿ ಕ್ಷೇತ್ರದಿಂದ ಸಂಗ್ರಹಿಸಿದ ಸಹಿಗಳನ್ನು ಕೆಪಿಸಿಸಿ ಅ. 31ರ ಒಳಗೆ ಕಳುಹಿಸಬೇಕಿದೆ. ಮತಕಳ್ಳತನ ಹೇಗೆ ದೇಶದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ ಎಂದು ಜನಸಾಮಾನ್ಯರಿಗೆ ತಿಳಿಸುವುದು ಈ ಅಭಿಯಾನದ ಉದ್ದೇಶ’ ಎಂದರು.

ADVERTISEMENT

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಬಿಜೆ‍ಪಿ ಅವಧಿಯಲ್ಲಿ ಆಗಿರುವ ಮತಕಳ್ಳತನ ಕುರಿತು ಜನರಲ್ಲಿ ಅರಿವು ಮೂಡಿಸಲೆಂದೇ ಈ ಅಭಿಯಾನ ಕೈಗೊಳ್ಳಲಾಗಿದ್ದು, ಜನಸಾಮಾನ್ಯರಿಗೆ ಎಲ್ಲರಿಗೂ ಇದು ಗೊತ್ತಾಗಬೇಕಿದೆ’ ಎಂದು ಹೇಳಿದರು.

ರಾಹುಲ್‌ ಗಾಂಧಿ ಈ ಕುರಿತು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸದೇ ಮರು ಪ್ರಶ್ನೆಗಳನ್ನು ಹಾಕುತ್ತಿದೆ ಎಂದು ಕಿಡಿಕಾರಿದರು.

‘ಶುದ್ಧವಾದ ಮತದಾರರ ಪಟ್ಟಿ ಇದ್ದಲ್ಲಿ ಶುದ್ಧವಾದ ಚುನಾವಣೆ ಸಾಧ್ಯ’ ಎಂದು ಪ್ರತಿಪಾದಿಸಿದ ಅವರು, ‘ಇಡೀ ಚುನಾವಣಾ ಪ್ರಕ್ರಿಯೆಯೇ ಶುದ್ಧವಾಗಬೇಕು’ ಎಂದರು.

ಮತ ಕಳ್ಳತನ ಕುರಿತು ಮಡಿಕೇರಿಯ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಭಾನುವಾರ ಕೊಡಗು ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷ ಧರ್ಮಜಾ ಉತ್ತಪ್ಪ ಸಹಿ ಹಾಕುವ ಮೂಲಕ ಸಹಿ ಸಂಗ್ರಹ ಅಭಿಯಾನ ಆರಂಭಿಸಿದರು

ಬೂತ್‌ಮಟ್ಟದ ಏಜೆಂಟರು ಎಚ್ಚರ ವಹಿಸಿ; ಮಂತರ್‌ಗೌಡ

ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಕಾಂಗ್ರೆಸ್‌ನ ಬೂತ್‌ ಮಟ್ಟದ ಏಜೆಂಟರು ಇನ್ನಾದರೂ ಎಚ್ಚರ ವಹಿಸಬೇಕು. ಮುಂಬರುವ ಚುನಾವಣೆಯ ವೇಳೆ ಮತಗಳ್ಳತನ ಆಗದಂತೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು. ಕೇಂದ್ರದ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕೇಂದ್ರ ಸರ್ಕಾರ ಹೇಗೆ ವಿರೋಧ ಪಕ್ಷಗಳ ನಾಯಕರನ್ನು ತುಳಿಯುತ್ತಿದೆ ಎನ್ನುವುದು ಗೊತ್ತಿರುವ ಸಂಗತಿ. ಇಂತಹ ಹೊತ್ತಿನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.