ಕುಶಾಲನಗರ: ರೈತರು ಹಾಗೂ ಹಿಂದುಳಿದ ಸಮುದಾಯವನ್ನು ಆರ್ಥಿಕ ಶೋಷಣೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಸಹಕಾರ ಸಂಘಗಳು ರೂಪುಗೊಂಡಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಾಮ ನಿರ್ದೇಶಿತ ನಿರ್ದೇಶಕ ಎನ್.ಗಂಗಣ್ಣ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋಆಪರೇಟಿವ್ ಮ್ಯಾನೇಜ್‌ಮೆಂಟ್ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಹಯೋಗದೊಂದಿಗೆ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ
ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡದ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ದೇಶದ ಬೆನ್ನೆಲುಬು. ಅವರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಹಕಾರ ಸಂಘಗಳನ್ನು ಆರಂಭಿಸಲಾಗಿದೆ. ರೈತ ಸಮುದಾಯ ಮೋಸ ಹೋಗದಂತೆ ತಡೆಯಬೇಕಿದೆ. ಅವರನ್ನು ಶೋಷಣೆ ಮುಕ್ತವಾಗಿಸಬೇಕು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಬ್ಯಾಂಕ್ ಖಾತೆಗಳಲ್ಲಿರುವ ಗ್ರಾಹಕರ ಹಣಕ್ಕೆ ಸೈಬರ್ ಕಳ್ಳರು ಕನ್ನ ಹಾಕುತ್ತಿದ್ದಾರೆ. ಈ ಬಗ್ಗೆ ಸಂಘದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಜಾಗೃತರಾಗಬೇಕು. ಗ್ರಾಹಕರಿಗೆ ಸುರಕ್ಷತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದ ಸಲಹೆ ನೀಡಿದರು.
ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯ ಭಾಗವಹಿಸುವಿಕೆ ಅತೀ ಮುಖ್ಯವಾಗಿದೆ. ಜೊತೆಗೆ ಈ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಸಹಕಾರ ಸಂಘಗಳಲ್ಲಿ ಸಿಗುವ ಸಾಲಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಸ್ವಂತ ದುಡಿಮೆಯೊಂದಿಗೆ ಲಾಭಾಂಶಗಳಿಸಿ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಮೈಸೂರು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲದ ಅಧ್ಯಕ್ಷ ಬಿ.ಕಾವೇರ ಮಾತನಾಡಿ, ಸಹಕಾರ ಮಹಾಮಂಡಲದ ವತಿಯಿಂದ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡದ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ತರಬೇತಿ ಆಯೋಜಿಸಿರುವುದು ಹೆಮ್ಮೆಯ ವಿಚಾರ. ಈ ತರಬೇತಿಯನ್ನು ವರ್ಷಕ್ಕೆ ಮೂರು ಬಾರಿ ಆಯೋಜಿಸಲು ಕ್ರಮ ಕೈಗೊಳ್ಳಬೇಕು. ವರ್ಷದ ಕೊನೆಯಲ್ಲಿ ಕಾಟಾಚಾರಕ್ಕಾಗಿ ತರಬೇತಿಯನ್ನು ನಡೆಸಬಾರದು. ಇದರಿಂದ ಶಿಬಿರಾರ್ಥಿಗಳಿಗೆ ಪ್ರಯೋಜನವಾಗಬೇಕು ಎಂದರು.
ಪರಿಶಿಷ್ಟ ವರ್ಗದ ಸಹಕಾರ ಸಂಘಗಳು ಕೇವಲ ಅರಣ್ಯ ಕಿರುಉತ್ಪನ್ನಗಳನ್ನು ಅವಲಂಬಿಸಿಕೊಳ್ಳಬಾರದು, ಕಾರವಾರ ಹಾಗೂ ಮಂಗಳೂರು ಲ್ಯಾಂಪ್ಸ್ ಸಹಕಾರ ಸಂಘಗಳು ಬ್ಯಾಂಕ್ ವ್ಯವಹಾರ ನಡೆಸುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿವೆ. ಅದೇ ರೀತಿಯ ಇತರೆ ಸಹಕಾರ ಸಂಘಗಳು ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರಗತಿಗೆ ಸಹಕಾರ ಸಂಘಗಳ ಪಾತ್ರವು ಬಹುಮುಖ್ಯವಾಗಿದೆ. ಅಲ್ಲದೆ ಸಹಕಾರ ವಲಯವು ರಾಷ್ಟ್ರದ ಅರ್ಥ ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಸಾರ್ವಜನಿಕ- ಖಾಸಗಿ ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದರ ಮೂಲಕ ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಘಗಳು ಶಿಕ್ಷಣ, ತರಬೇತಿ, ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅನುಕೂಲವಾಗುತ್ತಿದೆ. ಜಿಲ್ಲೆಯ ಯೂನಿಯನ್ ಬ್ಯಾಂಕ್ 12 ವರ್ಷಗಳಿಂದಲೂ ಸಹಕಾರ ಶಿಕ್ಷಣ ನಿಧಿಯನ್ನು ನೂರಕ್ಕೆ ನೂರರಷ್ಟು ಪಾವತಿಸಿದ್ದು, ರಾಜ್ಯದಲ್ಲಿ ಇದು ಏಕೈಕ ಜಿಲ್ಲೆಯಾಗಿದೆ. ರಾಜ್ಯ ಸಹಕಾರ ಒಕ್ಕೂಟದ ಮೂಲಕ ವಿವಿಧ ಹಂತಗಳಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು ತರಬೇತಿಯನ್ನು ಪಡೆಯುವ ಮೂಲಕ ಹೊಸ ಸಹಕಾರ ನಿಯಮಗಳನ್ನು ತಿಳಿದುಕೊಂಡು ಅಯಾಯ ಸಂಘಗಳನ್ನು ಅಭಿವೃದ್ಧಿ ಪಡಿಸಲು ಸಹಕಾರವಾಗುವುದು ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ ನಿರ್ದೇಶಕ ರವಿ ಬಸಪ್ಪ, ಸಂಯೋಜಕರಾದ ಮಡಿಕೇರಿಯ ಸಹಕಾರ ತರಬೇತಿ ಕೇಂದ್ರ ಪ್ರಾಂಶುಪಾಲೆ ಡಾ. ಆರ್. ಎಸ್. ರೇಣುಕಾ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಬೆಂಗಳೂರು ಸಹಕಾರ ಸಂಘಗಳ ನಿವೃತ್ತ ಹೆಚ್ಚುವರಿ ನಿಬಂಧಕ ಎಚ್.ಎಸ್.ನಾಗರಾಜಯ್ಯ ಅವರು ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ ಅಧಿಕಾರ, ಕರ್ತವ್ಯ ಹಾಗೂ ಸಹಕಾರ ಕಾನೂನಿನ ಬದಲಾವಣೆ ಕುರಿತು, ನಬಾರ್ಡ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ.ಗುಂಡೂರಾವ್ ಅವರು ನಾಯಕತ್ವದ ಗುಣಗಳು ಹಾಗೂ ಮಾನಸಿಕ ಒತ್ತಡ ನಿರ್ವಹಣೆ ಕುರಿತು, ಮಡಿಕೇರಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಪ್ಪ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಮೈಸೂರು ವಿಭಾಗ ಮಟ್ಟದ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಒಟ್ಟು 8. ಜಿಲ್ಲೆಯ ಸಹಕಾರ ಸಂಘಗಳ ಪರಿಶಿಷ್ಟ ಜಾತಿ, ಮತ್ತು ಪಂಗಡದ ಪದಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.
ನೇರ ನಾಮನಿರ್ದೇಶನಕ್ಕೆ ಒಪ್ಪಿಗೆ ನೀಡಲಿ
ಸಹಕಾರ ಸಂಘಗಳಲ್ಲಿ ಚುನಾಯಿತರಾಗದೇ ಉಳಿಯುವ ಪರಿಶಿಷ್ಟ ಜಾತಿ ಪಂಗಡ ಹಿಂದುಳಿದ ವರ್ಗ ಹಾಗೂ ಇತರೆ ಸಮುದಾಯದ ಮೂವರನ್ನು ನೇರವಾಗಿ ಸರ್ಕಾರ ನಾಮನಿರ್ದೇಶಿತ ಸದಸ್ಯನ್ನಾಗಿ ನೇಮಿಸುವ ಕಾಯ್ದೆ ಜಾರಿಗೆ ತರಲು ಉದ್ದೇಶಿಸಿದ್ದು ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಾಮ ನಿರ್ದೇಶಿತ ನಿರ್ದೇಶಕ ಎನ್.ಗಂಗಣ್ಣ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.