ADVERTISEMENT

ಕೊಡಗು: ಹಣ್ಣಾದ ಕಾಫಿ ಬೀಜ ಮಣ್ಣು ಪಾಲು

ಲೋಕೇಶ್ ಡಿ.ಪಿ
Published 24 ಅಕ್ಟೋಬರ್ 2022, 21:00 IST
Last Updated 24 ಅಕ್ಟೋಬರ್ 2022, 21:00 IST
   

ಸೋಮವಾರಪೇಟೆ (ಕೊಡಗು): ಚಳಿಗಾಲದ ಹೊಸ್ತಿಲಲ್ಲೂ ಕೊಡಗು ಜಿ‌ಲ್ಲೆಯಲ್ಲಿ ಮಳೆಗಾಲ ಮುಂದುವರಿದಿದೆ. ಜಿಲ್ಲೆಯಲ್ಲಿ ಕಾಫಿ ಬೀಜ ಹಣ್ಣಾಗಿದೆ. ಬೆಳೆಗಾರರುಅತ್ತ ಕೊಯ್ಯಲಾಗದೇ, ಗಿಡದಲ್ಲಿ ಬಿಡಲು ಆಗದೇ ಪರದಾಡುತ್ತಿದ್ದಾರೆ. ಕಾಫಿ ಹಣ್ಣುಗಳು ಉದುರಿ ಮಣ್ಣುಸೇರುತ್ತಿವೆ.

ತಾಲ್ಲೂಕಿನಲ್ಲಿಯೇ 28,590 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಅಂದಾಜು 1.07 ಲಕ್ಷ ಹೆಕ್ಟೇರ್‌ನಲ್ಲಿ ಕಾಫಿ ಕೃಷಿ ಇದೆ.
ಸೆ‍ಪ್ಟೆಂಬರ್‌ ಮತ್ತು ಅಕ್ಟೋಬರ್‌ನಿಂದಲೇ ಅರೇಬಿಕಾ ಕಾಫಿ ಹಣ್ಣಾಗಲು ಪ್ರಾರಂಭವಾಗಿದೆ. ನಿರಂತರ ಮಳೆಯಿಂದಾಗಿ ಗಿಡದಿಂದ ಕಾಫಿ ಬೀಜ ಬಿಡಿಸಲೂ ಸಾಧ್ಯವಾಗುತ್ತಿಲ್ಲ. ಉದುರುತ್ತಿರುವ ಕಾಫಿ ಹಣ್ಣುಗಳು ಪಕ್ಷಿಗಳ ಪಾಲಾಗುತ್ತಿವೆ.

ಇಲ್ಲಿಯವರೆಗೂ ಹೆಚ್ಚಿನ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಕಳೆ ತೆಗೆಯುವುದು ಸೇರಿದಂತೆ, ನಿಯಮಿತವಾಗಿ ಕೃಷಿ ಚಟುವಟಿಕೆಯೂ ಸಾಧ್ಯವಾಗಿಲ್ಲ.

ADVERTISEMENT

‘ಗಿಡದಿಂದ ಕಾಫಿ ಬಿಡಿಸಿದರೂ, ಒಣಗಿಸಲು ಮಳೆ ಬಿಡುವು ನೀಡುತ್ತಿಲ್ಲ. ಇದರಿಂದ ಗುಣಮಟ್ಟ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾಫಿ ಬೆಳೆಗಾರ, ಗಣಗೂರು ಗ್ರಾಮದ ಕಿರಣ್ ಅವರು ತಿಳಿಸಿದರು.

‘ಹಣ್ಣು ಉದುರಿ ಮಣ್ಣು ಸೇರುತ್ತಿದೆ. ಮಳೆ ಏರಿಳಿತದಿಂದಾಗಿ ಹಲವೆಡೆಗಳಲ್ಲಿ ಕಾಫಿ ಮತ್ತು ಕಾಳು ಮೆಣಸು ಫಸಲು ಹಾಗೂ ಗಿಡಗಳು ನಾಶವಾಗಿವೆ’ ಎಂದು ಹೆಗ್ಗುಳ ಗ್ರಾಮದ ಕಾಫಿ ಬೆಳೆಗಾರಸತೀಶ್ ಅವರು ಮಾಹಿತಿ ನೀಡಿದರು.

ಕಾಫಿ ತೋಟದ ನಿರ್ವಹಣೆಕಷ್ಟಕರವಾಗುತ್ತಿದೆ. ಪ್ರಸಕ್ತ ವರ್ಷ 50 ಕೆ.ಜಿ. ತೂಕದ ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ಚೀಲಕ್ಕೆ ಈಗ ₹ 16 ಸಾವಿರದವರೆಗೆ ಬೆಲೆ ಇದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಅದರ ಲಾಭ ಬೆಳೆಗಾರರಿಗೆ ದಕ್ಕುತ್ತಿಲ್ಲ.

‘ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಕಾಫಿ ಕೃಷಿ ನಾಶವಾಗುವ ಹಂತತಲುಪಿದೆ. ಕಾಫಿ ಹೂ ಅರಳುವ ಸಂದರ್ಭದಲ್ಲಿ ಮಳೆ ಬೀಳುವುದಿಲ್ಲ. ಕೊಯ್ಲಿನ ಸಮಯದಲ್ಲೂ ಬೀಳುತ್ತಿದೆ. ಫಸಲು ಹಾನಿಯಿಂದಾದ ಬೆಳೆಗಾರರ ಕಷ್ಟವನ್ನು ಕೇಳುವವರು ಇಲ್ಲದಂತಾಗಿದೆ’ ಎಂದು ಸೋಮವಾರಪೇಟೆತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.