ADVERTISEMENT

ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳು ಹೊರಗೆ: ಪ್ರಧಾನಿಗೆ ಪತ್ರ, ಬಳಿಕ ತರಗತಿಗೆ!

ಶಾಲೆಯ ವಿರುದ್ಧ ಪೋಷಕರೊಬ್ಬರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೊಡಗು ಜಿಲ್ಲಾಧಿಕಾರಿಗೆ ದೂರು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 3:49 IST
Last Updated 9 ಡಿಸೆಂಬರ್ 2021, 3:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೋಣಿಕೊಪ್ಪಲು (ಕೊಡಗು): ಶಾಲೆಗೆ ಶುಲ್ಕ ಪಾವತಿಸಿಲ್ಲ ಎಂದು ಹೇಳಿ ವಿದ್ಯಾರ್ಥಿಗಳನ್ನು ಹೊರಕ್ಕೆ ಹಾಕಿದ್ದ ಶಾಲೆಯ ವಿರುದ್ಧ ಪೋಷಕರೊಬ್ಬರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೊಡಗು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿ ಮುತ್ತಣ್ಣ ಸೇರಿದಂತೆ 20 ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸದೇ ಗ್ರಂಥಾಲಯದಲ್ಲಿ ಕೂರಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಬೇಸರಗೊಂಡ ಮುತ್ತಣ್ಣ ಎಂಬ ವಿದ್ಯಾರ್ಥಿಯ ತಂದೆ ಬೆಳ್ಳಿಯಪ್ಪ ಡಿ.1ರಂದು ಪ್ರಧಾನ ಮಂತ್ರಿ ಕಚೇರಿಗೆ ಇ–ಮೇಲ್‌ ಮೂಲಕ ದೂರು ಸಲ್ಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಶಾಲೆಗೆ ತೆರಳಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಮುತ್ತಣ್ಣನನ್ನು ಅಜ್ಜಿಯೊಂದಿಗೆ ತಮ್ಮ ಕಚೇರಿಗೆ ಕರೆಸಿಕೊಂಡು ಮಾಹಿತಿ ಪಡೆದುಕೊಂಡರು. ಶಾಲೆಯ ಪ್ರಾಂಶುಪಾಲರೊಂದಿಗೆ ಚರ್ಚಿಸಿದ ಬಳಿಕ ವಿದ್ಯಾರ್ಥಿಯನ್ನು ತರಗತಿಗೆ ಸೇರಿಸಲಾಗಿದೆ.

ಧಾರವಾಡದಲ್ಲಿ ನೆಲೆಸಿರುವ ವಿದ್ಯಾರ್ಥಿಯ ತಂದೆ ಬೆಳ್ಳಿಯಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಈ ವರ್ಷ ₹60 ಸಾವಿರ ಕಟ್ಟಿದ್ದೇನೆ. ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಮತ್ತೆ ಶುಲ್ಕ ಏರಿಸಿದ್ದಾರೆ. ಅದರ ಬಗ್ಗೆ ಕೇಳಿದರೆ ಪ್ರಾಂಶುಪಾಲರು ಸರಿಯಾಗಿ ಉತ್ತರಿಸಲಿಲ್ಲ. ಕೇವಲ ವಾಟ್ಸ್‌ಆ್ಯಪ್‌ ಮೆಸೇಜ್ ಹಾಕಿದ್ದರು. ಹೀಗಾಗಿ ಬೇಸರದಿಂದ ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದೆ. ಈಗ ಮಗನನ್ನು ತರಗತಿಗೆ ಸೇರಿಸುತ್ತಿದ್ದಾರೆ. ಅಲ್ಲಿಂದ ಏನು ಸಂದೇಶ ಬಂದಿತ್ತೋ ಗೊತ್ತಿಲ್ಲ’ ಎಂದು ಹೇಳಿದರು. ಈ ಬಗ್ಗೆ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ADVERTISEMENT

‘ದೂರಿನ ಪ್ರತಿ ನನಗೆ ಸಿಕ್ಕಿಲ್ಲ. ಪರಿಶೀಲಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.