ADVERTISEMENT

ಕೊರೊನಾ ತಲ್ಲಣ: ಮದುವೆಗೂ ತಟ್ಟಿದ ಬಿಸಿ

ಕೆಲವೆಡೆ ಅದ್ಧೂರಿ ತಯಾರಿ, ಜನರಿಲ್ಲದೆ ಕುಗ್ಗಿದ ಸಂಭ್ರಮ, ನವ ವಧು– ವರರಿಗೂ ನಿರಾಸೆ

ವಿಕಾಸ್ ಬಿ.ಪೂಜಾರಿ
Published 15 ಮಾರ್ಚ್ 2020, 19:30 IST
Last Updated 15 ಮಾರ್ಚ್ 2020, 19:30 IST
ಮಡಿಕೇರಿಯ ಗೌಡ ಸಮಾಜದಲ್ಲಿ ಭಾನುವಾರ ವಿವಾಹ ಸಮಾರಂಭವೊಂದರಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಪಾಲ್ಗೊಂಡಿದ್ದರು   
ಮಡಿಕೇರಿಯ ಗೌಡ ಸಮಾಜದಲ್ಲಿ ಭಾನುವಾರ ವಿವಾಹ ಸಮಾರಂಭವೊಂದರಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಪಾಲ್ಗೊಂಡಿದ್ದರು      

ಮಡಿಕೇರಿ: ‘ಕೊರೊನಾ’ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದು ಹಾಗೂ ಸರ್ಕಾರದ ಮುನ್ನೆಚ್ಚರಿಕಾ ಕ್ರಮದ ಬಿಸಿಯು ಕೊಡಗಿನ ಮದುವೆ ಮನೆಗಳಿಗೂ ತಟ್ಟಿತ್ತು. ಮದುವೆ ಸಂಭ್ರಮಕ್ಕೆ ಕೊರೊನಾ ಅಡ್ಡಿ ಪಡಿಸಿದೆ. ಸಂಭ್ರಮವೇ ಮರೆಯಾಗಿತ್ತು.

ಇಲ್ಲಿನ ಗೌಡ ಸಮಾಜದಲ್ಲಿ ಭಾನುವಾರ ಗಗನ್ ಮತ್ತು ಮೈತ್ರಿ ವಿವಾಹ ಸಮಾರಂಭವೊಂದರಲ್ಲಿ ಬೆರಳಣಿಕೆಯಷ್ಟು ಜನರು ಮಾತ್ರ ಮದುವೆಗೆ ಆಗಮಿಸಿದ್ದರಿಂದ ಮದುವೆ ಮನೆಯೇ ಖಾಲಿ ಖಾಲಿಯಾಗಿತ್ತು.

ಮದುವೆ ಸಮಾರಂಭಕ್ಕೆ ಸಾಕಷ್ಟು ಜನ ಬರುವ ನಿರೀಕ್ಷೆಯಿಂದ ಮದುವೆಗೆ ಸಾಕಷ್ಟು ಖರ್ಚು ಮಾಡಿದ್ದೀವಿ. ಕೊರೊನಾ ಭಯಕ್ಕೆ ಹತ್ತಿರದ ನೆಂಟರಿಷ್ಟರೇ ಬಂದಿಲ್ಲ ಎಂಬುದು ಮಡಿಕೇರಿಯ ವಿವಾಹ ಸಂಭ್ರಮದಲ್ಲಿದ್ದಪೋಷಕರ ಅಳಲು.

ADVERTISEMENT

ಈ ಮೊದಲೇ ಎರಡು ಕುಟುಂಬಗಳು ನಿರ್ಧರಿಸಿದಂತೆ 1 ಸಾವಿರ ಆಮಂತ್ರಣ ಪತ್ರಗಳನ್ನು ನೆಂಟರಿಷ್ಟರು ಸೇರಿದಂತೆ ಸ್ನೇಹಿತರಿಗೆ ಹಂಚಿಕೆ ಮಾಡಲಾಗಿತ್ತು. ಸಾವಿರಾರು ಮಂದಿ ಬರುವ ನಿರೀಕ್ಷೆಯಿಂದ ಊಟೋಪಚಾರಕ್ಕೆ ಸಾಕಷ್ಟು ಖರ್ಚಾಗಿದೆ. ಮಧ್ಯಾಹ್ನ ಆದರೂ ಕೇವಲ ನೂರು ಮಂದಿ ಬಂದಿದ್ದಾರೆ ಎಂದು ಮದುವೆ ಆಯೋಜಕರು ಬೇಸರ ವ್ಯಕ್ತಪಡಿಸಿದರು.

ಅಡುಗೆ ಉಳಿಕೆ:

ಸಾವಿರಾರು ಮಂದಿ ಮದುವೆಗೆ ಬರುವ ನಿರೀಕ್ಷೆಯಿಂದ ಎಲ್ಲ ಬಗೆಯ ಸಾಂಪ್ರದಾಯಿಕಅಡುಗೆಗಳನ್ನು ಮಾಡಿಸಲಾಗಿತ್ತು. ಆದರೆ, ಜನರಿಲ್ಲದೇ ಮಾಡಿದ ಅಡುಗೆಗಳು ಉಳಿಕೆಯಾಗಿದೆ. ಇವುಗಳ ಬಳಕೆಗೆ ಅಗತ್ಯ ಸಹಕಾರ ಕೈಗೊಳ್ಳಲಾಗಿದೆ ಎಂದು ಕುಟುಂಬಸ್ಥರು ಹೇಳಿದರು. ಸುನಾಮಿಯಂತಹ ವೇಗವಾಗಿ ಕೊರೊನಾ ಹಬ್ಬುತ್ತಿದೆ‌. ಈ ಸಂದರ್ಭ ನಾವು ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ ಎಂದು ಹೇಳಿದರು.

ಆಮಂತ್ರಣ ಹಂಚಿದವರಿಗೂ ಗೊಂದಲ: ಇನ್ನು ಸರ್ಕಾರದ ಆದೇಶದಿಂದ ಈ ವಾರದಲ್ಲಿ ಮದುವೆ ನಿಶ್ಚಯವಾಗಿರುವವರ ಮದುವೆ ಸಿದ್ಧತೆಯ ಗೊಂದಲ ಒಂದೆಡೆಯಾದರೆ, ಮಾರ್ಚ್ ಕೊನೆಯ ವಾರ, ಏಪ್ರಿಲ್‌ ತಿಂಗಳಲ್ಲಿ ಮದುವೆ ನಡೆಸುವ ತಯಾರಿಯಲ್ಲಿರುವವರು ಆಮಂತ್ರಣ ವಿತರಣೆ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ.

ಚರ್ಚ್‌ನಲ್ಲಿ ಈಗ ತೀರ್ಥ–ಪ್ರಸಾದ ಕೈಗೆ!

ಭಾನುವಾರ ಕ್ರೈಸ್ತ ಬಾಂಧವರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಅದರಂತೆ ನಗರದ ಸೇಂಟ್ ಮೈಕಲರ ದೇವಾಲಯ ಸೇರಿದಂತೆ ಜಿಲ್ಲೆಯ ದೇವಾಲಯಗಳಲ್ಲಿ ಎಂದಿನಂತೆ ಭಕ್ತರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಚರ್ಚ್‌ನಲ್ಲೂ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿಬಾರಿ ಬಲಿಪೂಜೆ ಸಂದರ್ಭ ಪ್ರಸಾದವನ್ನು ಬಾಯಿಗೆ ನೀಡಲಾಗುತ್ತಿತ್ತು. ಆದರೆ, ಕೊರೊನಾ ಭೀತಿಯಿಂದ ಕೈಯಲ್ಲಿ ನೀಡಲಾಯಿತು. ಅಲ್ಲದೆ, ದೇವಾಲಯ ಪ್ರವೇಶಿಸುವ ಮುನ್ನ ತೀರ್ಥವನ್ನು ಇಡಲಾಗುತ್ತಿತ್ತು. ಭಕ್ತರು ಅದನ್ನು ಹಣೆಗೆ ಹಚ್ಚಿ ದೇವಾಲಯ ಪ್ರವೇಶಿಸುತ್ತಿದ್ದರು. ಎಲ್ಲರೂ ತೀರ್ಥ ಪಡೆಯಲು ಒಂದೇ ಕಪ್‌ಗೆ ಕೈ ಹಾಕುತ್ತಿದ್ದರಿಂದ ಅದನ್ನು ನಿಷೇಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.