ADVERTISEMENT

ಕೊರೊನಾ ಭಯಪಡುವ ಕಾಯಿಲೆಯೇ ಅಲ್ಲ: ಜಿಯಾ ಉಲ್ ಹುಸೇನ್

ಕೊರೊನಾ ಗೆದ್ದವರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 13:03 IST
Last Updated 18 ಜುಲೈ 2020, 13:03 IST
ಜಿಯಾ ಉಲ್ ಹುಸೇನ್
ಜಿಯಾ ಉಲ್ ಹುಸೇನ್   

'ಕೊರೊನಾ ಭಯಪಡುವಂತಹ ಕಾಯಿಲೆ ಅಲ್ಲ' ಎನ್ನುವುದು ಕೊರೊನಾ ಗೆದ್ದು ಬಂದ ವಿರಾಜಪೇಟೆಯಜಿಯಾ ಉಲ್ ಹುಸೇನ್ ಅವರ ಮನದ ಮಾತು. ಈಚೆಗಷ್ಟೇ ಚಿಕಿತ್ಸೆ ಪಡೆದು ಗುಣಮುಖರಾದ ಅವರು ತಮ್ಮ ಮನದಮಾತು ಹಂಚಿಕೊಂಡ ಬಗೆಯಿದು.

---

ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಾಗ ಸಾಕಷ್ಟು ಭಯವುಂಟಾಗಿತ್ತು. ಆದರೆ, ನಂತರದ ದಿನಗಳಲ್ಲಿ ಭಯವೇ ಇರಲಿಲ್ಲ. ಭಯಪಡುವ ಅಗತ್ಯವೂ ಇಲ್ಲ. ಕೊರೊನಾ ಭಯಪಡುವಂತಹ ಕಾಯಿಲೆಯೂ ಅಲ್ಲ.

ADVERTISEMENT

ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಾಗ ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್‌ಗೆ ಹೋದಾಗ, ಅಲ್ಲಿನ ವೈದ್ಯರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರು.

ಬಳಿಕ, ಆರೋಗ್ಯ ಇಲಾಖೆಯ ತಂಡವು ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿತು. ಮೂರ್ನಾಲ್ಕು ದಿನಗಳ ಬಳಿಕ ವರದಿ ಪಾಸಿಟಿವ್ ಬಂದಾಗ ಹೆದರಿಕೆಯಾಗಿತ್ತು. ನಂತರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು. ಅಲ್ಲಿ ಮೊದಲ 5 ದಿನ ವಿಟಮಿನ್ ‘ಸಿ’ ಸೇರಿದಂತೆ ವಿವಿಧ ಔಷಧವನ್ನು ನೀಡಲಾಗುತ್ತಿತ್ತು.

ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಆಗಾಗ ಬಂದು ಪ್ರೀತಿಯಿಂದ ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಇದರಿಂದ ಭಯದಿಂದ ಮುಕ್ತವಾಗಿ ಆರಾಮವಾಗಿ ಆಸ್ಪತ್ರೆಯಲ್ಲಿ ಇದ್ದೆ. ಬಿಸಿನೀರು ಹಾಗೂ ಹೊಟ್ಟೆತುಂಬಾ ಊಟ ಮಾಡಲು ಹೇಳುತ್ತಿದ್ದರು. ಆಹಾರದಲ್ಲಿ ಯಾವುದೇ ಪಥ್ಯವಿರಲಿಲ್ಲ.

ಕೇವಲ 5 ದಿನಗಳಲ್ಲಿ ನಾನು ಗುಣಮುಖನಾಗಿದ್ದೆ. 5 ದಿನಗಳ ಬಳಿಕ ನನ್ನನ್ನು 6 ದಿನಗಳ ಕಾಲ ವಸತಿ ಶಾಲೆಯೊಂದರಲ್ಲಿರಿಸಿ, ನಿಗಾ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಖಾಲಿ ಪ್ರದೇಶದಲ್ಲಿ ವಾಕಿಂಗ್ ಮಾಡುತ್ತಿದ್ದೆವು. ಬಳಿಕ ನಮ್ಮನ್ನು ಮನೆಗೆ ಕಳುಹಿಸಲಾಯಿತು. ವಿಟಮಿನ್ ‘ಸಿ’ ಮಾತ್ರೆಯನ್ನು ಕೆಲವು ದಿನಗಳವರೆಗೆ ಸೇವಿಸಲು ಸಲಹೆ ನೀಡಲಾಗಿದೆ. ಚಿಕಿತ್ಸೆಯ ಅವಧಿಯಲ್ಲಿ ಶುಚಿ– ರುಚಿಯಾದ ಉತ್ತಮ ಆಹಾರವನ್ನೇ ನಮಗೆ ನೀಡಲಾಗುತ್ತಿತ್ತು.

ಮನೆಗೆ ಹಿಂದಿರುಗಿದ ಸಂದರ್ಭ ಆತ್ಮೀಯ ಸ್ವಾಗತ ನೀಡಿದ ಪಟ್ಟಣದ ಶಾಂತಿನಗರ ನಿವಾಸಿಗಳು, ಸೀಲ್‌ಡೌನ್ ಸಂದರ್ಭದಲ್ಲೂ ನಮ್ಮ ಕುಟುಂಬಕ್ಕೆ ಸಾಕಷ್ಟು ಸಹಕಾರ ನೀಡಿರುವುದು ಸ್ಮರಣೀಯ. ಭಯ- ಆತಂಕ ದೂರ ಮಾಡಿ, ಆಗಾಗ ಬಿಸಿನೀರು ಹಾಗೂ ಆರೋಗ್ಯಕರವಾದ ಆಹಾರ ಸೇವಿಸಿದರೆ ಯಾವ ಸೋಂಕಿಗೂ ಭಯಪಡುವ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.