ADVERTISEMENT

ಕೊಡಗು: ಕೋವಿಡ್‌ –19 ಸೋಂಕಿತ ಗುಣಮುಖ, ಕೊಂಚ ನಿರಾಳ 

ಮಂಗಳವಾರ ಸಂಜೆ ವೇಳೆಗೆ ಕೇತುಮೊಟ್ಟೆಯ ಮನೆ ಸೇರಿದ ವ್ಯಕ್ತಿ

ಅದಿತ್ಯ ಕೆ.ಎ.
Published 8 ಏಪ್ರಿಲ್ 2020, 2:48 IST
Last Updated 8 ಏಪ್ರಿಲ್ 2020, 2:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‌ಮಡಿಕೇರಿ: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್‌ –19 ಸೋಂಕಿತ ವ್ಯಕ್ತಿ, ವಿರಾಜಪೇಟೆ ತಾಲ್ಲೂಕಿನ ಕೇತುಮೊಟ್ಟೆಯ ನಿವಾಸಿ ಗುಣಮುಖರಾಗಿದ್ದು ಜಿಲ್ಲೆಯ ಜನರು ಕೊಂಚ ನಿರಾಳರಾಗಿದ್ದಾರೆ.

ಮಂಗಳವಾರ ಸಂಜೆಯ ವೇಳೆಗೆ ಆ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಸ್ವಂತ ತಾವೇ ಕಾರು ಚಲಾಯಿಸಿಕೊಂಡು ಕೇತುಮೊಟ್ಟೆಯ ನಿವಾಸಕ್ಕೆ ಆ ವ್ಯಕ್ತಿ ತೆರಳಿದರು. ಅವರಿಗೆ 32 ವರ್ಷವಾಗಿತ್ತು.

ಸೋಂಕು ದೃಢಪಟ್ಟ ಬಳಿಕ ಕೊಡಗು ಜಿಲ್ಲೆಯಲ್ಲಿ ಆತಂಕದ ವಾತಾವರಣವಿತ್ತು. ಇದು ಕೊಡಗಿನಲ್ಲಿ ದೃಢಪಟ್ಟ ಮೊದಲ ಪ್ರಕರಣ. ಪ್ರಕರಣ ದೃಢವಾಗುತ್ತಿದ್ದಂತೆ ಜಿಲ್ಲಾಡಳಿತ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಿ ನಾಕಾಬಂದಿ ವಿಧಿಸಿತ್ತು. ಹೊರಗಿನವರಿಗೆ ಜಿಲ್ಲೆಯ ಪ್ರವೇಶ ನಿಷೇಧಿಸಲಾಯಿತು.

ADVERTISEMENT

ಆರೋಗ್ಯ ಇಲಾಖೆಯೂ ಮತ್ತಷ್ಟು ಜಾಗೃತಿ ವಹಿಸಿದ್ದರ ಪರಿಣಾಮ, ಸೋಂಕಿತರ ಸಂಖ್ಯೆಯನ್ನು ಅಲ್ಲಿಗೇ ಸ್ಥಗಿತ ಮಾಡಲು, ಇತರರಿಗೆ ಸೋಂಕು ಹರಡದಂತೆ ತಡೆಯಲು ಸಾಧ್ಯವಾಯಿತು. ಹೀಗಾಗಿ, ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

50 ಮಂದಿ ಪರೀಕ್ಷೆ:ಇಂಡಿಗೊ ವಿಮಾನದ ಮೂಲಕ ಈ ವ್ಯಕ್ತಿ, ಮಾರ್ಚ್‌ 15ರಂದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಂದೇ ಬೆಂಗಳೂರಿನ ಕೆಲವು ಕಡೆ ಓಡಾಟ ನಡೆಸಿ, ರಾಜಹಂಸ ಬಸ್‌ ಮೂಲಕ 16ರಂದು ಮುಂಜಾನೆ ಮೂರ್ನಾಡಿಗೆ ಬಂದಿದ್ದರು. ಅಲ್ಲಿಂದ ಕೇತುಮೊಟ್ಟೆಗೆ ತಲುಪಿದ್ದರು. ಅಂದೇ ಕಕ್ಕಬ್ಬೆ ಆಸುಪಾಸಿನಲ್ಲಿ ಸುತ್ತಾಟ ನಡೆಸಿದ್ದರು. ಮಸೀದಿಗೂ ತೆರಳಿದ್ದರು. ಮಾರ್ಚ್‌ 17ರಂದು ರೋಗದ ಲಕ್ಷಣ ಕಂಡುಬಂದ ಕಾರಣ ಅವರೇ ಖುದ್ದು ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.

ಪ್ರಕರಣ ದೃಢವಾದ ಮೇಲೆ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಸುತ್ತಾಟದ ಮಾಹಿತಿ ಅರಿತ ಜಿಲ್ಲಾಡಳಿತ ಸೋಂಕಿತ ವ್ಯಕ್ತಿ ಸಂಪರ್ಕಿಸಿದ್ದ ಕುಟುಂಬಸ್ಥರು, ಸ್ನೇಹಿತರನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು.

‘ವ್ಯಕ್ತಿ ನೇರವಾಗಿ ಸಂಪರ್ಕಿಸಿದ್ದ ಸುಮಾರು 50 ಮಂದಿಯ ತಪಾಸಣೆ ನಡೆಸಲಾಗಿತ್ತು. ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಯಲಕ್ಕೆ ಕಳುಹಿಸಿದ್ದೆವು. ಎಲ್ಲವೂ ನೆಗೆಟಿವ್‌ ಬಂದಿವೆ. ಜತೆಗೆ, ಸೋಂಕಿತ ವ್ಯಕ್ತಿಯ ಗುಣಮುಖರಾದ ಮೇಲೂ ಎರಡು ಬಾರಿ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿದ್ದೆವು. ಎರಡು ವರದಿಗಳೂ ನೆಗೆಟಿವ್‌ ಬಂದಿವೆ’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದರು.

*
ಗುಣಮುಖವಾದ ವ್ಯಕ್ತಿ ‌ಹೋಂ ಕ್ವಾರಂಟೈನ್‌ನಲ್ಲೇ ಇರಬೇಕು. ಕೇತುಮೊಟ್ಟೆ ಗ್ರಾಮಸ್ಥರಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ತಪಾಸಣೆಗೆ ಬರಬೇಕು.
– ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.