ADVERTISEMENT

ಕೊರೊನಾ ವೈರಸ್‌ಗೆ ಆತ್ಮವಿಶ್ವಾಸವೇ ಮೊದಲ ಮದ್ದು: ಕೋವಿಡ್‌ ವಿರುದ್ಧ ಗೆದ್ದ ಶರೀಫ್‌

ಶ.ಗ.ನಯನತಾರಾ
Published 21 ಜುಲೈ 2020, 19:30 IST
Last Updated 21 ಜುಲೈ 2020, 19:30 IST
ಶರೀಫ್
ಶರೀಫ್   

ಶನಿವಾರಸಂತೆ: ಭಯಪಡದೆ, ಆತ್ಮವಿಶ್ವಾಸದಿಂದ ಇದ್ದು ವೈದ್ಯರ ಸಲಹೆಗಳನ್ನು ಶ್ರದ್ಧೆಯಿಂದ ಪಾಲಿಸಿದರೆ ಯಾವ ಕಾಯಿಲೆಯಾದರೂ ಗುಣಪಡಿಸಿಕೊಳ್ಳಬಹುದು. ಕೋವಿಡ್- 19ನಿಂದ ಗುಣಮುಖನಾಗಿ ಪತ್ನಿ, ಮಕ್ಕಳ ಜತೆ ಶಿರಂಗಾಲ ಗ್ರಾಮದ ಮನೆಯಲ್ಲಿ ಕಾಲ ಕಳೆಯುತ್ತಿದ್ದೇನೆ.

‘ನಾನೊಬ್ಬ ವ್ಯಾಪಾರಿ. ಗದಗ ಜಿಲ್ಲೆಗೆ ಹೋಗಿ ಬಂದು, ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದೆ. ಆದರೆ, ವೈದ್ಯರಾಗಲಿ, ಆಶಾ ಕಾರ್ಯಕರ್ತೆಯರಾಗಲಿ ಫಲಿತಾಂಶ ಬರುವವರೆಗೆ ಮನೆಯಲ್ಲಿ ಇರುವಂತೆ ಸೂಚಿಸಲೇ ಇಲ್ಲ. ವ್ಯಾಪಾರ ಮಾಡುತ್ತಿರುವಂತೆ ಕೊರೊನಾ ಪಾಸಿಟಿವ್ ಬಂದಿರುವುದು ತಿಳಿಯಿತು.

ಆರೋಗ್ಯ ಇಲಾಖೆಯ ಸೂಚನೆಯಂತೆ ಪತ್ನಿ, ಮಕ್ಕಳನ್ನು ಕರೆದುಕೊಂಡು ಮಡಿಕೇರಿ ಬಳಿಯ ಗಾಳಿಬೀಡಿನ ‘ಕೋವಿಡ್ ಕೇರ್‌ ಸೆಂಟರ್’‌ಗೆ ದಾಖಲಾದೆ. ನನಗೆ ಹಾಗೂ ಇಬ್ಬರು ಮಕ್ಕಳಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಲಭಿಸಿತು.

ADVERTISEMENT

ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ‘ಸಿ’ ವಿಟಮಿನ್ ಮಾತ್ರೆಗಳನ್ನು ಕೊಡುತ್ತಿದ್ದರು. ಜ್ವರ ಬಂದರೆ ಮಾತ್ರ ಪ್ಯಾರಾಸಿಟಾಮಲ್‌ ಮಾತ್ರೆ ಕೊಡುತ್ತಿದ್ದರು. ಪತ್ನಿಯು ಕಾಳುಮೆಣಸು, ಚಕ್ಕೆ, ಲವಂಗ, ಶುಂಠಿ, ಅರಿಸಿನ ಪುಡಿ ಮಾಡಿ ನಿಂಬೆರಸ ಬೆರೆಸಿ ಮಾಡಿದ ಕಷಾಯ ಮಾಡಿಕೊಡುತ್ತಿದ್ದಳು. ಜತೆಗೆ, ಬಿಸಿ ನೀರಿಗೆ ನಿಂಬೆರಸ, ಅರಿಸಿನ ಬೆರೆಸಿ ಆಗಾಗ್ಗೆ ಕುಡಿಯುತ್ತಿದ್ದೆವು. ಯಾವ ಆಹಾರವಾದರೂ ತಿನ್ನಬಹುದಿತ್ತು.

ಗುಣವಾಗುತ್ತದೆ ಎಂಬ ಭರವಸೆಯೊಂದಿಗೆ ವೈದ್ಯರ ಸಲಹೆಯನ್ನು ಶ್ರದ್ಧೆಯಿಂದ ಪಾಲಿಸಿದರೆ ಖಂಡಿತಾ ಗುಣಮುಖ ಆಗಬಹುದು. ಮನೆಗೆ ವಾಪಸ್ ಆಗಿ 9 ದಿನ ಕಳೆದಿವೆ. ಕಷಾಯ, ಬಿಸಿನೀರು ನಿತ್ಯದ ರೂಢಿಯಾಗಿದೆ. ಕೊರೊನಾ ಭಯಪಡುವ ಕಾಯಿಲೆಯೇ ಅಲ್ಲ. ವೈದ್ಯರ ಚಿಕಿತ್ಸೆಗೆ ಸ್ಪಂದಿಸಿ, ಪಾಲಿಸಿದರೆ ಗುಣಮುಖರಾಗುವುದು ಸತ್ಯ ಸಂಗತಿ. ಮುಖ್ಯವಾಗಿ ಗುಣಮುಖರಾಗಿ ಬರುವ ಕೊರೊನಾ ಸೋಂಕಿತರನ್ನು ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕು.

ಶರೀಫ್, ವ್ಯಾಪಾರಿ, ಶಿರಂಗಾಲ ಗ್ರಾಮ, ಶನಿವಾರಸಂತೆ ಸಮೀಪ, ಕೊಡ್ಲಿಪೇಟೆ ಹೋಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.