ADVERTISEMENT

ಕೊಡಗಿನಲ್ಲಿ ಶಿಕ್ಷಕರಿಗೂ ತಳಮಳ, ಆಸ್ಪತ್ರೆಗೆ ಆಟೊ ಚಾಲಕ

ಆತಂಕ ತಂದ ಕೋವಿಡ್‌–19 ಬಾಧಿತ ವ್ಯಕ್ತಿ ಓಡಾಟ, ದರ್ಗಾಕ್ಕೂ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 13:07 IST
Last Updated 20 ಮಾರ್ಚ್ 2020, 13:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ದುಬೈನಿಂದ ಬಂದಿದ್ದ, ಕೋವಿಡ್‌–19 ಬಾಧಿತ ವ್ಯಕ್ತಿಯು ಕೊಡಗು ಜಿಲ್ಲೆಯ ಹಲವು ಪ್ರದೇಶಕ್ಕೆ ಭೇಟಿ ಕೊಟ್ಟಿರುವುದು ಆತಂಕ ತಂದೊಡ್ಡಿದೆ. ಆ ವ್ಯಕ್ತಿಯ ಸಂಪರ್ಕ ಹೊಂದಿರುವವರ ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವುದು ಜಿಲ್ಲಾಡಳಿತಕ್ಕೂ ಸವಾಲಾಗಿದೆ.

‘ಸುಮಾರು 300 ಜನರನ್ನು ಆ ವ್ಯಕ್ತಿ ಸಂಪರ್ಕಿಸಿದ್ದರು’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮಾಹಿತಿ ನೀಡಿದ್ದರೂ, ಅದಕ್ಕೂ ಹೆಚ್ಚಿನ ಜನರು ಸಂಪರ್ಕಕ್ಕೆ ಬಂದಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ.

ಮಾರ್ಚ್ 15ರಂದು ಬೆಂಗಳೂರಿನಿಂದ ಸೋಂಕಿತ ವ್ಯಕ್ತಿ ಬಂದಿದ್ದ ರಾಜಹಂಸ ಬಸ್‌ನಲ್ಲಿ 33 ಪ್ರಯಾಣಿಕರಿದ್ದರು. ಬೆಂಗಳೂರಿನಲ್ಲಿ ತರಬೇತಿಗೆ ತೆರಳಿದ್ದ ಜಿಲ್ಲೆಯ ಶಿಕ್ಷಕಿಯೊಬ್ಬರು ಇದೇ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾರೆ. ಉಳಿದವರು ಸೀಟ್‌ ಕಾಯ್ದಿರಿಸದೆ ಪ್ರಯಾಣ ಮಾಡಿದ್ದು ಅವರ ಪತ್ತೆ ಸಾಧ್ಯವಾಗಿಲ್ಲ. ತಾವೇ ಖುದ್ದು ಹತ್ತಿರದ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ.

ADVERTISEMENT

ಸೋಂಕಿತ ವ್ಯಕ್ತಿಯು ಮೂರ್ನಾಡಿನಿಂದ ಕೊಂಡಂಗೇರಿಯ ಮನೆಗೆ ಆಟೊದಲ್ಲಿ ತೆರಳಿದ್ದು ಆಟೊ ಚಾಲಕನಿಗೂ ರೋಗ ಲಕ್ಷಣ ಕಾಣಿಸಿದ್ದು, ಜಿಲ್ಲಾ ಆಸ್ಪತ್ರೆ ಐಸೋಲೇಷನ್‌ ವಾರ್ಡ್‌ನಲ್ಲಿ ನಿಗಾ ವಹಿಸಲಾಗಿದೆ. ಅದೇ ಆಟೊದಲ್ಲಿ ಮಾರ್ಚ್‌ 16ರ ಸಂಜೆ ಕೊಂಡಂಗೇರಿ ಶಾಲೆಯ ಮೂವರು ಶಿಕ್ಷಕರು ಪ್ರಯಾಣ ಮಾಡಿದ್ದರು. ಆ ಶಿಕ್ಷಕರೂ ಬಿಇಒ ಕಚೇರಿಯೂ ಸೇರಿದಂತೆ ಹಲವು ಕಡೆ ಭೇಟಿ ಕೊಟ್ಟಿದ್ದಾರೆ.

ಶಿಕ್ಷಕರಿಗೆ ಮನೆಯಲ್ಲೇ ನಿಗಾ

‘ಬಸ್‌ನಲ್ಲಿ ಪ್ರಯಾಣ ಮಾಡಿದ್ದ ಶಿಕ್ಷಕಿ, ದುಬಾರೆ ಶಾಲೆಯೊಂದಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು ಅಲ್ಲಿ ನಾಲ್ವರು ಶಿಕ್ಷಕರು ಹಾಗೂ ಒಬ್ಬ ಸಿಆರ್‌ಪಿ ಇವರ ಸಂಪರ್ಕಕ್ಕೆ ಬಂದಿದ್ದರು. ಅವರಿಗೂ ಸೋಂಕಿನ ಶಂಕೆ ವ್ಯಕ್ತವಾಗಿದ್ದು ಮನೆಯಲ್ಲೇ ನಿಗಾ ಇಡಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಮಾಹಿತಿ ನೀಡಿದರು.

‘ಸೋಂಕಿತ ವ್ಯಕ್ತಿ ಒಂದು ದಿನ ವಾಸ್ತವ್ಯ ಮಾಡಿದ್ದ ಕೊಂಡಂಗೇರಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 32 ಶಿಕ್ಷಕರಿಗೂ ಮನೆಯಲ್ಲೆ ಇರುವಂತೆ ಸೂಚಿಸಲಾಗಿದೆ’ ಎಂದರು.

ದರ್ಗಾಕ್ಕೂ ಭೇಟಿ: ಸೋಂಕಿತ ವ್ಯಕ್ತಿಯು ಕುಂಜಿಲ ಗ್ರಾಮದ ಸಹೋದರಿ ಮನೆಗೆ ಹೋಗಿದ್ದರು. ಅಲ್ಲಿಂದ ಕುಂಜಿಲ ದರ್ಗಾದಲ್ಲೂ ಹಲವರ ಸಂಪರ್ಕ ಮಾಡಿರುವುದು ಬೆಳಕಿಗೆ ಬಂದಿದೆ.

ಕೇತುಮೊಟ್ಟೆ ಗ್ರಾಮದ 75 ಮನೆಗಳಲ್ಲಿ 304 ಮಂದಿ ವಾಸಿಸುತ್ತಿದ್ದು, 500 ಮೀಟರ್ ವ್ಯಾಪ್ತಿಯನ್ನು ‘ಕಂಟೈನ್‍ಮೆಂಟ್ ಏರಿಯಾ’ ಎಂದು ಘೋಷಣೆ ಮಾಡಲಾಗಿದೆ. ಕೊಂಡಂಗೇರಿಯ 247 ಮನೆಗಳಲ್ಲಿ 1,054 ಮಂದಿ ವಾಸಿಸುತ್ತಿದ್ದು ಈ ಗ್ರಾಮದ ಭೌಗೋಳಿಕ ಪ್ರದೇಶವನ್ನು ‘ಬಫರ್ ಜೋನ್’ ಎಂದು ಜಿಲ್ಲಾಡಳಿತ ಘೋಷಿಸಿದೆ.

ಕೊಂಡಂಗೇರಿ ಹಾಗೂ ಕೇತುಮೊಟ್ಟೆಯಲ್ಲಿ ವಾಸ ಮಾಡುತ್ತಿರುವ ಜನರು ಹೊರ ಪ್ರದೇಶಕ್ಕೆ ಹೋಗುವಂತಿಲ್ಲ. ಹೊರಗಿನವರು ಈ ಪ್ರದೇಶಕ್ಕೆ ಬರುವಂತಿಲ್ಲ. ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.