ADVERTISEMENT

ದೈವನರ್ತನ ಮನರಂಜನೆಯಲ್ಲ: ಆಕ್ಷೇಪ

ದೈವರಾಧನೆಯನ್ನು ಮನರಂಜನೆಯ ವಸ್ತುವನ್ನಾಗಿ ಪರಿಗಣಿಸದಿರಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 4:06 IST
Last Updated 8 ಅಕ್ಟೋಬರ್ 2024, 4:06 IST

ಮಡಿಕೇರಿ: ‘ಮಡಿಕೇರಿ ದಸರೆ ಹಾಗೂ ಗೋಣಿಕೊಪ್ಪಲು ದಸರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೈವನರ್ತನವನ್ನು ಮನರಂಜನೆಗಾಗಿ ಬಳಸಿದ್ದು ಸರಿಯಲ್ಲ. ದೈವ ನರ್ತನವನ್ನು ಅಪಮಾನಿಸಲಾಗಿದೆ’ ಎಂದು ಕೊಡಗು ಜಿಲ್ಲಾ ದೈವಾರಾಧಕರು ಮತ್ತು ದೈವನರ್ತಕರ ಸಂಘ ಖಂಡಿಸಿದೆ.

‘ತುಳುನಾಡಿನ ಶ್ರದ್ಧಾ, ಭಕ್ತಿ ನಂಬಿಕೆಯ ದೈವಾರಾಧನೆ, ದೈವನರ್ತನಗಳು ಪ್ರದರ್ಶಕ ಕಲೆಗಳಲ್ಲ. ದಸರೆಯಂತಹ ಮಹೋನ್ನತ ಕಾರ್ಯಕ್ರಮದಲ್ಲಿ ಒಂದು ವರ್ಗದ ನಂಬಿಕೆಯನ್ನು ಮನರಂಜನೆಯ ವಸ್ತುವನ್ನಾಗಿ ಬಳಸಿದ್ದು ನೋವು ತಂದಿದೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಪಿ.ಎಂ.ರವಿ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದು ತುಳುನಾಡಿನ ನಂಬಿಕೆಯ ವಿಚಾರ. ದಸರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ಸಹಸ್ರಾರು ಮಂದಿಯ ಭಾವನೆಗಳಿಗೆ ಅಪಚಾರ ಎಸಗಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿಯಲ್ಲೂ ಇದನ್ನು ಬಳಸಲಾಗುತ್ತಿದೆ. ಇನ್ನು ಮುಂದೆ ಹೀಗೆ ಮನರಂಜನೆಯ ವಿಷಯನ್ನಾಗಿ ಪ್ರದರ್ಶಿಸಿದರೆ ಪ್ರತಿಭಟಿಸುತ್ತೇವೆ. ಕಾನೂನು ಹೋರಾಟವನ್ನೂ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ತುಳು ಹಾಡಿಗೆ ದೈವವೊಂದು ಕುಣಿಯುತ್ತಿರುವ, ಆವೇಶದಿಂದ ವರ್ತಿಸುತ್ತಿರುವ ನೃತ್ಯ ಪ್ರದರ್ಶಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.