ADVERTISEMENT

‘ಅಂಧಕಾಸುರನ ವಧೆ’ ನೋಡ ಬನ್ನಿ

ಬೆಳಕಿನ ದಸರೆಯ ಶೋಭಾಯಾತ್ರೆಯಲ್ಲಿ ‘ಆನಂದ ರಾಮಾಯಣ’ ದೃಶ್ಯಸವಿ

ಕೆ.ಎಸ್.ಗಿರೀಶ್
Published 28 ಸೆಪ್ಟೆಂಬರ್ 2025, 4:58 IST
Last Updated 28 ಸೆಪ್ಟೆಂಬರ್ 2025, 4:58 IST
ಮಡಿಕೇರಿಯ ದಂಡಿನ ಮಾರಿಯಮ್ಮ ದೇಗುಲ ಮಂಟಪ‍ವು ‘ಪರಶಿವನಿಂದ ಜಲಂಧರನ ಸಂಹಾರ’ದ ಕಥಾನಕವು ಈ ಹಿಂದಿನ ವರ್ಷಗಳಲ್ಲಿ ವ್ಯವಸ್ಥಿತವಾಗಿ ಪ್ರದರ್ಶಿಸಿ ಜನಮನ ಗೆದ್ದಿತು
ಮಡಿಕೇರಿಯ ದಂಡಿನ ಮಾರಿಯಮ್ಮ ದೇಗುಲ ಮಂಟಪ‍ವು ‘ಪರಶಿವನಿಂದ ಜಲಂಧರನ ಸಂಹಾರ’ದ ಕಥಾನಕವು ಈ ಹಿಂದಿನ ವರ್ಷಗಳಲ್ಲಿ ವ್ಯವಸ್ಥಿತವಾಗಿ ಪ್ರದರ್ಶಿಸಿ ಜನಮನ ಗೆದ್ದಿತು   

ಮಡಿಕೇರಿ: ‘ಬೆಳಕಿನ ದಸರೆ’ಯಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ 3ನೇಯದಾಗಿ ಹೊರಡುವ ಮಂಟಪ ದಂಡಿನ ಮಾರಿಯಮ್ಮ ಮಂಟಪ ಸಮಿತಿಯದ್ದು. ಈಗ ಈ ಸಮಿತಿ ಶತಮಾನೋತ್ಸವದ ಹೊಸ್ತಿಲಲ್ಲಿದೆ. 94 ವರ್ಷಗಳಿಂದ ಮಂಟಪ ಹೊರಡಿಸುತ್ತಿರುವ ಈ ಸಮಿತಿ ಇದೀಗ 95ನೇ ವರ್ಷಕ್ಕೆ ಕಾಲಿರಿಸಿದೆ.

ಈ ಬಾರಿ ‘ಶಿವನಿಂದ ಅಂಧಾಸುರನ ವಧೆ’ ಎಂಬ ಕಥಾಪ್ರಸಂಗವನ್ನು ಪ್ರಸ್ತುತಿಗಾಗಿ ಆಯ್ದುಕೊಂಡಿದೆ. ಒಟ್ಟು 14 ಕಲಾಕೃತಿಗಳಿದ್ದು, ಅವುಗಳಲ್ಲಿ ಒಂದು ಕಲಾಕೃತಿ ಬೃಹದ್ದಾಕಾರವಾಗಿದ್ದು, ಜನಮನವನ್ನು ಸೂರೆಗೊಳ್ಳಲಿದೆ. ಈ ಕಲಾಕೃತಿಗಳನ್ನು ಇಲ್ಲಿನ ಆನಂದ್ ಆರ್ಟ್ಸ್‌ನವರು ರೂಪಿಸುತ್ತಿದ್ದಾರೆ.

ದಿನೇಶ್ ನಾಯರ್ ಅವರ ಚಲವನವಲನ, ದಿಂಡಿಗಲ್ಲಿನ ಜೇಮ್ಸ್ ಅವರ ಲೈಟಿಂಗ್ಸ್, ಮುರುಳಿ ಅವರ ಫೈರ್ ವರ್ಕ್ಸ್, ಎವಿಎಂ ಸೌಂಡ್ ಸ್ಟುಡಿಯೊ, ಮಂಗಳೂರಿನ ವಿಕಾಸ್ ಅವರಿಂದ ಎಡಿಟಿಂಗ್ ಇದೆ ಎಂದು ಸಮಿತಿಯ ಸಹ ಖಜಾಂಚಿ ಅಭಿಜಿತ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅಧ್ಯಕ್ಷ ನಾಗರಾಜ್ ಅವರು ಮಾತನಾಡಿ, ‘ಈ ಬಾರಿ ಅತಿ ವಿಶಿಷ್ಟವಾಗಿ ಮಂಟಪದ ಕಥಾಪ್ರದರ್ಶನ ಇರಲಿದೆ’ ಎಂದರು

ಜಂಟಿ ಅಧ್ಯಕ್ಷರಾಗಿ ನಾಗರಾಜ್, ಕಿಶೋರ್‌ಬಾಬು, ಕಾರ್ಯದರ್ಶಿಯಾಗಿ ಎಂ.ಎಸ್.ಸತೀಶ್, ಖಜಾಂಚಿಯಾಗಿ ಪವನ್ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ಪ್ರದರ್ಶಿಸಿದ್ದ ‘ಕೌಶಿಕ ಮಹಾತ್ಮೆ’, ಅದಕ್ಕೂ ಮುಂಚಿನ ವರ್ಷದಲ್ಲಿ ‘ಪರಶಿವನಿಂದ ಜಲಂಧರನ ಸಂಹಾರ’ ಕಥಾನಕ ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ಪ್ರದರ್ಶಿಸಿದ್ದ ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ’ ಧರಿಸಿದ ಕಥಾನಕವು ಜನಮನಸೂರೆಗೊಂಡಿತ್ತು.

***

‘ಆನಂದ ರಾಮಾಯಣ’ದಲ್ಲಿ ದೊಡ್ಡ ಸಂಖ್ಯೆ ಕಲಾಕೃತಿಗಳು!

ದಶಮಂಟಪಗಳ ಶೋಭಾಯಾತ್ರೆಯಲ್ಲಿ 4ನೇಯದಾಗಿ ತೆರಳುವ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಈ ಬಾರಿ ತನ್ನ 63ನೇ ಮಂಟಪೋತ್ಸವದ ಸಂಭ್ರಮದಲ್ಲಿದೆ.

ಈ ಬಾರಿ ‘ಆನಂದ ರಾಮಾಯಣ’ ಕಥಾವಸ್ತುವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದೆ. ಇದರ ಬಹುದೊಡ್ಡ ವಿಶೇಷ ಎಂದರೆ, 23 ಕಲಾಕೃತಿಗಳಿರುವುದು. ಇಷ್ಟು ದೊಡ್ಡ ಸಂಖ್ಯೆ ಕಲಾಕೃತಿಗಳು ನಿಜಕ್ಕೂ ಅತ್ಯಮೋಘ ಎನಿಸಲು ಕಸರತ್ತುಗಳು ನಡೆಯುತ್ತಿವೆ.

ಈ ಕಲಾಕೃತಿಗಳಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ, ರಾಕ್ಷಸ ವೃಂದ ಹೀಗೆ ಸಾಲು ಸಾಲು ಕಲಾಕೃತಿಗಳು ಇರಲಿವೆ. ಈ ಕಲಾಕೃತಿಗಳ ಪೈಕಿ ಕುಂಭಕರ್ಣ ಕಲಾಕೃತಿಯೂ ಇದ್ದು, ಇದು ಸಹ ಸೂಜಿಗಲ್ಲಿನಂತೆ ಸೆಳೆಯುವ ಸಂಭವ ಇದೆ. ಈ ಎಲ್ಲ ಕಲಾಕೃತಿಗಳೆಲ್ಲವೂ ಮಡಿಕೇರಿ ಮತ್ತು ಮೈಸೂರು ಸಮೀಪದ ಉದ್ಭೂರಿನಲ್ಲಿ ರಚನೆಯಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಂಡಳಿಯ ಅಧ್ಯಕ್ಷ ಜಗದೀಶ್, ‘ಈ ಬಾರಿ ಮಂಟಪದ ಪ್ರದರ್ಶನ ಅತ್ಯಂತ ವಿಶೇಷವಾಗಿರಲಿದೆ’ ಎಂದರು.

ಕಳೆದ ಬಾರಿ ಮಂಡಲಿಯು ‘ಅರುಣಾಸುರ ವಧೆ’ ಹಾಗೂ ಅದಕ್ಕೂ ಮುಂಚಿನ ವರ್ಷದಲ್ಲಿ ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯ ಕಥಾ ಪ್ರಸಂಗವನ್ನು ಅತ್ಯಂತ ವೈಭವೋಪೇತವಾಗಿ ಪ್ರದರ್ಶಿಸಿ ಗಮನ ಸೆಳೆದಿತ್ತು.

ಚೌಡೇಶ್ವರಿ ದೇಗುಲವು ಅರುಣಾಸುರ ವಧೆ ಕಥಾ ಪ್ರಸಂಗವನ್ನು ಈ ಹಿಂದಿನ ವರ್ಷದಲ್ಲಿ ಪ್ರಸ್ತುತಪಡಿಸಿ ಗಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.