ADVERTISEMENT

ಕೊಡಗು: ತೀವ್ರಗೊಂಡ ಪ್ರತ್ಯೇಕ ಕ್ಷೇತ್ರದ ಕೂಗು

ಮೊದಲು ಮಂಗಳೂರು, ಈಗ ಮೈಸೂರು ಕ್ಷೇತ್ರದಲ್ಲಿರುವ ಕಾಫಿನಾಡು

ಕೆ.ಎಸ್.ಗಿರೀಶ್
Published 15 ಫೆಬ್ರುವರಿ 2024, 5:48 IST
Last Updated 15 ಫೆಬ್ರುವರಿ 2024, 5:48 IST
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ನಕ್ಷೆ
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ನಕ್ಷೆ   

ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡಬೇಕೆಂಬ ಕೂಗು ಬಲವಾಗುತ್ತಿದ್ದು, ಇದೇ ವೇಳೆ, ‘ಸಿಕ್ಕಿಂನ ವಿಧಾನಸಭೆಯಲ್ಲಿರುವ ‘ಸಂಘ’ ಎಂಬ ಅಗೋಚರ ಮತ ಕ್ಷೇತ್ರದಂತೆ, ಕೊಡಗಿಗೂ ಅಗೋಚರ ಮತಕ್ಷೇತ್ರ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ.

‘ಕ್ಷೇತ್ರ ಪುನರ್ ವಿಂಗಡನೆಯ ವೇಳೆ ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕಾಗಿ ಒತ್ತಾಯಿಸುವೆ’ ಎಂದು ಸಂಸದ, ಬಿಜೆಪಿಯ ಪ್ರತಾಪಸಿಂಹ ಹೇಳಿದ್ದರೆ, ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಸಿ.ನಾಣಯ್ಯ ಸಹ, ‘ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕಾಗಿ ಪಕ್ಷಾತೀತವಾದ ಒಗ್ಗಟ್ಟು ಪ್ರದರ್ಶಿಸಿ, ಹೋರಾಟ ನಡೆಸಬೇಕು’ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈ ಕುರಿತ ಚರ್ಚೆ ಮತ್ತಷ್ಟು ಕಾವು ಪಡೆದಿದೆ.

ತಮ್ಮ ಪ್ರತಿಪಾದನೆ ಕುರಿತು ಪ್ರತಿಕ್ರಿಯಿಸಿರುವ ಪ್ರತಾಪಸಿಂಹ, ‘ಚುನಾವಣೆ ಸಂದರ್ಭಕ್ಕಾಗಿ ಹೇಳಿಕೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ನಡೆಯುವ ಕ್ಷೇತ್ರ ಪುನರ್‌ ವಿಂಗಡನೆಯ ವೇಳೆ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಕೊಡಿಸಲು ಪ್ರಯತ್ನಿಸುವೆ’ ಎಂದು ಹೇಳಿದ್ದಾರೆ.

ADVERTISEMENT

‘ಈಚೆಗಷ್ಟೇ ಜಿಲ್ಲಾಧಿಕಾರಿ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 4,63,414 ಮತದಾರರಿದ್ದಾರೆ. ಅದಕ್ಕಿಂತಲೂ ಕಡಿಮೆ ಮತದಾರರುಳ್ಳ ಲಕ್ಷದ್ವೀಪ, ಡಾರ್ಜಿಲಿಂಗ್‌ನಲ್ಲಿ ಪ್ರತ್ಯೇಕ ಲೋಕಸಭಾ ಸ್ಥಾನಗಳಿವೆ. ಅವುಗಳಂತೆ ಕೊಡಗು ಸಹ ವಿಶಿಷ್ಟ ಸಂಸ್ಕೃತಿ, ಪ್ರಾದೇಶಿಕತೆ, ಭಾಷೆ, ಜನಾಂಗವನ್ನು ಹೊಂದಿದೆ. ಈ ಆಧಾರದ ಮೇಲಾದರೂ ಪ್ರತ್ಯೇಕ ಸ್ಥಾನ ಬೇಕು’ ಎಂದು ವಿವಿಧ ಸಂಘಟನೆಗಳು ಪ್ರತಿಪಾದಿಸುತ್ತಿವೆ.

ಕೊಡಗು ರಕ್ಷಣಾ ವೇದಿಕೆಯು ಪಕ್ಷಾತೀತವಾಗಿ ಮುಖಂಡರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತಿದೆ. ಜೊತೆಗೆ, ತನ್ನದೇ ಸುಮಾರು 300ಕ್ಕೂ ಅಧಿಕ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಪ್ರತ್ಯೇಕ ಕ್ಷೇತ್ರದ ಕಹಳೆಯನ್ನು ಜೋರಾಗಿಯೇ ಮೊಳಗಿಸುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ, ‘ಈ ಹಿಂದೆ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ತನ್ನ ಅಸ್ಮಿತೆಗಳನ್ನು ಕಳೆದುಕೊಂಡು ಸ್ವತಂತ್ರ ಲೋಕಸಭಾ ಕ್ಷೇತ್ರಕ್ಕೆ ಅಂಗಲಾಚುವ ಪರಿಸ್ಥಿತಿ ಬಂದಿರುವುದು ದುರ್ದೈವ. ಮಂಗಳೂರು, ಮೈಸೂರಿನಂತಹ ಬಲಾಢ್ಯ ಜಿಲ್ಲೆಗಳ ನಡುವೆ ಕೊಡಗು ಮಂಕಾಗಿದೆ. ಪ್ರತ್ಯೇಕ ಕ್ಷೇತ್ರದ ಅಗತ್ಯದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲ, ಜಿಲ್ಲೆಯ ಹೋಬಳಿಮಟ್ಟದಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರತಾಪಸಿಂಹ
1952ರಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರ ಹೊಂದಿದ್ದ ಜಿಲ್ಲೆ 1957ರಲ್ಲಿ ಲೋಕಸಭಾ ಸ್ಥಾನ ರದ್ದು 1969ರ ನಂತರ ಲೋಕಸಭೆಗೆ ಕೊಡವರ ಪ್ರವೇಶ ಇಲ್ಲ
ಅದ್ಯಶ್ಯ ಅಮೂರ್ತ ಕ್ಷೇತ್ರಕ್ಕಾಗಿ ಒತ್ತಾಯ!
‘ಸಿಕ್ಕಿಂನ ವಿಧಾನಸಭೆಯಲ್ಲಿ ‘ಸಂಘ’ ಎಂಬ ಅಗೋಚರ ಮತ ಕ್ಷೇತ್ರವಿದೆ. ಬೌದ್ಧ ಭಿಕ್ಷುಗಳಷ್ಟೇ ಸ್ಪರ್ಧಿಸಿ ಅವರಷ್ಟೇ ಮತದಾನ ಮಾಡುವಂತಹ ಈ ಕ್ಷೇತ್ರಕ್ಕೆ ಯಾವುದೇ ಭೌಗೋಳಿಕ ಗೆರೆಗಳಿಲ್ಲ. ಇಡೀ ಸಿಕ್ಕಿಂನಲ್ಲಿ ನೆಲೆಸಿರುವ ಬೌದ್ಧ ಭಿಕ್ಷುಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಇಂತಹ ಕ್ಷೇತ್ರವನ್ನು ಕೊಡವರಿಗೆ ನೀಡಬೇಕು’ ಎಂಬ ಹೋರಾಟವನ್ನು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ)ನಡೆಸುತ್ತಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ‘ಪ್ರತ್ಯೇಕ ಲೋಕಸಭಾ ಸ್ಥಾನಕ್ಕಿಂತ ಕೊಡವರಿಗೆಂದೇ ಮೀಸಲಾದ ಅಗೋಚರ ಕ್ಷೇತ್ರವನ್ನು ಸಿಕ್ಕಿಂನ ‘ಸಂಘ’ ಕ್ಷೇತ್ರದ ಮಾದರಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸೃಜಿಸಬೇಕು. ಅದಕ್ಕಾಗಿ ವರ್ಷದಲ್ಲಿ ಕನಿಷ್ಠ 25 ದಿನ ಸತ್ಯಾಗ್ರಹ ಮಾಡಿ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಚುನಾವಣಾ ಆಯೋಗಗಳಿಗೆ ಸಲ್ಲಿಸುತ್ತಿದ್ದೇವೆ’ ಎಂದು ಹೇಳಿದರು.
ರದ್ದಾದ ಪ್ರತ್ಯೇಕ ಕ್ಷೇತ್ರ
ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಮೊದಲ ಲೋಕಸಭಾ ಚುನಾವಣೆಯ ವೇಳೆ ತನ್ನದೇ ಲೋಕಸಭಾ ಕ್ಷೇತ್ರವನ್ನು ಹೊಂದಿತ್ತು. 1952ರ ಚುನಾವಣೆಯಲ್ಲಿ 94593 ಮತದಾರರಿದ್ದರು. ಕಾಂಗ್ರೆಸ್‌ನ ಎನ್.ಸೋಮಣ್ಣ ಆಯ್ಕೆಯಾಗಿದ್ದರು. ಕೊಡಗನ್ನು ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಿದಾಗ 1957ರಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ರದ್ದುಪಡಿಸಿ ಮಂಗಳೂರು ಕ್ಷೇತ್ರದೊಂದಿಗೆ ವಿಲೀನಗೊಳಿಸಲಾಯಿತು. ನಂತರ ಮಂಗಳೂರು ಕ್ಷೇತ್ರದಿಂದ ಬೇರ್ಪಡಿಸಿ ಕೊಡಗು ಜಿಲ್ಲೆಯನ್ನು ಮೈಸೂರಿನೊಂದಿಗೆ ಸೇರಿಸಲಾಯಿತು. ಮಂಗಳೂರು ಕ್ಷೇತ್ರದೊಂದಿಗೆ ಸೇರಿದ್ದಾಗ 1969ರ ಚುನಾವಣೆಯಲ್ಲಿ ಕೊಡಗಿನ ಸಿ.ಎಂ.ಪೂಣಚ್ಚ ಗೆದ್ದು ಕೇಂದ್ರದಲ್ಲಿ ಸಚಿವರಾಗಿದ್ದರು. 1971ರಲ್ಲಿ ಸೋತರು. ನಂತರ ಕೊಡಗಿನ ಯಾರೊಬ್ಬರಿಗೂ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಟಿಕೆಟ್ ನೀಡಿಲ್ಲ. ಇದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.