ADVERTISEMENT

ಅಮೃತ್ ಯೋಜನೆ ಕಾಮಗಾರಿ; ನಾಗರಿಕರಿಗೆ ಕಿರಿಕಿರಿ

ವ್ಯವಸ್ಥಿತವಾಗಿ ನಡೆದಿಲ್ಲ ಕಾಮಗಾರಿ, ದುಸ್ತರವಾಗಿದೆ ವಾಹನ ಸವಾರಿ

ಡಿ.ಪಿ.ಲೋಕೇಶ್
Published 30 ಮೇ 2025, 7:01 IST
Last Updated 30 ಮೇ 2025, 7:01 IST
ಸೋಮವಾರಪೇಟೆ ಪಟ್ಟಣದ ಡಿಸಿಸಿ ಬ್ಯಾಂಕ್ ಎದುರು ಪೈಪ್ ಅಳವಡಿಸಲು ತೆಗೆದಿರುವ ಗುಂಡಿಯನ್ನು ಮುಚ್ಚದ ಹಾಗೆ ಬಿಟ್ಟಿರುವುದು.
ಸೋಮವಾರಪೇಟೆ ಪಟ್ಟಣದ ಡಿಸಿಸಿ ಬ್ಯಾಂಕ್ ಎದುರು ಪೈಪ್ ಅಳವಡಿಸಲು ತೆಗೆದಿರುವ ಗುಂಡಿಯನ್ನು ಮುಚ್ಚದ ಹಾಗೆ ಬಿಟ್ಟಿರುವುದು.   

ಸೋಮವಾರಪೇಟೆ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಶುದ್ಧ ಕುಡಿಯುವ ನೀರಿನ ಯೋಜನೆ ಅಮೃತ್ ಯೋಜನೆಯ ಕಾಮಗಾರಿಯಿಂದ ಜನರ ಜೀವಕ್ಕೆ ಎರವಾಗುವ ಆತಂಕ ಎದುರಾಗಿದೆ.

ಎಲ್ಲರಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ₹ 12 ಕೋಟಿ ವೆಚ್ಚದ ಯೋಜನೆಯನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.

ಇದರ ಕಾಮಗಾರಿಯನ್ನು ಗುತ್ತಿಗೆದಾರರು ಕಳೆದ 6 ತಿಂಗಳಿನಿಂದಲೂ ಮಾಡುತ್ತಿದ್ದಾರೆ. ಆದರೆ, ವ್ಯವಸ್ಥಿತವಾಗಿ ಕಾಮಗಾರಿ ಮಾಡದಿರುವುದರಿಂದ ಸಾಕಷ್ಟು ಸಮಸ್ಯೆಗಳು ಜನರಿಗೆ ಎದುರಾಗಿವೆ. ಯಾವುದೇ ರಸ್ತೆಗಳಿಗೆ ಹೊದರೂ, ಚೆನ್ನಾಗಿದ್ದ ರಸ್ತೆಗಳನ್ನು ಅಗೆದು, ಪೈಪ್ ಹಾಕಿದ್ದು, ನಂತರ ಅದರ ನಿರ್ವಹಣೆಯನ್ನು ಮಾಡಿಲ್ಲ. ಅವಧಿಗೂ ಮುನ್ನ ಮುಂಗಾರು ಪ್ರಾರಂಭವಾಗಿರುವುದರಿಂದ ಎಲ್ಲೆಡೆ ಗುಂಡಿಗಳು, ಕೆಸರಿನದ್ದೇ ಕಾರುಬಾರಾಗಿದ್ದು, ಸಾಕಷ್ಟು ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.

ADVERTISEMENT

ಪಟ್ಟಣದಲ್ಲಿ ಮೊದಲೇ ರಸ್ತೆ ಕಿರಿದಾಗಿದ್ದು, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಈಗ ಪೈಪ್ ಅಳವಡಿಸಲು ಗುಂಡಿ ತೆಗೆದಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ, ಗುಂಡಿಯಲ್ಲಿ ನೀರು ಹರಿಯುತ್ತಿದ್ದು, ಹಲವೆಡೆ ಬೃಹತ್ ಗುಂಡಿಗಳಾಗಿವೆ. ಕೆಲವಡೆ ಪೈಪ್ ಅಳವಡಿಸಲು ದೊಡ್ಡ ಗುಂಡಿಗಳನ್ನು ತೆಗೆದು, ಹಾಗೆಯೇ ಬಿಟ್ಟಿರುವುದರಿಂದ ವಾಹನ ಸವಾರರು ಬೀಳುತ್ತಿದ್ದಾರೆ. ಆದರೂ, ಗುತ್ತಿಗೆದಾರರು ಸರಿಯಾದ ಕ್ರಮವನ್ನು ತೆಗೆದುಕೊಂಡು ಅಪಾಯವನ್ನು ತಪ್ಪಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಸತೀಶ್ ದೂರಿದರು.

ಗುತ್ತಿಗೆದಾರರು ಕಾಮಗಾರಿಯನ್ನು ಒಂದು ವಾರ್ಡ್‌ನಲ್ಲಿ ಪ್ರಾರಂಭಿಸಿ ಮುಗಿಸಿದ ನಂತರ ಮತ್ತೊಂದು ವಾರ್ಡ್‌ಗೆ ತೆರಳಿ ಕೆಲಸ ಮಾಡಬೇಕಿತ್ತು. ಹಾಗೆ ಮಾಡದೆ, ಎಲ್ಲೆಡೆ ಕಾಮಗಾರಿ ಪ್ರಾರಂಭಿಸಿದ್ದು, ಸಮಸ್ಯೆಗೆ ಕಾರಣವಾಗಿದೆ. ಹಲವು ಕಡೆಗಳಲ್ಲಿ ಪೈಪ್ ಅಳವಡಿಸಲು ಗುಂಡಿ ತೆಗೆದಿದ್ದು, ಅದನ್ನು ಸರಿಯಾಗಿ ಮುಚ್ಚದ ಕಾರಣ, ಅದರಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ವಾಹನಗಳು ಮತ್ತೊಂದು ವಾಹನಕ್ಕೆ ದಾರಿ ಬಿಡುವ ಸಂದರ್ಭ ಗುಂಡಿಗೆ ಇಳಿದು ಸಿಕ್ಕಿಹಾಕಿಕೊಳ್ಳುತ್ತವೆ. ರಾತ್ರಿ ಸಮಯದಲ್ಲಿ ಸಂಚಾರಕ್ಕೆ ಹೆಚ್ಚಿನ ತೊಡಕಾಗಿದೆ ಎಂದು ಸ್ಥಳೀಯ ನಿವಾಸಿ ಮಧು ತಿಳಿಸಿದರು.

ಇಲ್ಲಿನ ಮಾನಸ ಸಭಾಂಗಣದ ಎದುರು ಪೈಪ್ ಅಳವಡಿಸಲು ತೆಗೆದಿರುವ ಗುಂಡಿ ಸರಿಯಾಗಿ ಮುಚ್ಚದಿರುವುದರಿಂದ ಹಲವು ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಮಂಗಳವಾರ ಮಹಿಳೆಯೊಬ್ಬರು ಈ ಮಾರ್ಗವಾಗಿ ತೆರಳುವ ಸಂದರ್ಭ ಬಿದ್ದಿದ್ದು, ಗಾಯ ಮಾಡಿಕೊಂಡಿದ್ದಾರೆ. ಎಲ್ಲೆಡೆ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಗುತ್ತಿಗೆದಾರರು ಕೂಡಲೇ ಮಾಡಬೇಕೆಂದು ಸುಮಾ ತಿಳಿಸಿದರು.

ಈಗಾಗಲೆ ಗುತ್ತಿಗೆದಾರರು ಹಾಗೂ ಸಂಬಂಧಿತ ಎಂಜಿನಿಯರ್‌ಗಳೊಂದಿಗೆ ಹಲವು ಸಭೆಗಳನ್ನು ಮಾಡಿ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ತಿಳಿಸಲಾಗಿತ್ತು. ಒಂದು ತಿಂಗಳು ಮಳೆ ಬೇಗ ಪ್ರಾರಂಭವಾಗಿದ್ದು, ಕಾಮಗಾರಿ ಮುಂದುವರೆಸಲು ಸಮಸ್ಯೆಯಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲಿ ಗುಂಡಿಗಳಾಗಿವೆಯೂ ಅವುಗಳನ್ನು ಮುಚ್ಚಿ ಸಮಸ್ಯೆ ಪರಿಹರಿಸುವಂತೆ ಸೂಚಿಸಲಾಗಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.