
ಕುಶಾಲನಗರ: ‘ತಾಲ್ಲೂಕಿನ ಹೆಬ್ಬಾಲೆ ಬಳಿ ಸರ್ಕಾರಿ ಜಾಗ ಅಥವಾ ಖಾಸಗಿ ಜಮೀನು ಖರೀದಿಸಿ ಸುಮಾರು 500 ಎಕರೆಯಲ್ಲಿ 2ನೇ ಹಂತದ ನೂತನ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಸ್ಥಾಪಕ ಕಾರ್ಯದರ್ಶಿ ಟಿ.ಪಿ.ರಮೇಶ್ ಒತ್ತಾಯಿಸಿದರು.
ಸ್ಥಳೀಯ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಪಾಲ್ಯಂಸ್ ಎಮರಾಲ್ಡ್ ಸಭಾಂಗಣದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
‘ಹಾಲಿ ಇರುವ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ತೆರೆಯಲು ಸ್ಥಳವೇ ಇಲ್ಲ. ಹಾಗಾಗಿ ಸರ್ಕಾರ ಹೆಬ್ಬಾಲೆ ಬಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿ ಹೆಚ್ಚು ಕೈಗಾರಿಕೆಗಳನ್ನು ಸೆಳೆಯಬೇಕು, ಯುವಜನರಿಗೆ ಉದ್ಯೋಗ ಒದಗಿಸಬೇಕು’ ಎಂದರು.
ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ‘ರಾಜ್ಯ ಸಮಿತಿಯ ಮಹತ್ವಾಕಾಂಕ್ಷೆಯ ಬಿಯಾಂಡ್ ಬೆಂಗಳೂರು ಯೋಜನೆಯಡಿ ಮಾಹಿತಿ ಹಾಗೂ ತಂತ್ರಜ್ಞಾನ ಕೇಂದ್ರವನ್ನು ಕೊಡಗಿನಲ್ಲಿ ತೆರೆಯಬೇಕು. ಜಿಲ್ಲೆಯಲ್ಲಿ 18 ಸ್ಥಾನೀಯ ಸಮಿತಿಗಳಿದ್ದು, ಈ ಪೈಕಿ 13 ಘಟಕಗಳು ಕ್ರಿಯಾಶೀಲವಾಗಿವೆ. ಉಳಿದ ಘಟಕಗಳೂ ಸಕ್ರಿಯವಾಗಬೇಕಿದೆ’ ಎಂದು ಹೇಳಿದರು.
ಕುಶಾಲನಗರ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ‘ವರ್ತಕರ ಸಂಘದ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸಬೇಕಿದೆ. ಕೊಡಗಿನ ಪ್ರವೇಶ ದ್ವಾರ ಕುಶಾಲನಗರದಲ್ಲಿ ಸ್ವಾಗತ ಕಮಾನು ಮತ್ತು ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಕೇಂದ್ರವನ್ನು ಪ್ರವಾಸೋದ್ಯಮ ಇಲಾಖೆಯಿಂದ ತುರ್ತಾಗಿ ತೆರೆಯಬೇಕು’ ಎಂದರು.
ಕುಶಾಲನಗರದ ಕಾವೇರಿ ಸೇತುವೆಗೆ ಗುಂಡೂರಾವ್ ಹೆಸರು ನಾಮಕರಣ ಮಾಡಬೇಕು. ಹಾಗೆಯೇ ವರ್ತಕರ ಸಂಘದಿಂದ ಸ್ವಂತ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಟಿ.ಆರ್.ಶರವಣಕುಮಾರ್ ಮಾತನಾಡಿದರು.
ಕುಶಾಲನಗರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಪಿ.ಸತ್ಯನಾರಾಯಣ, ಸ್ಥಾಪಕ ಕಾರ್ಯದರ್ಶಿ ಬಿ.ಜಿ.ಅನಂತಶಯನ, ಮಾಜಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಮಾಜಿ ಕಾರ್ಯದರ್ಶಿ ಕೆ.ಎಸ್.ವೆಂಕಟರಮಣ ರಾವ್, ಕೆ.ಎಸ್.ರಾಜಶೇಖರ್, ಕೆ.ಜೆ.ಸತೀಶ್,
ಎಸ್.ಕೆ.ಸತೀಶ್, ಬಿ.ಅಮೃತರಾಜು, ಕೆ.ಆರ್.ರವಿಕುಮಾರ್, ಟಿ.ಆರ್.ಶ್ರವಣಕುಮಾರ, ರವೀಂದ್ರ ರೈ ಅವರನ್ನು ಸನ್ಮಾನಿಸಲಾಯಿತು.
ಸ್ಥಾನೀಯ ಸಮಿತಿ ಕಾರ್ಯದರ್ಶಿ ಚಿತ್ರ ರಮೇಶ್, ಉಪಾಧ್ಯಕ್ಷ ಎಂ.ಡಿ. ರಂಗಸ್ವಾಮಿ, ನಿರ್ದೇಶಕರಾದ ಎಚ್.ಎಂ.ಚಂದ್ರು, ಮಹೇಂದ್ರ ಶರ್ಮಾ, ಓಂಪುರಿ, ಕೆ.ಎನ್.ದೇವರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.