ADVERTISEMENT

‘ಚೀಫ್ ಕಮಿಷನರ್ ಆಫ್ ಕೂರ್ಗ್’ ದಾಖಲೆ ಡಿಜಿಟಲೀಕರಣ

ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ರಾಜಮ್ಮ ಚೌಡರೆಡ್ಡಿ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 13:28 IST
Last Updated 25 ಫೆಬ್ರುವರಿ 2021, 13:28 IST
ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕಿ ರಾಜಮ್ಮ ಚೌಡರೆಡ್ಡಿ ಚಾಲನೆ ನೀಡಿದರು
ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕಿ ರಾಜಮ್ಮ ಚೌಡರೆಡ್ಡಿ ಚಾಲನೆ ನೀಡಿದರು   

ಮಡಿಕೇರಿ: ರಾಜ್ಯ ಪತ್ರಾಗಾರ ಇಲಾಖೆ ವತಿಯಿಂದ ‘ಚೀಫ್ ಕಮಿಷನರ್ ಆಫ್ ಕೂರ್ಗ್’ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕಿ ರಾಜಮ್ಮ ಚೌಡರೆಡ್ಡಿ ಅವರು ತಿಳಿಸಿದರು.

ರಾಜ್ಯ ಪತ್ರಾಗಾರ ಇಲಾಖೆ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಇತಿಹಾಸ ವಿಭಾಗದ ಸಹಯೋಗದಲ್ಲಿ ಗುರುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿರುವ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯ ಐತಿಹಾಸಿಕ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಸರ್ಕಾರವು 2018ರಲ್ಲಿ ₹ 1 ಕೋಟಿ ಬಿಡುಗಡೆ ಮಾಡಿದ್ದು, ಜಿಲ್ಲಾಡಳಿತ ಸಹಕಾರದಲ್ಲಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ADVERTISEMENT

ಮಾನವನ ಇತಿಹಾಸದಲ್ಲಿ ಬದುಕಿಗೆ ಹಲವು ಆಧಾರಗಳು ಇವೆ. ಇತಿಹಾಸ ನಿರ್ಮಾಣಕ್ಕೆ ಹಾಗೂ ಸಂಶೋಧನೆಗೆ ಪ್ರಾಚೀನ ದಾಖಲೆಗಳು ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಸಾಮ್ರಾಟ್ ಅಶೋಕನ ಕಾಲದಿಂದ ಈಗಿನವರೆಗೆ ಸಾಮಾಜಿಕ, ಆರ್ಥಿಕ ಬೆಳವಣಿಗೆ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ತಿಳಿದುಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಹರಪ್ಪ, ಮೊಹೆಂಜೋದಾರ, ಸಿಂಧೂ ಬಯಲಿನ ನಾಗರಿಕತೆಯಿಂದ ಆರಂಭವಾಗಿ ಶಿಲ್ಪಗಳು, ಕೆತ್ತನೆ, ಗೋಡೆ ಬರಹ, ನಾಣ್ಯಗಳು, ಆಯುಧಗಳು... ಹೀಗೆ ಹಲವು ಕುರುಹುಗಳನ್ನು ಕಾಣುತ್ತೇವೆ. ಇದರಿಂದ ಇತಿಹಾಸದಲ್ಲಿ ಬದುಕಿನ ಹಲವು ಆಧಾರಗಳು ಕಾಣಬಹುದಾಗಿದೆ. ಇತಿಹಾಸ ನಿರ್ಮಾಣ ಹಾಗೂ ಸಂಶೋಧನೆಗೆ ಪ್ರಾಚೀನ ದಾಖಲೆಗಳು ಅಗತ್ಯ ಎಂದು ರಾಜಮ್ಮ ಚೌಡರೆಡ್ಡಿ ಅವರು ತಿಳಿಸಿದರು.

ಮಾನವನ ಬದುಕಿನಲ್ಲಿ ಸಾಹಿತ್ಯ ಮತ್ತು ಇತಿಹಾಸ ಅಡಿಪಾಯವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇವುಗಳನ್ನು ಸಂಶೋಧನೆ ಮಾಡಬೇಕು. ಜ್ಞಾನದ ಹಸಿವು ಹೆಚ್ಚು ಇರಬೇಕು. ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದರು.

ಕೊಡಗು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದ್ದು, ಇತಿಹಾಸದ ದಾಖಲೆಗಳನ್ನು ಸಂರಕ್ಷಣೆ ಮಾಡಬೇಕು. ಮುಂದಿನ ಪೀಳಿಗೆಗೆ ದಾಖಲಿಸಬೇಕು ಬಿ.ಎಲ್.ರೈಸ್ ಅವರು ಕನ್ನಡ ನಿಘಂಟು ರಚಿಸಿದ್ದಾರೆ. ಹಲವರು ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಪತ್ರಾಗಾರ ಇಲಾಖೆಯ ನಿರ್ದೇಶಕರು ವಿವರಿಸಿದರು.

ಪತ್ರಾಗಾರ ಇಲಾಖೆಯ ಮೈಸೂರು ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್.ಮಂಜುನಾಥ ಮಾತನಾಡಿ, ಪತ್ರಾಗಾರ ಇಲಾಖೆಯಿಂದ 150 ವರ್ಷಗಳ ಚಾರಿತ್ರಿಕ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.

ಕೊಡಗು ಚೀಫ್ ಕಮೀಷನರ್ ಅವರು 1907ರಲ್ಲಿ ಪ್ಲೇಗ್ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮದ ಬಗ್ಗೆ, ರಜೆಯ ಮಂಜೂರಾತಿಯ ಬಗ್ಗೆ, ಮುನಿಸಿಪಲ್ ಇಲಾಖೆಯ ಬೈಲಾ ನಿಬಂಧನೆಗಳ ಬಗ್ಗೆ, ಲ್ಯಾಂಡ್ ಇಂಪ್ರೂವ್‍ಮೆಂಟ್ ಆ್ಯಕ್ಟ್ ಬಗ್ಗೆ ಮತ್ತು ಕೊಡಗಿನಲ್ಲಿ ಚಿಲ್ಲರೆ ಪದಾರ್ಥಗಳ ಮಾರಾಟದ ಬಗ್ಗೆ ಹೊರಡಿಸಿರುವ ಆದೇಶಗಳು ಮತ್ತಿತರ ಐತಿಹಾಸಿಕ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ಮಹಾರಾಜರ ಆಡಳಿತ, ಕೊಡಗು ಅರಸರ ಆಡಳಿತ ಹೀಗೆ ಹಲವು ಚಾರಿತ್ರಿಕ ದಾಖಲೆಗಳು ಹಾಗೂ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ನಡೆಸುತ್ತಿರುವ ಮೀಸಲಾತಿ ಹೋರಾಟಗಳಿಗೆ ಚಾರಿತ್ರಿಕ ದಾಖಲೆಗಳು, ಹಿನ್ನೆಲೆಗಳು ಬೇಕಿದೆ. ಆ ನಿಟ್ಟಿನಲ್ಲಿ ಚಾರಿತ್ರಿಕ ದಾಖಲೆಗಳನ್ನು ಸಂರಕ್ಷಣೆ ಮಾಡಬೇಕಿದೆ. ಸತ್ಯಾಸತ್ಯತೆಗಳನ್ನು ತಿಳಿಸಲು ದಾಖಲೀಕರಣ ಅಗತ್ಯ ಪ್ರಾಧ್ಯಾಪಕರು ಮತ್ತು ಸಂಶೋಧಕರಿಗೆ ಚಾರಿತ್ರಿಕ ದಾಖಲೆಗಳಿಂದ ಸಂಶೋಧನೆಗಳಿಗೆ ಅನುಕೂಲವಾಗಲಿದೆ ಎಂದು ಮಂಜುನಾಥ್ ಅವರು ವಿವರಿಸಿದರು.

ಪ್ರಾಂಶುಪಾಲ ಪ್ರೊ.ಡಿ.ಜೆ.ಜವರಪ್ಪ ಮಾತನಾಡಿ, ಪ್ರಾಚೀನ ಇತಿಹಾಸವನ್ನು ಮರೆಯಬಾರದು. ಹಿಂದಿನದೇ ಅಡಿಪಾಯವಾಗಿದೆ. ಹಿಂದೆ ಕಾಸಿನ (ಹಣ) ಮೌಲ್ಯ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ಎನ್.ಪಿ.ಸತೀಶ್ ಮಾತನಾಡಿದರು. ಸಂಚಾಲಕರಾದ ಡಾ.ಕನ್ನಿಕಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಿತ್ರಾ ವೈ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.