ADVERTISEMENT

ಕೊಡಗಿನ ಜಿಲ್ಲಾ ಉಸ್ತುವಾರಿಯ ‘ವರಿ’

ವಿ.ಸೋಮಣ್ಣಗೆ ಹೆಚ್ಚುವರಿ ಹೊಣೆ; ಜಿಲ್ಲೆಗೆ ಅವರ ಭೇಟಿಯೂ ಅಪರೂಪ

ಅದಿತ್ಯ ಕೆ.ಎ.
Published 12 ಫೆಬ್ರುವರಿ 2020, 9:39 IST
Last Updated 12 ಫೆಬ್ರುವರಿ 2020, 9:39 IST
ಎಚ್‌.ಸಿ.ಮಹಾದೇವಪ್ಪ
ಎಚ್‌.ಸಿ.ಮಹಾದೇವಪ್ಪ   

ಮಡಿಕೇರಿ: ಕೊಡಗು ಜಿಲ್ಲೆ ಉಸ್ತುವಾರಿಯು ಇತ್ತೀಚಿನ ವರ್ಷಗಳಲ್ಲಿ ಹೊರ ಜಿಲ್ಲೆಯ ಸಚಿವರಿಗೇ ಸಿಗುತ್ತಿರುವುದು ಕೊಡಗಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವಾರ ನಡೆದಿದ್ದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಕ್ಕಿ ಅವರೆ ಉಸ್ತುವಾರಿಯೂ ಆಗುವ ವಿಶ್ವಾಸ ಮೂಡಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಲೆಕ್ಕಾಚಾರ ತಲೆಕಳೆಗಾಯಿತು. ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ಕೆ.ಜಿ.ಬೋಪಯ್ಯ ಅವರಿಗೆ ಸಚಿವ ಸ್ಥಾನ ಕೈತಪ್ಪಿತು. ‘ಜಿಲ್ಲೆಯವರೇ ಉಸ್ತುವಾರಿ ಆಗಬೇಕು’ ಎಂಬ ಕೂಗಿಗೆ ಬಿಜೆಪಿ ಆಡಳಿತದ ಅವಧಿಯಲ್ಲೂ ಮನ್ನಣೆ ಸಿಕ್ಕಿಲ್ಲ.

ಸ್ಥಳೀಯ ಶಾಸಕರೇ ಮಂತ್ರಿಯಾಗಿ ‘ಜಿಲ್ಲಾ ಉಸ್ತುವಾರಿ’ ಹೊಣೆ ಹೊತ್ತುಕೊಂಡರೆ ಜಿಲ್ಲೆಗೆ ಲಾಭವಾಗಬಹುದು ಎಂಬುದು ಜಿಲ್ಲೆ ಜನರ ಲೆಕ್ಕಾಚಾರ. ಆದರೆ, ಅದಕ್ಕೆ ಕಾಲ ಕೂಡಿಬರುತ್ತಿಲ್ಲ.

ADVERTISEMENT

ಗುಡ್ಡಗಾಡು ಪ್ರದೇಶವಾದ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. 2018 ಹಾಗೂ 2019ರಲ್ಲಿ ಸತತ ಎರಡು ವರ್ಷ ನೆರೆ ಹಾವಳಿ ಉಂಟಾಗಿತ್ತು. 2018ರಲ್ಲಿ ಪ್ರಾಕೃತಿಕ ವಿಕೋಪಕ್ಕೆ ಜಿಲ್ಲೆ ತತ್ತರಿಸಿತ್ತು. ಗುಡ್ಡಗಳು ಕುಸಿದಿದ್ದವು. ಹಲವು ಮನೆಗಳು ಉರುಳಿದ್ದವು. ಅದಾದ ಮೇಲೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸಮತೋಲನ ತಪ್ಪಿದೆ. ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ಬಿದ್ದಿದೆ.

ನೆರೆ ಸಂತ್ರಸ್ತರಿಗೆ ಇನ್ನೂ ಶಾಶ್ವತ ಸೂರು ಸಿಕ್ಕಿಲ್ಲ. ಮನೆ ಕಳೆದುಕೊಂಡಿರುವ ನೂರಾರು ಮಂದಿಯಲ್ಲಿ 33 ಕುಟುಂಬಗಳಿಗೆ ಮಾತ್ರ ಕರ್ಣಂಗೇರಿಯಲ್ಲಿ ಮನೆ ಹಂಚಿಕೆ ಮಾಡಲಾಗಿದೆ. ಉಳಿದವರು ಇನ್ನೂ ಬಾಡಿಗೆ ಹಾಗೂ ಸಂಬಂಧಿಕರ ಮನೆಗಳಲ್ಲಿಯೇ ದಿನ ದೂಡುತ್ತಿದ್ದಾರೆ. ಕಳೆದ ವರ್ಷದ ಸಂತ್ರಸ್ತರು ಸಿದ್ದಾಪುರದ ಗ್ರಾಮ ಪಂಚಾಯಿತಿ ಎದುರು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ. ಕಾಫಿ ಹಾಗೂ ಕಾಳು ಮೆಣಸಿನ ಬೆಳೆಯೂ ಇಲ್ಲ. ಬೆಲೆಯೂ ಇಲ್ಲದ ಪರಿಸ್ಥಿತಿಯಿದೆ. ಹಟ್ಟಿಹೊಳೆ ಹಾಗೂ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ಬಂದು ನಿಂತಿದೆ. ಹಾರಂಗಿ ಜಲಾಶಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಳು ಶೇಖರಣೆಗೊಂಡು ನೀರು ಸಂಗ್ರಹ ಪ್ರಮಾಣ ಕುಸಿದಿದೆ. ಈ ಸಮಸ್ಯೆಗಳಿಗೆ ಪರಿಹಾರ ಮರೀಚಿಕೆಯಾಗಿದೆ ಎಂಬುದು ಜಿಲ್ಲೆಯ ಜನರ ಅಳಲು.

ಕಾಡಾನೆ ಹಾವಳಿಯಿಂದ ರೈತರು ಬಸವಳಿದಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಹುಲಿಯ ಉಪಟಳ ತೀವ್ರಗೊಂಡಿದೆ. ‘ಸಿ ಅಂಡ್‌ ಡಿ’ ಜಮೀನನ್ನು ಅರಣ್ಯ ಇಲಾಖೆಯಿಂದ ವಾಪಸ್‌ ಪಡೆದು ಭೂಕುಸಿತದಿಂದ ಜಮೀನು ಕಳೆದುಕೊಂಡ ಕೃಷಿಕರಿಗೆ ನೀಡಬೇಕು ಎಂಬ ಬೇಡಿಕೆ ಹಾಗೆಯೇ ಉಳಿದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಶಾಶ್ವತ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಅಕ್ರಮ, ಸಕ್ರಮ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದ ನೂರಾರು ರೈತರಿಗೆ ಹಕ್ಕುಪತ್ರಗಳು ಸಿಕ್ಕಿಲ್ಲ... ಹೀಗೆ ಸಾಲು ಸಾಲು ಸಮಸ್ಯೆಗಳಿವೆ. ಅವುಗಳಿಗೆ ಯಾವಾಗ ಪರಿಹಾರ ಎಂಬ ಮಾತುಗಳು ಜಿಲ್ಲೆಯ ವ್ಯಕ್ತವಾಗುತ್ತಿವೆ.

ಹೇಗೆ ಅನುಕೂಲ?:ಸಹಜವಾಗಿ ಜಿಲ್ಲೆಯವರೇ ಉಸ್ತುವಾರಿ ಹೊಣೆ ವಹಿಸಿಕೊಂಡರೆ ಜಿಲ್ಲೆಗೇ ಸಾಕಷ್ಟು ಅನುಕೂಲ. ಅವರಿಗೆ ಜಿಲ್ಲೆಯ ಕಾರ್ಮಿಕರು, ರೈತರು ಸೇರಿದಂತೆ ಸ್ಥಳೀಯ ಸಮಸ್ಯೆಗಳ ಅರಿವು ಇರುತ್ತದೆ. ಸ್ಥಳೀಯವಾಗಿಯೇ ಅವರು ಲಭ್ಯವಿದ್ದು ಪದೇ ಪದೇ ಸಭೆ ನಡೆಸಿದರೆ ಅಧಿಕಾರಿಗಳೂ ಎಚ್ಚೆತ್ತು ಕೆಲಸ ಮಾಡುತ್ತಾರೆ. ಹೀಗಾದರೆ ತಕ್ಷಣ ಸ್ಪಂದಿಸಲು ಸಾಧ್ಯ. ಕಳೆದ ಕೆಲವು ವರ್ಷಗಳಿಂದ ಹೊರಗಿನವರೆ ಜಿಲ್ಲೆಯ ಉಸ್ತುವಾರಿ ಆಗುತ್ತಿರುವುದರಿಂದ ಅವರಿಗೆ ಸಮಯ ಸಿಕ್ಕಾಗ ಸಭೆ ನಡೆಸಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ. ನಿರಂತರ ಫಾಲೋಅಪ್‌ ಸಹ ಮಾಡುವುದಿಲ್ಲ. ಅಧಿಕಾರಿಗಳದ್ದೇ ಆಡಳಿತವಾಗಿದೆ ಎಂಬುದು ಜಿಲ್ಲೆಯ ಜನರ ನೋವು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಎಚ್‌.ಸಿ.ಮಹಾದೇವಪ್ಪ, ಕೆ.ಜೆ.ಜಾರ್ಜ್‌, ದಿನೇಶ್‌ ಗುಂಡೂರಾವ್‌, ಎಂ.ಆರ್‌.ಸೀತಾರಾಂ ಅವರು ಉಸ್ತುವಾರಿ ಸಚಿವರಾಗಿದ್ದರು. ಅದಾದ ಮೇಲೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ‘ಮೈತ್ರಿ’ ಸರ್ಕಾರ ಅಸ್ತಿತ್ವಕ್ಕೆ ಬಂತು. ಸಾ.ರಾ.ಮಹೇಶ್‌ ಅವರಿಗೆ ಕೊಡಗು ಉಸ್ತುವಾರಿ ಸ್ಥಾನ ಲಭಿಸಿತು. ‘ಮೈತ್ರಿ’ ಸರ್ಕಾರ ಪತನವಾದ ಮೇಲೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ವಸತಿ ಸಚಿವ ವಿ.ಸೋಮಣ್ಣಗೆ ಉಸ್ತುವಾರಿ ಸ್ಥಾನ ಸಿಕ್ಕಿದೆ. ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಹೌದ. ಕೊಡಗು ಅವರಿಗೆ ಹೆಚ್ಚುವರಿ ಹೊಣೆ!

ಭೇಟಿಯೂ ಅಪರೂಪ:‘ಸೋಮಣ್ಣ ಅವರ ಭೇಟಿಯೂ ಜಿಲ್ಲೆಗೆ ಅಪರೂಪವಾಗಿದೆ. ಅವರಿಗೆ ಸಮಯ ಸಿಕ್ಕಾಗ ಅಷ್ಟೇ ಬಂದು ಸಭೆ ನಡೆಸಿ ಹೋಗುತ್ತಿದ್ದಾರೆ. ದಸರಾ ಹಾಗೂ ತೀರ್ಥೋದ್ಭವ ಪೂರ್ವಭಾವಿ ಸಭೆ, ಜಿಲ್ಲಾ ಪಂಚಾಯಿತಿ ಕಟ್ಟಡದ ಉದ್ಘಾಟನೆ, ಕೆ.ಡಿ.ಪಿ ಸಭೆ, ಜಿಲ್ಲಾ ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ಉದ್ಘಾಟನೆ ಸೇರಿದಂತೆ ನಾಲ್ಕೈದು ಬಾರಿ ಮಾತ್ರ ಅವರು ಜಿಲ್ಲೆಗೆ ಭೇಟಿ ನೀಡಿದ್ದಾರೆ’ ಎಂದು ಸಂತ್ರಸ್ತರೊಬ್ಬರ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.