
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯೊಂದಿಗೆ ಜನರು ದೀಪಾವಳಿ ಆಚರಿಸಿದರು. ಪಟಾಕಿ ಹೊಡೆಯುವುದಕ್ಕೂ ಬಿಡುವು ನೀಡದಂತೆ ಸುರಿದ ಮಳೆಯಿಂದ ಸಂಭ್ರಮ ಹಿಂದಿನ ವರ್ಷದಷ್ಟು ಇರಲಿಲ್ಲ. ಆದಾಗ್ಯೂ, ಮಳೆ ನಿಂತ ಗಳಿಗೆಯಲ್ಲಿ ಜನರು ಪಟಾಕಿ ಹಚ್ಚಿ ಸಂಭ್ರಮಿಸಿದರು.
ಜಿಲ್ಲೆಯ ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೀಪೋತ್ಸವಗಳು ಜರುಗಿದವು. ಹಲವೆಡೆ ಮಳೆಯಿಂದ ದೀಪ ಹಚ್ಚುವುದಕ್ಕೂ ಸಮಸ್ಯೆ ಎದುರಾಯಿತು.
ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ರಾಜರಾಜೇಶ್ವರಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ದೀಪಾವಳಿ ‘ದೀಪೋತ್ಸವ’ ನಡೆಯಿತು. ಸಾವಿರಾರು ದೀಪಗಳನ್ನು ಹಚ್ಚಿ ಜನರು ನಮಿಸಿದರು.
ದೇವಾಲಯದ ಧರ್ಮದರ್ಶಿ ಎಚ್.ಎಸ್.ಗೋವಿಂದಸ್ವಾಮಿ ಅವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ದೀಪೋತ್ಸವ ಜರುಗಿತು. ಕಳಸ ಪೂಜೆ, ಅನ್ನದಾನ ಮತ್ತು ಪ್ರಸಾದ ವಿನಿಯೋಗವಾದ ನಂತರ ತಾಯಿಯ ದರ್ಶನ ಹಾಗೂ ದೀಪೋತ್ಸವ ನೆರವೇರಿತು.
108 ಎಳ್ಳು ಬತ್ತಿಯನ್ನು ದೇವಾಲಯದ ಆವರಣದಲ್ಲಿ ಹಚ್ಚಿದರೆ ದೋಷ ಪರಿಹಾರವಾಗಲಿದೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೀಪೋತ್ಸವದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.