
ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗಲಿದೆ ದುಷ್ಪರಿಣಾಮ | ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಲು ಮನವಿ ಬೀದಿ ನಾಟಕ ಪ್ರದರ್ಶನ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’ ಅಭಿಯಾನ ಬುಧವಾರ ಪೂರ್ವಭಾವಿಯಾಗಿ ಆರಂಭವಾಯಿತು.
ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಬೀದಿ ನಾಟಕದ ಮೂಲಕ ಮದ್ಯ ಮತ್ತು ಮಾದಕ ಪದಾರ್ಥಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಲಾಯಿತು. ಇನ್ನು ಮುಂದೆ ಶಾಲಾ, ಕಾಲೇಜುಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಘಟಕ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು, ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆದ ಬೀದಿ ನಾಟಕದ ಮೂಲಕ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಜನ್ಮ ಪಡೆದ ಮಕ್ಕಳೇ ತಂದೆ-ತಾಯಿ, ಸೋದರ-ಸೋದರಿಯನ್ನು ಹತ್ಯೆ ಮಾಡುವುದು ವರದಿಯಾಗಿದ್ದು, ಸಮಾಜ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಅವಲೋಕನ ಮಾಡಬೇಕಿದೆ’ ಎಂದರು.
ಯುವ ಜನರು ಗಾಂಜಾ, ಹೆರಾಯಿನ್, ಅಫೀಮು ಮತ್ತಿತರ ಮಾದಕ ವಸ್ತುಗಳಿಗೆ ಒಳಗಾಗಿ, ಮಾನಸಿಕ ಒತ್ತಡಕ್ಕೆ ತುತ್ತಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
‘ಯುವ ಜನರು ಮಾನಸಿಕ ಚಂಚಲತೆಗೆ ಒಳಗಾಗದೆ, ನೆಮ್ಮದಿಯಾಗಿ ಉತ್ತಮ ಬದುಕು ನಡೆಸಲು ಕುಟುಂಬದಲ್ಲಿ ನಿರ್ಮಲ ವಾತಾವರಣ ಇರಬೇಕು. ಕುಟುಂಬದಿಂದಲೇ ಒಳ್ಳೆಯ ವಾತಾವರಣ ಇದ್ದಲ್ಲಿ ಯುವಜನರು ಸರಿದಾರಿಯತ್ತ ಸಾಗಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕು’ ಎಂದು ಅವರು ಸಲಹೆ ನೀಡಿದರು.
ಗಮನ ಸೆಳೆದ ಬೀದಿ ನಾಟಕ
ಕಲಾವಿದ ಈ.ರಾಜು ಮತ್ತು ತಂಡದವರು ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಅರ್ಧ ಗಂಟೆ ಕಾಲ ಪ್ರದರ್ಶಿಸಿದ ಬೀದಿನಾಟಕ ಗಮನ ಸೆಳೆದರು.
‘ಗಾಂಜಾವ ಸೇದ ಬೇಡ, ಅಫೀಮು ತಿನ್ನಬೇಡ.. ಡ್ರಗ್ಸ್ ಕೆಟ್ಟ ಗುಣವ ಮರೆಯಬೇಡ... ಮೊದ ಮೊದಲು ಗಮ್ಮತ್ತು. ತದ ನಂತರ ಆಪತ್ತು.. ಇರುಳ ಕಂಡ ಬಾವಿಗೆ ಹಗಲು ಬೀಳಬೇಡ...ದುಶ್ಚಟವ ತೊರೆಯಿರಿ. ಹೊಸ ಬದುಕು ಪಡೆಯಿರಿ.. ಮನೆ ಮಂದಿಗೆಲ್ಲ ಸಂತೋಷ ನೀಡಿ... ಆರೋಗ್ಯಯುತ ಭಾರತ ಕಟ್ಟೋಣ ಬನ್ನಿ’ ಎಂಬ ಹಾಡು ಮೆಚ್ಚುಗೆಗೆ ಪಾತ್ರವಾಯಿತು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿಜಯ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್ಪೋರ್ಸ್‍ಮೆಂಟ್ ಅಧಿಕಾರಿ ಡಾ.ಆನಂದ್, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ, ಡಿವೈಎಸ್‍ಪಿ ಐ.ಪಿ.ಮೇದಪ್ಪ, ಇನ್‌ಸ್ಪೆಕ್ಟರ್‌ಗಳಾದ ಚಂದ್ರಶೇಖರ್, ಅನ್ನಪೂರ್ಣ ಭಾಗವಹಿಸಿದ್ದರು.
ಮಾಹಿತಿ ನೀಡಿ ಗೋಪ್ಯತೆ ಕಾಪಾಡಲಾಗುವುದು: ಎಸ್.ಪಿ
‘ಮಾದಕ ವಸ್ತುಗಳ ಉತ್ಪಾದನೆ ಮತ್ತು ಸೇವನೆ ಮಾಡುವುದು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ‘ಮಾದಕ ವಸ್ತುಗಳ ಉತ್ಪಾದನೆ ಮತ್ತು ಸೇವನೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಅಥವಾ 112 ಗೆ ಕರೆ ಮಾಡಬೇಕು. ಮಾಹಿತಿ ನೀಡಿರುವವರ ಹೆಸರು ಗೌಪ್ಯತೆ ಕಾಪಾಡಲಾಗುವುದು’ ಎಂದು ಭರವಸೆ ನೀಡಿದರು.
7 ರಂದು ಬೃಹತ್ ಜಾಥಾ
ಮಡಿಕೇರಿ: ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ ಹಾಗೂ ಅಂಗಾಂಗ ದಾನ ಅಭಿಯಾನ(ಜೀವ ಸಾರ್ಥಕತೆ ಅಭಿಯಾನ) ಮತ್ತು ಜಾಥ ಕಾರ್ಯಕ್ರಮವು ಫೆ. 7ರಂದು ಬೆಳಿಗ್ಗೆ 7.30ಕ್ಕೆ ಮಡಿಕೇರಿ ನಗರದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾಡಳಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊಡಗು ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ದಿಶಾ ಭೋದ್ ಫೌಂಡೇಷನ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿದ್ಯವಿದ್ಯಾನಿಲಯ ಸೇರಿದಂತೆ ಕಾಲೇಜುಗಳ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಈ ಜಾಥಾ ನಡೆಯಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಂಧಿ ಮೈದಾನದಿಂದ ಜಾಥ ಹೊರಡಲಿದ್ದು ಮಂಗೇರಿರ ಮುತ್ತಣ್ಣ ವೃತ್ತ ಜನರಲ್ ತಿಮ್ಮಯ್ಯ ವೃತ್ತ ಅಜ್ಜಮಾಡ ಬಿ.ದೇವಯ್ಯ ವೃತ್ತದ ಮೂಲಕ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲಿದೆ. ಈ ವೇಳೆ ಬೀದಿನಾಟಕ ಪ್ರದರ್ಶನ ನಡೆಸಿ ನಶಾ ಮುಕ್ತ ಭಾರತ ನಿರ್ಮಾಣ ಮಾಡುವಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ‘ನಶಾ ಮುಕ್ತ ಭಾರತ’ ಸಂಬಂಧ ಹೆಚ್ಚಿನ ಅರಿವು ಮೂಡಿಸುವಲ್ಲಿ ಭಿತ್ತಿಪತ್ರಗಳ ಪ್ರದರ್ಶನಗಳು ಇರರಲಿವೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ಹೇಳಿದರು. ಸ್ಥಾನೀಯ ವೈದ್ಯಾಧಿಕಾರಿ ಡಾ.ಧನಂಜಯ ಮಾತನಾಡಿ ಜಾಥಾದಲ್ಲಿ ಅಂಗಾಂಗ ದಾನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದರು.
ಡಾ.ಮೋಹನ್ ಅಪ್ಪಾಜಿ ಮಾತನಾಡಿ ಈ ಅಭಿಯಾನದಲ್ಲಿ ಲಯನ್ಸ್ ಸಂಸ್ಥೆ ಸಂಸ್ಕೃತಿ ಸಿರಿ ಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಲಿವೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಫೆ. 15ರವರೆಗೆ ವಿವಿಧ ಶಾಲಾ ಕಾಲೇಜು ಹಂತದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಮಾತನಾಡಿ ‘ಅಂಗಾಂಗ ದಾನವನ್ನು ಸ್ವಯಂ ಪ್ರೇರಣೆಯಿಂದ ಮಾಡಲು ಮುಂದಾಗಬೇಕು. ಅಂಗಾಂಗ ದಾನ ಮಾಡುವುದರಿಂದ ಮತ್ತೊಬ್ಬರ ಅಮೂಲ್ಯ ಜೀವ ಉಳಿಸಿದಂತಾಗುತ್ತದೆ’ ಎಂದು ತಿಳಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರ ಡಾ.ವಿಶಾಲ್ ಕುಮಾರ್ ಡಾ.ಅಭಿನಂದನ್ ಡಾ.ಸುಮುಖ್ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.