
ಮಡಿಕೇರಿ: ನಗರದಲ್ಲಿ ಶನಿವಾರ ನಡೆದ ‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’ ಹಾಗೂ ಅಂಗಾಂಗ ದಾನ ಅಭಿಯಾನ (ಜೀವ ಸಾರ್ಥಕತೆ ಅಭಿಯಾನ)ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಜಿಲ್ಲಾಡಳಿತ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಘ, ಸಂಸ್ಥೆಗಳ ವತಿಯಿಂದ ನಡೆದ ಜಾಥಾಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಹಾಗೂ ಶಾಸಕ ಡಾ.ಮಂತರ್‌ಗೌಡ ಹಸಿರು ನಿಶಾನೆ ತೋರಿದರು.
ಜಾಥಾವು ಗಾಂಧಿ ಮೈದಾನದಿಂದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ಬಿ.ದೇವಯ್ಯ ವೃತ್ತದ ಮೂಲಕ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ತಲುಪಿತು. ಅಲ್ಲಿ ಮಾದಕವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಬೀದಿನಾಟಕವನ್ನು ಪ್ರದರ್ಶಿಸಲಾಯಿತು.
ಇದಕ್ಕೂ ಮುನ್ನ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ‘ಇನ್ನು ಮುಂದೆ ಮಾದಕ ವಸ್ತು ಮುಕ್ತ ಕ್ಯಾಂಪಸ್ ಎಂದು ಘೋಷಣೆ ಮಾಡಿಕೊಂಡ ಕಾಲೇಜುಗಳಿಗೆ ಮಾತ್ರವೇ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ಲಕ್ಷಾಂತರ ಮಂದಿ ಅಂಗಾಂಗಗಳಿಗಾಗಿ ಕಾಯುತ್ತಿದ್ದಾರೆ. ಆದರೆ, ಅಂಗಾಂಗ ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ಅರಿವಿನ ಕೊರತೆಯಿಂದ ಅಮೂಲ್ಯ ಅಂಗಾಂಗಗಳು ಮಣ್ಣು ಪಾಲಾಗುತ್ತಿವೆ. ಹಾಗಾಗಿ, ಈ ಕುರಿತು ಜಾಗೃತಿ ಮೂಡಿಸಲೂ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಮಾದಕ ವಸ್ತುಗಳು ಕೇವಲ ವ್ಯಕ್ತಿಯನ್ನು ಮಾತ್ರ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತದೆ. ನಮ್ಮಲ್ಲಿ ಉತ್ತಮವಾದ ಮಾನಸಿಕ ಅರೋಗ್ಯ ವಿಭಾಗ ಇದೆ. ಚಟದಿಂದ ಮುಕ್ತರಾಗಲು ಬಯಸುವವರು ಈ ವಿಭಾಗವನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.
ನಟಿ ತೇಜಸ್ವಿನಿ ಶರ್ಮಾ ಸೇರಿದಂತೆ ನಗರದ ವಿವಿಧ ಶಾಲಾ, ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದು, ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.