ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ದುಬಾರೆ ಸಾಕಾನೆ ಶಿಬಿರದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಸತತ ಮಳೆಯಿಂದಾಗಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ದುಬಾರೆ ಸಾಕಾನೆ ಶಿಬಿರ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಕಾವೇರಿ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದೋಣಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆನೆ ಶಿಬಿರಕ್ಕೂ ಪ್ರವಾಸಿಗರಿಗೆ ಪ್ರವೇಶ ಬಂದ್ ಮಾಡಲಾಗಿದೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ನಿರ್ಬಂಧ ಹೇರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ ಕಡಿತದಿಂದ ಗಿರಿಜನರ ಪರದಾಟ: ಪ್ರತಿ ವರ್ಷ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಕಾವೇರಿ ನದಿಯಿಂದ ದುಬಾರೆ ಸಂಪರ್ಕ ಕಡಿತಗೊಳ್ಳುತ್ತಿದ್ದು, ದುಬಾರೆ ಅರಣ್ಯ ಪ್ರದೇಶದಲ್ಲಿ ವಾಸಿಸುವ ಹತ್ತಾರು ಕುಟುಂಬಗಳು ಪರದಾಡುವಂತ ಪರಿಸ್ಥಿತಿ ಉಂಟಾಗುತ್ತಿದೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿಯಲ್ಲಿ ದೋಣಿ ಸಂಚಾರ ತುಂಬ ಅಪಾಯಕಾರಿ. ಈ ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬಹು ವರ್ಷ ಗಳ ಬೇಡಿಕೆ ಇದುವರೆಗೂ ಈಡೇರಿಲ್ಲ. ದುಬಾರೆಯಲ್ಲಿರುವ ಸುಮಾರು 40 ರಿಂದ 50 ಗಿರಿಜನ ಕುಟುಂಬಗಳಿಗೆ ಮಳೆಗಾಲದಲ್ಲಿ ಜೀವನ ನಿರ್ವಹಣೆ ನರಕಯಾತನೆಯಾಗಿದೆ. ಈ ಕುಟುಂಬಗಳು ಜೀವನೋಪಾಯಕ್ಕಾಗಿ ನಂಜರಾಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ ಗ್ರಾಮಗಳನ್ನು ಅವಲಂಬಿಸಿದ್ದಾರೆ.
ಗಿರಿಜನರು ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಕೂಲಿ, ಕೆಲಸಕ್ಕಾಗಿ ಆಸ್ಪತ್ರೆ, ಆಹಾರ,ಸಾಮಾಗ್ರಿ, ಖರೀದಿಗೆ ಹಾಗೂ ಶಿಕ್ಷಣಕ್ಕೆ ಅವರು ನಂಜರಾಯಪಟ್ಟಣ ಬರಬೇಕಾಗಿದೆ. ಗಿರಿಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಯಾಂತ್ರಿಕ ದೋಣಿಗಳ ಮೂಲಕವೇ ಸಂಚಾರ ಮಾಡಬೇಕಾದ ಅನಿರ್ವಾಯತೆ ಇದೆ. ಆದರೆ ತುಂಬಿದ ಕಾವೇರಿ ನದಿಯಲ್ಲಿ ದೋಣಿಗಳ ಮೂಲಕ ದಾಟುವುದು ಅಪಾಯಕಾರಿಯಾಗಿದೆ. ಕೆಲವು ಸಂದರ್ಭದಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾದಾಗ ಅವಘಡಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ತೂಗು ಸೇತುವೆ ನಿರ್ಮಾಣ ಮಾಡಿದರೆ ಪ್ರವಾಸಿಗರಿಗೆ ಮಾತ್ರವಲ್ಲದೆ ದುಬಾರೆ ಗಿರಿಜನರಿಗೂ ಅನುಕೂಲವಾಗುತ್ತದೆ.
ಕಣಿವೆ ತೂಗು ಸೇತುವೆಗೆ ಹಾನಿ:
ಕಣಿವೆ ರಾಮಲಿಂಗೇಶ್ವರ ದೇವಾಲಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿಗ್ರಾಮಗಳ ಜನರಿಗೆ ತುಂಬ ಅನುಕೂಲ ಉಂಟಾಗಿದೆ. ಆದರೆ ಈ ತೂಗು ಸೇತುವೆ ಹಾನಿಯಾಗಿದ್ದು ಅಪಾಯಕಾರಿ ಸೇತುವೆ ಮೇಲೆಯೆ ನಿತ್ಯ ನೂರಾರು ಜನರು ಸಂಚಾರ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿ ಕಾವೇರಿ ಹಾಗೂ ಹಾರಂಗಿ ನದಿಗಳು ಸಂಗಮಗೊಂಡು ಹರಿಯುವ ಈ ಪ್ರದೇಶದಲ್ಲಿ ಕಳೆದ ನಾಲ್ಕು ಐದು ವರ್ಷಗಳ ಹಿಂದೆ ತೂಗು ಸೇತುವೆಯ ಮಟ್ಟದಲ್ಲಿ ಹರಿದ ನದಿಯ ನೀರಿನಿಂದ ಸಂಪರ್ಕ ಕಡಿತಗೊಂಡಿತು. ಸೇತುವೆ ಹಾನಿಯಾಗಿ ಕೆಲವು ತಿಂಗಳುಗಳ ಕಾಲ ಜನ ಸಂಚಾರ ಬಂದ್ ಮಾಡಲಾಗಿತ್ತು. ಪಿರಿಯಾಪಟ್ಟಣ ತಾಲ್ಲೂಕಿನ ಚಾಮರಾಯನಕೋಟೆ ಮುತ್ತಿನ ಮುಳ್ಳುಸೋಗೆ ಅವರ್ತಿ ಹನುಮಂತ ಪುರ ಕಣಗಾಲ್ ಹಾಗೂ ಕೊಡಗಿನ ಕಣಿವೆ ರಾಮಪುರ ಭುವನಗಿರಿ ಹಕ್ಕೆ ಹುಲುಸೆ ಗ್ರಾಮಗಳ ಜನರಿಗೆ ತೊಂದರೆ ಉಂಟಾಗುತ್ತದೆ. ಪಿರಿಯಾಪಟ್ಟಣ ತಾಲ್ಲೂಕಿನ ಗಡಿಗ್ರಾಮಗಳ ವಿದ್ಯಾರ್ಥಿಗಳಿಗೆ ಕೂಡ್ಲೂರು ಕೈಗಾರಿಕಾ ಬಡಾವಣೆಗೆ ಹೋಗುವ ಕಾರ್ಮಿಕರಿಗೆ ಇದರಿಂದ ತುಂಬ ತೊಂದರೆಯಾಗುತ್ತದೆ.ಆದ್ದರಿಂದ ಹಾನಿಯಾಗಿರುವ ತೂಗು ಸೇತುವೆಯನ್ನು ದುರಸ್ತಿ ಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.