
ನಾಪೋಕ್ಲು: ಭಾಗಮಂಡಲ ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ಪಾಕ ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಚೇರಂಬಾಣೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ದೇವಾಲಯಕ್ಕೆ ಆಗಮಿಸಿ ಹರಕೆ ಸಲ್ಲಿಸಿದರು.
ಬೆಳಿಗ್ಗೆ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು ಪಾಕಹೊಳೆಯಲ್ಲಿ ಸ್ನಾನ ಮಾಡಿದರು. ಬಳಿಕ ಗಂಗಾ ಪೂಜೆ ನೆಡೆಯಿತು. ಮುಕ್ಕಾಟಿ ಐನ್ ಮನೆಗೆ ತೆರಳಿ ದುರ್ಗಾಪರಮೇಶ್ವರಿಗೆ ತೊಡಿಸುವ ಅಲಂಕಾರದ ವಸ್ತುಗಳನ್ನು ತಂದ ಬಳಿಕ ದೇವರ ಅಲಂಕಾರ ಪೂಜೆ ನಡೆಯಿತು. ನಂಬಿಕೆಯ ಪ್ರತೀಕವಾಗಿರುವ ಪಾಕ ನದಿಯ ಮೀನುಗಳಿಗೆ ಭಕ್ತರು ಅಕ್ಕಿಯನ್ನು ಹಾಕಿ ದೇವಾಲಯಕ್ಕೆ ಬಂದು ಹರಕೆಯನ್ನು ಸಲ್ಲಿಸಿದರು. ಬಳಿಕ ಮಹಾಪೂಜೆ ನಡೆಯಿತು.
ಊರಿನವರು ತಂದ ಅಕ್ಕಿಯನ್ನು ಪಾಯಸ ಮಾಡಿ ಭಕ್ತರಿಗೆ ವಿತರಿಸಲಾಯಿತು. ಮಂಗಳವಾರ ಕಳಸ ಪೂಜೆ ನಡೆಸಿ ಊರಿನವರು ಹರಕೆ ಸಲ್ಲಿಸುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.