ಮಡಿಕೇರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸೆ. 22ರಿಂದ ಅ. 7ರವರೆಗೆ ನಡೆಯಲಿರುವ ಸಮೀಕ್ಷೆ ವೇಳೆ ಆಧಾರ್ ಕಾರ್ಡ್ ಪಡೆದಿರುವ ಕುರಿತೂ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತಿದಾರರಿಗಾಗಿನ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಲವು ಆದಿವಾಸಿ ಕುಟುಂಬಗಳು ಇಂದಿಗೂ ಸಹ ಆಧಾರ ಕಾರ್ಡ್ ಪಡೆದಿಲ್ಲ. ಹಾಗೆಯೇ, ಕೆಲವು ಕುಟುಂಬಗಳಲ್ಲಿ ಪಡಿತರ ಚೀಟಿ ಸಹ ಇಲ್ಲ. ಇಂತಹ ಕುಟುಂಬಗಳಿಗೆ ಐಟಿಡಿಪಿ ಇಲಾಖೆ ಜೊತೆಗೂಡಿ ಆಧಾರ್ ಕಾರ್ಡ್ ಮಾಡಿಸಬೇಕು ಎಂದು ಅವರು ಸಲಹೆ ಮಾಡಿದರು.
‘ಸಮೀಕ್ಷೆ ಸಂದರ್ಭದಲ್ಲಿ ಪ್ರಮುಖವಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಹಾಗೂ ಮೊಬೈಲ್ ಸಂಪರ್ಕ ಇಲ್ಲದ ಕಡೆಗಳಲ್ಲಿ ಹೆಚ್ಚಿನ ಗಮನಹರಿಸುವುದು ಅತ್ಯಗತ್ಯ’ ಎಂದೂ ಹೇಳಿದರು.
ಒಟ್ಟಾರೆ, ಯಾವುದೇ ಕಾರಣದಿಂದಲೂ ಯಾವುದೇ ಒಂದೂ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಸಮೀಕ್ಷಾ ಕಾರ್ಯ ಶೇ 100ರಷ್ಟು ಪೂರ್ಣವಾಗಬೇಕು ಎಂದು ನಿರ್ದೇಶನ ನೀಡಿದರು.
ಸೆ. 22ರ ಆರಂಭದಲ್ಲಿಯೇ ಸಮೀಕ್ಷೆಯ ವೇಗವನ್ನು ಹೆಚ್ಚಿಸಬೇಕು. ಪ್ರತೀ ನಾಗರಿಕ ಕುಟುಂಬವನ್ನು ಸಮೀಕ್ಷೆಗೆ ಒಳಪಡಿಸಬೇಕು. ಸಮೀಕ್ಷೆ ನಂತರ ಬೇಕಂತಲೇ ಸಮೀಕ್ಷೆಗೆ ಬಂದಿಲ್ಲ ಎಂಬ ದೂರುಗಳು ಸಹ ಬರುತ್ತವೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಶೇ 100 ರಷ್ಟು ಸಮೀಕ್ಷೆ ನಡೆಸುವುದರ ಜೊತೆಗೆ ಸಮೀಕ್ಷೆ ಎರಡೆರಡು ಬಾರಿ ಆಗದಂತೆಯೂ ಸಹ ಎಚ್ಚರವಹಿಸಬೇಕು ಎಂದು ಅವರು ತಿಳಿಸಿದರು.
ಸಮೀಕ್ಷೆ ವೇಳೆ ಸುಮಾರು 60 ಪ್ರಶ್ನಾವಳಿಗಳಿದ್ದು, ಕುಟುಂಬಗಳಿಂದ ಮಾಹಿತಿ ಪಡೆದು ಆ್ಯಪ್ ಮೂಲಕವೇ ಸಮೀಕ್ಷೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ‘ಜಿಲ್ಲೆಯ ಎಲ್ಲಾ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ ಈ ಕುರಿತು ಮನೆಗಳ ಜಿಯೊ ಟ್ಯಾಗ್ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವು ಸೆಪ್ಟೆಂಬರ್, 22 ರಿಂದ ಅಕ್ಟೋಬರ್, 07 ರವರೆಗೆ ನಡೆಯಲಿದೆ. ಸಮೀಕ್ಷೆಗಾಗಿ ವಿಶೇಷ ಆ್ಯಪ್ ನಿಗದಿಪಡಿಸಲಾಗಿದೆ ಎಂದರು.
ಮಾಸ್ಟರ್ ತರಬೇತಿದಾರರಾದ ಪ್ರಸನ್ನ, ಕೃಷ್ಣಮೂರ್ತಿ, ಜೀವನ್ ಕುಮಾರ್, ನಾರಾಯಣ, ಗುರುಸ್ವಾಮಿ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಆ್ಯಪ್ ಮೂಲಕ ಸಮೀಕ್ಷೆ ನಡೆಸುವ ಬಗ್ಗೆ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ತಹಶೀಲ್ದಾರ್ ಪ್ರವೀಣ್ ಕುಮಾರ್, ಶ್ರೀಧರ, ಕಿರಣ್ ಗೌರಯ್ಯ, ಕೃಷ್ಣಮೂರ್ತಿ, ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್, ಆನಂದ, ಕೃಷ್ಣಪ್ಪ, 30 ಮಂದಿ ಮಾಸ್ಟರ್ ತರಬೇತಿದಾರರು, ವಿವಿಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಹಂತದಲ್ಲಿ ಆಯ್ಕೆ ಮಾಡಿದ್ದ ಮಾಸ್ಟರ್ ಟ್ರೈನರ್ ಅವರು ತರಬೇತಿ ನೀಡುತ್ತಿದ್ದು ಸಂಶಯಗಳಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು.ಆರ್.ಐಶ್ವರ್ಯ ಹೆಚ್ಚುವರಿ ಜಿಲ್ಲಾಧಿಕಾರಿ.
150 ಕುಟುಂಬಕ್ಕೆ ಒಬ್ಬ ಸಮೀಕ್ಷಾದಾರ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೀಪಕ್ ಮಾತನಾಡಿ ‘ಸಮೀಕ್ಷೆಯಲ್ಲಿ 150 ಕುಟುಂಬಕ್ಕೆ ಒಬ್ಬ ಸಮೀಕ್ಷೆದಾರರನ್ನು ನೇಮಿಸಲಾಗುತ್ತದೆ’ ಎಂದು ತಿಳಿಸಿದರು. ಈಗಾಗಲೇ ಪ್ರತೀ ಕುಟುಂಬಕ್ಕೂ ಸಾಮಾಜಿಕ ಮತ್ತು ಶೈಕ್ಷಣಿಕ ಸಂಬಂಧ ಮನೆಮನೆಗೆ ಸ್ಟಿಕ್ಕರ್ ಅಳವಡಿಸಿಕೊಂಡು ಬರಲಾಗುತ್ತಿದ್ದು ಶೇ 75ರಷ್ಟು ಪ್ರಗತಿ ಸಾಧಿಸಲಾಗಿದೆ. ಉಳಿದಂತೆ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.