ADVERTISEMENT

ಮಡಿಕೇರಿ: ಕಸಾಪ ಚುನಾವಣೆ ಕಾವು ಜೋರು

ಎಂ.ಪಿ.ಕೇಶವ ಕಾಮತ್‌, ಲೋಕೇಶ್‌ ಸಾಗರ್ ನಡುವೆ ಪೈಪೋಟಿ, ಬಿರುಸಿನ ಪ್ರಚಾರ

ಅದಿತ್ಯ ಕೆ.ಎ.
Published 4 ನವೆಂಬರ್ 2021, 19:30 IST
Last Updated 4 ನವೆಂಬರ್ 2021, 19:30 IST
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ಕೇಶವ ಕಾಮತ್ ಮತ್ತು ಸಂಗಡಿಗರು ಮಡಿಕೇರಿ ತಾಲ್ಲೂಕಿನ ಕಾರುಗುಂದ ಗ್ರಾಮದ ಸದಸ್ಯ ನಾಟೋಳಂಡ ಚರ್ಮಣ್ಣ ಅವರಲ್ಲಿ ಮತಯಾಚಿಸಿದರು. ಪರಿಷತ್‌ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಾಹಿತಿ ಮನುಶೆಣೈ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ್ ಕ್ರಾಸ್ತಾ ಇದ್ದರು
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ಕೇಶವ ಕಾಮತ್ ಮತ್ತು ಸಂಗಡಿಗರು ಮಡಿಕೇರಿ ತಾಲ್ಲೂಕಿನ ಕಾರುಗುಂದ ಗ್ರಾಮದ ಸದಸ್ಯ ನಾಟೋಳಂಡ ಚರ್ಮಣ್ಣ ಅವರಲ್ಲಿ ಮತಯಾಚಿಸಿದರು. ಪರಿಷತ್‌ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಾಹಿತಿ ಮನುಶೆಣೈ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫರ್ಡ್ ಕ್ರಾಸ್ತಾ ಇದ್ದರು   

ಮಡಿಕೇರಿ: ಕೊಡಗಿನಲ್ಲೂ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯ ಕಾವು ಜೋರಾಗಿದೆ. ಈ ಹಿಂದೆ ರದ್ದುಗೊಂಡಿದ್ದ ಚುನಾವಣೆಯು ನ.21ರಂದು ನಡೆಯುತ್ತಿದೆ. ಕನ್ನಡದ ತೇರು ಎಳೆಯಲು ಚುನಾವಣೆಗೆ ಸ್ಪರ್ಧಿಸಿರುವ ಆಕಾಂಕ್ಷಿಗಳು ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದಾರೆ.

ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗ ಅಧ್ಯಕ್ಷ ಎಂ.ಪಿ.ಕೇಶಕಾಮತ್‌ ಹಾಗೂ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಲೋಕೇಶ್‌ ಸಾಗರ್‌ ನಡುವೆ ಸ್ಪರ್ಧೆ ತೀವ್ರವಾಗಿದೆ. ಜಿಲ್ಲೆಯ ಸಾಹಿತ್ಯಾಭಿಮಾನಿಗಳಲ್ಲೂ ಈ ಚುನಾವಣೆ ಕುತೂಹಲ ಮೂಡಿಸಿದೆ.

ಇಬ್ಬರೂ ತಮ್ಮದೇ ಸಾಹಿತ್ಯಾಭಿಮಾನಿಗಳೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಕೋವಿಡ್ ಕಾರಣಕ್ಕೆ ಕಳೆದ ಬಾರಿ ಚುನಾವಣೆ ರದ್ದುಗೊಂಡಿತ್ತು. ಹೀಗಾಗಿ, ಇಬ್ಬರಿಗೂ ಮತ್ತೆ ಪ್ರಚಾರ ನಡೆಸುವಂತಾಗಿದೆ.

ADVERTISEMENT

ಪ್ರಬಲ ಪೈಪೋಟಿವೊಡ್ಡುತ್ತಿರುವ ಕೇಶವಕಾಮತ್‌ ಅವರು ‘ಪ್ರತಿಯೊಬ್ಬರ ಆಡಳಿತ ಅವಧಿಯಲ್ಲೂ ನನಗೆ ಕನ್ನಡ ಸೇವೆಗೆ ಅವಕಾಶ ಸಿಕ್ಕಿದೆ. ಈಗ ಕನ್ನಡ ತೇರನ್ನು ಮುನ್ನೆಡಸಲು ಅವಕಾಶ ನೀಡಿ’ ಎಂದು ಮನವಿ ಮಾಡುತ್ತಿದ್ದಾರೆ.

ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ, ಪೊನ್ನಂಪೇಟೆ ಹೋಬಳಿ ಘಟಕದ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿ ಕಾಮತ್‌ ಅವರು ಕಾರ್ಯ ನಿರ್ವಹಿಸಿದ್ದರು. ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಸಂಚಾಲಕರಾಗಿ ಕೆಲಸ ಮಾಡಿದ್ದರು. ಸಮ್ಮೇಳನಕ್ಕೆ ಸೇರಿದ್ದ 2 ಲಕ್ಷಕ್ಕೂ ಹೆಚ್ಚಿನ ಕನ್ನಡಾಭಿಮಾನಿಗಳಿಗೆ ಉಟೋಪಚಾರದ ವ್ಯವಸ್ಥೆ ಮಾಡಿ ‘ಸೈ’ ಎನಿಸಿಕೊಂಡಿದ್ದರು. ಒಮ್ಮೆ ಕನ್ನಡ ಸೇವೆಗೆ ಅವಕಾಶ ನೀಡಿ ಎಂಬುದು ಕಾಮತ್‌ ಅವರ ಮನವಿ.

‘ಮತ್ತೊಮ್ಮೆ ಪ್ರಚಾರ ನಡೆಸುತ್ತಿದ್ದೇನೆ. ಸಾಹಿತ್ಯ ಕ್ಷೇತ್ರದಿಂದ ಉತ್ತಮ ಬೆಂಬಲ ಸಿಗುತ್ತಿದೆ. ಸೇವೆಗೆ ಅವಕಾಶ ನೀಡುತ್ತಾರೆಂಬ ನಂಬಿಕೆಯಿದೆ’ ಎಂದು ಕೇಶವಕಾಮತ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಲಾಕ್‌ಡೌನ್‌ ಅವಧಿಯಲ್ಲೂ ಸಾಹಿತ್ಯ ಚಟುವಟಿಕೆಗೆ ಕಲಾವಿದರ ಬಳಗದಿಂದ ಅವಕಾಶ ನೀಡಲಾಗಿತ್ತು. ಜಾನಪದ ಹಾಡುಗಾರಿಕೆ, ಭಾವಗೀತೆ ಗಾಯನ, ದಾಸರ ಪದಗಳ ಗಾಯನ, ವಚನ ಗೀತೆಗಳ ಗಾಯನ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಬಳಗದಿಂದ ಸಾಹಿತ್ಯ ಸಂವಾದ ಆಯೋಜಿಸಲಾಗಿತ್ತು’ ಎಂದು ಸದಸ್ಯರಿಗೆ ಮಾಹಿತಿ ನೀಡುತ್ತಿದ್ದಾರೆ ಕಾಮತ್‌ ಅವರು.

‘ಮಡಿಕೇರಿಯಲ್ಲಿ 60 ಸೆಂಟ್‌ನಷ್ಟು ಜಾಗವಿದ್ದರೂ ಹಿಂದಿನ ಅಧ್ಯಕ್ಷರಿಗೆ ಕನ್ನಡ ಭವನ ನಿರ್ಮಾಣ ಸಾಧ್ಯವಾಗಿಲ್ಲ. ನಮಗೆ ಅವಕಾಶ ನೀಡಿದರೆ ಸುಸಜ್ಜಿತ ಕನ್ನಡ ಭವನ ನಿರ್ಮಿಸುತ್ತೇವೆ’ ಎಂದು ಕಾಮತ್‌ ಭರವಸೆ ನೀಡಿದ್ದಾರೆ.

‘ಮತ್ತೊಮ್ಮೆ ಅವಕಾಶ ನೀಡಿ’

‘ನನ್ನ ಹಿಂದಿನ ಅವಧಿಯಲ್ಲಿ ಸಾಕಷ್ಟು ಸಮ್ಮೇಳನ ನಡೆಸಿದ್ದೇನೆ. ಕೊರೊನಾ ಹಾಗೂ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಿಂದ ಇನ್ನೂ ಹಲವು ಯೋಜನೆಗಳ ಜಾರಿ ಸಾಧ್ಯವಾಗಿಲ್ಲ. ಮುಂದೆಯೂ ಅವಕಾಶ ನೀಡಿದರೆ, ಕನ್ನಡದ ಬೆಳವಣಿಗೆಗೆ ಇನ್ನಷ್ಟು ಶ್ರಮಿಸುತ್ತೇನೆ’ ಎಂದು ಲೋಕೇಶ್‌ ಪ್ರಚಾರದ ವೇಳೆ ಹೇಳಿಕೊಳ್ಳುತ್ತಿದ್ದಾರೆ. ಯಾರಿಗೆ ಮತದಾರರು ಅವಕಾಶ ನೀಡಲಿದ್ದಾರೆ ಎಂಬುದಕ್ಕೆ ಫಲಿತಾಂಶದಲ್ಲಿ ಉತ್ತರ ಸಿಗಲಿದೆ.

ಯಾರಿಗೆ ಮತದಾನದ ಅವಕಾಶ?

ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯರಾಗಿ ಮೂರು ವರ್ಷದ ಅವಧಿ ಪೂರೈಸಿದವರಿಗೆ ಮತದಾನದ ಹಕ್ಕಿದೆ. ತಹಶೀಲ್ದಾರ್‌ ಅವರು ಈ ಹಿಂದೆಯೇ ಮತದಾರರ ಪಟ್ಟಿ ಪ್ರಕಟಿಸಿದ್ದರು. ಕೊಡಗು ಜಿಲ್ಲೆಯ ಐದು ತಾಲ್ಲೂಕಿನಲ್ಲಿ 2,422 ಮಂದಿ ಮತದಾರರು ಇದ್ದು, ಅವರಿಗೆ ಕನ್ನಡದ ತೇರು ಎಳೆಯುವ ನಾಯಕನ ಆಯ್ಕೆ ಮಾಡುವ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.