ADVERTISEMENT

ದುಷ್ಕರ್ಮಿಗಳಿಂದ ಗುಂಡಿನ ದಾಳಿ: ಕಾಡಾನೆ ಬಲಿ 

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 13:34 IST
Last Updated 4 ಏಪ್ರಿಲ್ 2019, 13:34 IST
   

ವಿರಾಜಪೇಟೆ: ಸಮೀಪದ ಕೆದಮಳ್ಳೂರು ಬಳಿಯ ಪಾಲಂಗಾಲದಲ್ಲಿ ಮರಿಯಾನೆ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಮಾರ್ಚ್‌ 30ರಂದು ಕಾಫಿ ತೋಟದಲ್ಲಿದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದಿದ್ದ ಇದೇ ಮರಿಯಾನೆ ಮೇಲೆ ಗುರುವಾರ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಅಂದು ಕೆರೆಗೆ ಬಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ಈ ಮರಿಯಾನೆ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ರಕ್ಷಣೆ ಮಾಡಿದ್ದರು. ಕೆರೆಯಿಂದ ಮೇಲೆದ್ದು ಬಮದಿದ್ದ ಮರಿಯಾನೆ ಗಾಬರಿಯಿಂದ ಓಡುತ್ತಿದ್ದಾಗ ದಾರಿಯಲ್ಲಿದ್ದ ಜೀಪು, ಕಾರು ಹಾಗೂ ಒಂದು ಬೈಕ್‌ ಅನ್ನು ಜಖಂಗೊಳಿಸಿತ್ತು. ನಾಲ್ಕು ದಿನಗಳಿಂದ ಹೆಗ್ಗಳ, ಬೂದಿಮಾಳ, ಕೆದಮುಳ್ಳೂರು, ಪಾಲಂಗಾಲದಲ್ಲಿ ಇದೇ ಮರಿಯಾನೆ ಕಾಣಿಸಿಕೊಂಡಿತ್ತು.

ADVERTISEMENT

ಈಗ ಪಾಲಂಗಾಲ ಗ್ರಾಮದ ಕಾಫಿತೋಟದ ಅಂಚಿನ ಗದ್ದೆಯಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಆನೆಯ ಹೊಟ್ಟೆಯ ಬಲ ಭಾಗಕ್ಕೆ ಗುಂಡೇಟು ಬಿದ್ದಿದೆ.

ವಿರಾಜಪೇಟೆ ಪಶುವೈದ್ಯರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೇಬರ ಹೂಳಲಾಯಿತು. ಆನೆಯ ಹತ್ಯೆ ಪ್ರಕರಣ ಸಂಬಂಧ ದೂರು ದಾಖಲಾಗಿದೆ.

2018ರ ಮಾರ್ಚ್‌ನಲ್ಲೂ ಇದೇ ಗ್ರಾಮದ ಕಾಫಿ ತೋಟವೊಂದಕ್ಕೆ ಲಗ್ಗೆಯಿಟ್ಟಿದ್ದ ಗಂಡಾನೆಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈಗ ಮತ್ತೊಂದು ಕೃತ್ಯ ನಡೆದಿದ್ದು, ವನ್ಯಜೀವಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.