ADVERTISEMENT

ಕಾಫಿ ತೋಟಕ್ಕೆ ಮತ್ತೆ ಕಾಡಾನೆಗಳ ಲಗ್ಗೆ: ಕೊನೆಗೂ ಯಶಸ್ವಿಯಾದ ಕಾರ್ಯಾಚರಣೆ

ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ 20 ಕಾಡಾನೆ ಹಿಂಡು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 12:25 IST
Last Updated 19 ಏಪ್ರಿಲ್ 2020, 12:25 IST
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ  
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ     

ಸಿದ್ದಾಪುರ (ಕೊಡಗು): ಲಾಕ್‌ಡೌನ್‌ನಿಂದ ಕೊಡಗು ಜಿಲ್ಲೆಯ ಬಹತೇಕ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಸ್ಥಗಿತಗೊಂಡಿದೆ. ಈ ಸಂಕಷ್ಟದ ನಡುವೆಯೇ ಕಾಡಾನೆ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ ಗಿಡ ನಾಶ ಪಡಿಸುತ್ತಿದ್ದು ಬೆಳೆಗಾರರಿಗೆ ನೋವು ತಂದಿದೆ.

ನೆಲ್ಯಹುದಿಕೇರಿ ಹಾಗೂ ವಾಲ್ನೂರು- ತ್ಯಾಗತ್ತೂರು ವ್ಯಾಪ್ತಿಯ ಕಾಫಿ ಎಸ್ಟೇಟ್‌ಗಳಲ್ಲಿ ಕಳೆದ ಕೆಲವು ದಿನಗಳಿಂದ ನಾಲ್ಕು ಮರಿ ಸಹಿತ 20 ಕಾಡಾನೆಗಳಿದ್ದ ಹಿಂಡು ಬೀಡುಬಿಟ್ಟಿತ್ತು. ಶನಿವಾರ ದಿನವಿಡೀ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬರಡಿ ಮೂಲಕ ಅರಣ್ಯಕ್ಕೆ ಅಟ್ಟಲು ಯತ್ನಿಸಿದ್ದರು. ಸಂಜೆಯ ವೇಳೆಗೆ ತೋಟ ಬಿಟ್ಟು ಅರಣ್ಯದತ್ತ ತೆರಳಿದ್ದ ಕಾಡಾನೆಗಳು ಕಾರ್ಯಾಚರಣೆ ಸಿಬ್ಬಂದಿ ವಾಪಸ್ಸಾದ ಬಳಿಕ ಮತ್ತೆ ತೋಟ ಸೇರಿಕೊಂಡಿದ್ದವು.

ಮರಿಗಳು ತೋಟದಲ್ಲೇ ಉಳಿದಿದ್ದ ಪರಿಣಾಮ ಗಾಳಿಯಲ್ಲಿ ಗುಂಡು, ಪಟಾಕಿ ಶಬ್ದಕ್ಕೂ ಬೆದರದೆ ಆನೆಗಳು ಮತ್ತೆ ತೋಟ ಸೇರಿಕೊಂಡಿದ್ದವು. ಶನಿವಾರ ಕತ್ತಲಾದ ಕಾರಣಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ರಾತ್ರಿ ವೇಳೆ ಕಾಡಾನೆಗಳು ತೋಟಕ್ಕೆ ಬಂದು ದಾಂದಲೆ ನಡೆಸಿ, ಕಾಫಿ ಗಿಡಗಳನ್ನು ನಾಶ ಪಡಿಸಿವೆ ಎಂದು ಬೆಳೆಗಾರರು ನೋವು ತೋಡಿಕೊಂಡಿದ್ದಾರೆ.

ADVERTISEMENT

ಭಾನುವಾರ ಬೆಳಿಗ್ಗೆಯೇ ಮತ್ತೆ ಕಾರ್ಯಾಚರಣೆ ಆರಂಭಿಸಿ, ಮರಿಯಾನೆ ಸೇರಿದಂತೆ ಸುಮಾರು 20 ಕಾಡಾನೆಗಳಿದ್ದ ಹಿಂಡನ್ನು ಬರಡಿಯ ಮೂಲಕ ಕಾವೇರಿ ನದಿ ದಾಟಿಸಿ ಮಾಲ್ದಾರೆಯ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಲಾಗಿದೆ ಎಂದು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೆ ಉಪಟಳ:ಕಳೆದ ಕೆಲವು ದಿನಗಳಿಂದ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಕಡಿಮೆಯಾಗಿತ್ತು. ಈಗ ಅರಣ್ಯ ಪ್ರದೇಶದಲ್ಲಿ ಆಹಾರದ ಕೊರತೆಯಾಗಿದ್ದು ತೋಟದತ್ತ ಆನೆಗಳು ಲಗ್ಗೆಯಿಡುತ್ತಿವೆ. ಮತ್ತೆ ಕಾಫಿ ಬೆಳೆಗಾರರಲ್ಲಿ ಆತಂಕ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.