ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ತೋಟ ಮತ್ತು ಮನೆಗಳ ಸುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಪಟ್ಟಣದ ಅಂಚಿನಲ್ಲಿರುವ ಉಲುಗುಲಿ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟಿವೆ. ಕಾಫಿ, ತೆಂಗು, ಅಡಿಕೆ, ಜೇನುಪೆಟ್ಟಿಗೆ ಗಿಡಗಳನ್ನು ಧ್ವಂಸಗೊಳಿಸಿವೆ. ತೋಟದಲ್ಲಿದ್ದ ನೀರಿನ ಟ್ಯಾಂಕ್ ಅನ್ನು ಕೋರೆಯಿಂದ ತಿವಿದು ಹಾನಿಗೊಳಿಸಿವೆ.
ಇಲ್ಲಿ ಮಾತ್ರವಲ್ಲ ತೊಂಡೂರು, ಏಳಲನೇ ಹೊಸಕೋಟೆ, ಹೆರೂರು, ಹೊರೂರು, ಮತ್ತಿಕಾಡು, ಗುಂಡುಗುಟ್ಟಿ, ಪನ್ಯ, ಕಾಜೂರು, ಕಂಬಿಬಾಣೆ, ಚೆಟ್ಟಳ್ಳಿ, ಜಂಬೂರು, ನಾಕೂರು ಶಿರಂಗಾಲ, ಸೇರಿದಂತೆ ಹಲವು ತೋಟಗಳಲ್ಲಿ ಕಾಡಾನೆಗಳು ಹೆಚ್ಚಿನ ಹಾನಿ ಮಾಡಿವೆ.
ಬಾಳೆ, ಕಾಫಿ, ಹಲಸು, ಪಪ್ಪಾಯಿ, ಕರಿಮೆಣಸು, ಪೊಂಗರೆ ಮತ್ತಿತರ ಗಿಡಗಳನ್ನು ನಾಶಪಡಿಸಿರುವ ಕಾಡಾನೆಗಳು ಜನವಸತಿ ಪ್ರದೇಶಗಳಲ್ಲೂ ಕಾಣಿಸತೊಡಗಿದ್ದು, ಜನರು ಭಯದಲ್ಲೇ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸಮೀಪದ ಏಳನೇ ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ವಾರದಿಂದ ನಿರಂತರವಾಗಿ ರಾತ್ರಿ 7 ಗಂಟೆಯಿಂದ ರಾತ್ರಿ 11ಗಂಟೆಯ ಸಮಯದಲ್ಲಿ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ವಾಹನ ಚಾಲಕರು ಆತಂಕಗೊಂಡಿದ್ದಾರೆ.
ಏಳನೇ ಹೊಸಕೋಟೆಯ ವ್ಯಾಪ್ತಿಯಲ್ಲೂ ಕಾಡಾನೆಗಳಿದ್ದು, ತೊಡೂರು ಗ್ರಾಮದ ಮನೆಗಳತ್ತ ಸಂಚರಿಸಿ ಆತಂಕ ಮೂಡಿಸಿವೆ. ಇದರಿಂದಾಗಿ ನಿವಾಸಿಗಳು ಮನೆ ಬಿಟ್ಟು ಹೊರಗೆ ಬರದಂತಹ ಸ್ಥಿತಿ ಎದುರಾಗಿದೆ.
ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಗುಂಡುಗುಟ್ಟಿ ಮತ್ತು ಪನ್ಯದ ತೋಟಗಳಲ್ಲಿ ಕಾಡಾನೆಗಳು ಮರಿಯೊಂದಿಗೆ ಬೀಡುಬಿ ಟ್ಟು ಫಸಲು ಭರಿತ ಬೆಳೆಗಳನ್ನು ನಾಶಪಡಿಸುತ್ತಿವೆ.
ಗುಂಡುಗುಟ್ಟಿ ತೋಟದ ರಸ್ತೆ ಬದಿಯ ತಂತಿಬೇಲಿಯನ್ನು ಮುರಿದು ತೋಟದಲ್ಲಿದ್ದ ಕರಿಮೆಣಸು, ಕಾಫಿ, ಬಿದಿರು ಗಿಡಗಳನ್ನು ತುಳಿದು ಹಾಕಿ ನಂತರ ಅಲ್ಲೇ ಅನತಿ ದೂರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಬಿದಿರುಗಳನ್ನು ಮುರಿದು ಹಾಕಿವೆ.
ಗುಂಡುಗುಟ್ಟಿ ಗ್ರಾಮದ ಮುತ್ತಿನ ತೋಟ, ಸಮೀಪದ ಪನ್ಯದಲ್ಲಿರುವ ಕೆ.ಪಿ.ಜಗನ್ನಾಥ್ ಅವರ ತೋಟ, ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ, ಐಗೂರು ಗ್ರಾಮದ ಹಾರಂಗಿ ಹಿನ್ನಿರಿನ ಪ್ರದೇಶದಲ್ಲಿ ಕಾಡಾನೆಗಳು ಬೆಳೆಗಳನ್ನು ನಾಶಪಡಿಸಿವೆ.
ಒಂದು ತಿಂಗಳುಗಳಿಂದ ಕಂಬಿಬಾಣೆ ಸುತ್ತಲಿನ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದೆ. ಕಂಬಿಬಾಣೆ ಕಾಫಿ ಬೆಳೆಗಾರ ಚಂದ್ರ, ಶಿವ ಅವರಿಗೆ ಸೇರಿದ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಕಾಫಿ, ಮೆಣಸು, ಬಾಳೆ ಗಿಡಗಳನ್ನು ನಾಶಪಡಿಸಿದೆ.
ತೋಟದ ಬೆಳೆಗಳನ್ನು ಧ್ವಂಸಗೊಳಿಸುತ್ತಿದ್ದ ಕಾಡಾನೆಗಳು ಇದೀಗ ಹಗಲು ವೇಳೆಯಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವುದು ಭಯ ಉಂಟು ಮಾಡಿದೆದಿನೇಶ್ ತೊಂಡೂರು ನಿವಾಸಿ
ಕಾಡಾನೆಗಳು ಫಸಲು ಮಾತ್ರವಲ್ಲ ಜನರ ಪ್ರಾಣಕ್ಕೂ ಅಪಾಯ ತರುವ ಸಾಧ್ಯತೆ ಇದೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕುಅಬ್ಧುಲ್ ಸಲಾಂ ಉಲುಗುಲಿ
ಹಿಂದೇಟು ಹಾಕುವ ಆಟೊ ಚಾಲಕರು ರಾತ್ರಿ ವೇಳೆಯಲ್ಲಿ ಕಾಡಾನೆಗಳು ಗ್ರಾಮಗಳ ರಸ್ತೆ ಮತ್ತು ತೋಟಗಳಲ್ಲಿ ಸಂಚರಿಸುತ್ತಿರುವುದರಿಂದ ಆ ಗ್ರಾಮಗಳಿಗೆ ಬಾಡಿಗೆಗೆ ಹೋಗಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ದೂರದ ಪ್ರಯಾಣ ಮುಗಿಸಿ ಸುಂಟಿಕೊಪ್ಪ ಬಸ್ ನಿಲ್ದಾಣಕ್ಕೆ ಬಂದು ಹೊರೂರು ಹೆರೂರು ನಾಕೂರು ಶಿರಂಗಾಲ ತೊಂಡೂರು ಕಂಬಿಬಾಣೆಗಳಿಗೆ ಆಟೊ ಬಾಡಿಗೆಗೆ ಕರೆದರೆ ಚಾಲಕರು ಮುಂಜಾನೆ ಆಗುವವರೆಗೆ ಆ ಸ್ಥಳಕ್ಕೆ ಬರುವುದಿಲ್ಲ ಎನ್ನುತ್ತಾರೆ. ಇದರಿಂದಾಗಿ ಬೆಳಗಿನವರೆಗೂ ಅಂಗಡಿಗಳ ಮುಂದೆ ಕುಳಿತು ಕಾಲಕಳೆದು ಬೆಳಕಾದ ಮೇಲೆ ಬಾಡಿಗೆ ಆಟೊ ಹಿಡಿದು ಹೋಗುವ ಸ್ಥಿತಿ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.