ADVERTISEMENT

ವಚನ ಸಾಹಿತ್ಯದ ಮಾನವೀಯತೆ ಮೈಗೂಡಿಸಿಕೊಳ್ಳಿ: ಸಿ.ಸೋಮಶೇಖರ್

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:45 IST
Last Updated 4 ಜುಲೈ 2025, 5:45 IST
ಕುಶಾಲನಗರ ಸಮೀಪದ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ನಡೆದ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ.ಸೋಮಶೇಖರ್ ಉದ್ಘಾಟಿಸಿದರು
ಕುಶಾಲನಗರ ಸಮೀಪದ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ನಡೆದ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ.ಸೋಮಶೇಖರ್ ಉದ್ಘಾಟಿಸಿದರು   

ಕುಶಾಲನಗರ: ಯುವಕರು ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಮಾನವೀಯತೆ ಮೈಗೂಡಿಸಿಕೊಳ್ಳಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ.ಸೋಮಶೇಖರ್ ಸಲಹೆ ನೀಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ವಿಶ್ವ ವಿದ್ಯಾಲಯದ ವತಿಯಿಂದ ಚಿಕ್ಕ ಅಳುವಾರದ ಕಾವೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವಚನ ಸಾಹಿತ್ಯವನ್ನು ಶೋಧಿಸಿ, ಸಂರಕ್ಷಿಸಿ, ಅಚ್ಚುಹಾಕಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡುವ ಮೂಲಕ ಕನ್ನಡ ನಾಡನ್ನು ಕೈಲಾಸ ಮಾಡಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದರು.

ADVERTISEMENT

‘ಶಾಲೆಗಳು ಹಾಗೂ ಸಹಕಾರಿ ಸಂಘಗಳನ್ನು ತೆರೆದು ಅಪಾರ ಕನ್ನಡಿಗರಿಗೆ ಹೊಸ ಬದುಕು ಕೊಟ್ಟ ಅಪ್ಪಟ ಕನ್ನಡಿಗ. ಇಂತಹ ಆದರ್ಶ ವ್ಯಕ್ತಿಗಳ ವ್ಯಕ್ತಿತ್ವ ಇಂದಿನ ಯುವಕರಿಗೆ ಮಾದರಿಯಾಗಬೇಕು’ ಎಂದರು.

ಹಾಸನ ವಿಶ್ವವಿದ್ಯಾಲಯದ ಕುಲಪತಿ ಟಿ.ಸಿ.ತಾರಾನಾಥ್ ಮಾತನಾಡಿ, ‘ಫ.ಗು.ಹಳಕಟ್ಟಿಯವರ ಸಮಗ್ರ ಜೀವನ ಕೇವಲ ವಚನ ಸಾಹಿತ್ಯವಲ್ಲ. ನಾಡಿನ ಶ್ರೇಷ್ಠ ಕವಿ ಚೆನ್ನವೀರಕಣವಿ ಅವರು ಬರೆದಂತೆ ಅವರ ಸತ್ಕಾರ್ಯಗಳು ಸಮಾಜದ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿತ್ತು. ಫ.ಗು.ಹಳಕಟ್ಟಿ ಅವರ ಕಾಯ, ಕರ್ಮ, ತೊಡುಗೆ ಸಮನ್ವಯವಾಗಿತ್ತು’ ಎಂದರು.

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಸಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ‘12ನೇ ಶತಮಾನದ ಕಲ್ಯಾಣದಲ್ಲಿ ನಡೆದ ಕ್ರಾಂತಿಯಿಂದಾಗಿ ಹಾಳಾಗಿದ್ದ ವಚನಗಳ ತಾಡೋಲೆಗಳನ್ನು ಸಂಗ್ರಹಿಸಿ, ಸಂಶೋಧಿಸಿ, ಅಚ್ಚುಹಾಕಿಸಿ ಲಕ್ಷಾಂತರ ವಚನಗಳನ್ನು ಜನಮಾನಸಕ್ಕೆ ತಲುಪಿಸಲು ಸಾಧ್ಯವಾಯಿತು.
ಫ.ಗು.ಹಳಕಟ್ಟಿ ಈ ಶತಮಾನ ಕಂಡ ಶ್ರೇಷ್ಟ ದಾರ್ಶನಿಕ ಸಂತ’ ಎಂದರು.

ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಪೀಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ‘ಶರಣರ ವಿಚಾರಧಾರೆಗಳು ಸರ್ವಕಾಲಕ್ಕೂ ಅತೀತವಾದುದು. ಅಳಿಯುತ್ತಿದ್ದ ವಚನ ಸಾಹಿತ್ಯವನ್ನು ಉಳಿಸುವಲ್ಲಿ ಹಳಕಟ್ಟಿಯವರು ಶ್ರಮಿಸಿದ್ದರಿಂದಲೇ ಈ ಸಾಹಿತ್ಯವನ್ನು ಉಳಿಸಿ ಬೆಳೆಸಿ ಜನಮಾನಸದಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಸುತ್ತೂರು ಮಠದ ರಾಜೇಂದ್ರ ಸ್ವಾಮೀಜಿಯವರು ಶರಣ ಸಾಹಿತ್ಯ ಪರಿಷತ್ತು ರಚಿಸಿ ನಾಡಿನಾದ್ಯಂತ ಇಂತಹ ಮೌಲಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ’ ಎಂದರು.

ಕೊಡಗು ವಿವಿ ಕುಲಸಚಿವ ಸುರೇಶ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇರ ಗಾಂಜಿ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ.ಶಿವಪ್ಪ, ಬೆಂಗಳೂರಿನ ಬಸವ ಬಳಗದ ಪ್ರಮುಖರಾದ ಸರ್ವಮಂಗಳ ಸೋಮಶೇಖರ್, ಸಾಹಿತಿ ಭಾರಧ್ವಜ್ ಕೆ.ಆನಂದ ತೀರ್ಥ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ. ಪರಮೇಶ್ , ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಉಪನ್ಯಾಸಕ ಜಮೀರ್ ಅಹಮದ್, ಸಂಶೋಧನಾ ವಿದ್ಯಾರ್ಥಿ ಶಮಿತಾ ಪಾಲ್ಗೊಂಡಿದ್ದರು. ಸ್ಮಿತಾ ತಂಡ ವಚನ ಗಾಯನ ನಡೆಸಿತು.

ಶೈಕ್ಷಣಿಕ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿಗೆ ತಮ್ಮ ಬದುಕನ್ನೇ ಧಾರೆಯೆರೆದ ಹಳಕಟ್ಟಿ ಇಲ್ಲದಿದ್ದರೆ ವಚನ ಸಾಹಿತ್ಯ ತನ್ನ ಹೊಳಪು ಕಳೆದುಕೊಳ್ಳುತ್ತಿತ್ತು.
ಸಿ.ಸೋಮಶೇಖರ್ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.