ADVERTISEMENT

ಅತಿಯಾದ ರಸಗೊಬ್ಬರ; ಕಾಫಿಗೆ ಪ್ರತಿಕೂಲ: ಧರ್ಮರಾಜ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 4:10 IST
Last Updated 8 ಅಕ್ಟೋಬರ್ 2024, 4:10 IST
ವಿಚಾರ ಸಂಕಿರಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು
ವಿಚಾರ ಸಂಕಿರಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು   

ಮಡಿಕೇರಿ: ಮಡಿಕೇರಿ ದಸರಾ ಮಹೋತ್ಸವದ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಕಾಫಿ ದಸರೆಯ ಅಂತಿಮ ದಿನವಾದ ಸೋಮವಾರ ಹಲವು ವಿಷಯಗಳ ಕುರಿತು ತಜ್ಞರು ಮಾಹಿತಿ ನೀಡಿದರು.

ಪ್ರಗತಿಪರ ಕಾಫಿ ಬೆಳೆಗಾರ ಧರ್ಮರಾಜ ಮಾತನಾಡಿ, ‘ಅತಿಯಾದ ರಸಗೊಬ್ಬರವು ಸಹ ಕಾಫಿ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಮಳೆಗೆ ತಕ್ಕಂತೆ ರಸಗೊಬ್ಬರ ಹಾಕಬೇಕು. ಕಾಫಿ ಗಿಡ ಸಂರಕ್ಷಣೆಗೆ ಸಂಬಂಧಿಸಿದಂತೆ ಗಾಳಿ, ನೀರು, ಬೆಳಕು ಬಗ್ಗೆ ಕಾಫಿ ಬೆಳೆಗಾರರಲ್ಲಿ ಕನಿಷ್ಠ ಮಾಹಿತಿ ಇರಬೇಕು’ ಎಂದು ಹೇಳಿದರು.

ಕಾಫಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಹಲವು ಪ್ರಯೋಗಗಳನ್ನು ಮಾಡಬೇಕಿದೆ. ಸರಿಯಾದ ಸಮಯಕ್ಕೆ ಮಳೆಯಾಗಬೇಕು. ಜೊತೆಗೆ, ರಸಗೊಬ್ಬರ ಪೂರೈಕೆ ಮತ್ತಿತರವನ್ನು ಸಕಾಲದಲ್ಲಿ ನಿರ್ವಹಿಸಿದ್ದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ವಿಜ್ಞಾನಿ ಡಾ.ಶಿವಪ್ರಸಾದ್ ಮಾತನಾಡಿ. ‘ಕಾಫಿ ಬೆಳೆಗಾರರು ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಲಿದೆ. ಕಾಫಿ ತೋಟಗಳಲ್ಲಿ ಇಂಗುಗುಂಡಿ ಮಾಡಿ ಕೃಷಿ ಪೋಷಕಾಂಶ ಹೆಚ್ಚಿಸಿಕೊಳ್ಳಲು ಮುಂದಾಗಬೇಕಿದೆ’ ಎಂದು ಹೇಳಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಕೆಂಚಾರೆಡ್ಡಿ ಮಾತನಾಡಿ, ‘ಜೇನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಜೇನು ಕೃಷಿಯು ಸಹ ಒಂದು ಉದ್ಯಮವಾಗಿದ್ದು, ಕಾಫಿ ಜೊತೆಗೆ ಜೇನುಕೃಷಿಯನ್ನು ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ‘ಕಡಿಮೆ ಬಂಡವಾಳದಲ್ಲಿ ಮೀನು ಕೃಷಿಯನ್ನು ಕೈಗೊಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು’ ಎಂದು ಹೇಳಿದರು.

ಕಾಫಿ ಬೆಳೆಯ ಜೊತೆಗೆ ಮೀನು ಕೃಷಿಯನ್ನು ಉಪ ಕಸುಬಾಗಿ ಮಾಡಿಕೊಂಡಲ್ಲಿ ಉತ್ತಮ ಆದಾಯ ಗಳಿಸುವತ್ತ ಮುನ್ನಡೆಯಬಹುದು. ಕೊಡಗು ಜಿಲ್ಲೆಯಲ್ಲಿ ಮೀನುಕೃಷಿಗೆ ಸ್ಥಳೀಯ ಮಾರುಕಟ್ಟೆ ಸೌಲಭ್ಯವು ಸಹ ಇದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.

ಕೊಡಗು ಪ್ಲಾಂಟರ್ಸ್ ಅಸೋಷಿಯೇಷನ್‍ನ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಕೆ.ವಿಶ್ವನಾಥ ಮಾತನಾಡಿ, ‘ಹವಾಮಾನ ವೈಪರೀತ್ಯದಿಂದ ಪ್ರದೇಶದಿಂದ ಪ್ರದೇಶಕ್ಕೆ ಕಾಫಿ ಇಳುವರಿಯಲ್ಲಿ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಸುಸ್ಥಿರ ಬೆಳೆ ನಿರೀಕ್ಷೆ ಮಾಡುವುದು ಕಷ್ಟಸಾಧ್ಯ’ ಎಂದು ಹೇಳಿದರು.

ಕಾಫಿ ಬೆಳೆ ಸಂಬಂಧಿಸಿದಂತೆ ಮಾರುಕಟ್ಟೆ ಬೆಲೆ ಗಮನಿಸಿ ಕಾಫಿ ಮಾರಾಟ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಕಾಫಿ ಬೆಳೆ ಸಂಬಂಧ ಹೆಚ್ಚಿನ ನಿಗಾ ವಹಿಸಬೇಕು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಲೆಯ ಬಗ್ಗೆ ಮಾಹಿತಿ ಇರಬೇಕು ಎಂದು ತಿಳಿಸಿದರು.

ಪ್ರಗತಿಪರ ಕೃಷಿಕ ಭೋಸ್ ಮಂದಣ್ಣ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ಕಾಫಿ ದಸರಾ ಏರ್ಪಡಿಸಿರುವುದು ವಿಶೇಷವಾಗಿದೆ’ ಎಂದು ಶ್ಲಾಘಿಸಿದರು.

ಕಾಫಿ ದಸರಾ ಸಂಘಟಕ ಎಚ್.ಟಿ.ಅನಿಲ್, ವಿನೋದ್ ಮೂಡಗದ್ದೆ ಭಾಗವಹಿಸಿದ್ದರು.

ಹಲವು ತಜ್ಞರು ವಿಚಾರ ಸಂಕಿರಣದಲ್ಲಿ ಭಾಗಿ ಹಲವು ಸಾಧಕರಿಗೆ ಸನ್ಮಾನ ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಸಲು ಸಲಹೆ
ಕೊಡಗಿನ ಕಾಫಿ ಬೆಳೆ ಪ್ರಗತಿ ಹಾಗೂ ಸಾಧಕರ ಬಗ್ಗೆ ದಾಖಲೀಕರಣವಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾಫಿ ಟೇಬಲ್ ಹೊರತರಲು ಪ್ರಯತ್ನಿಸಲಿದೆ
ವೆಂಕಟ್ ರಾಜಾ ಜಿಲ್ಲಾಧಿಕಾರಿ.
ಕಾಫಿ ಬೆಳೆಯನ್ನು ಮತ್ತಷ್ಟು ಔನತ್ಯಕ್ಕೆ ಕೊಂಡೊಯ್ಯಬೇಕು; ಡಾ.ಮಂತರ್‌ಗೌಡ
ಕೊಡಗು ಜಿಲ್ಲೆಯಲ್ಲಿ ಕಾ‍ಫಿ ಬೆಳೆಯನ್ನು ಮತ್ತಷ್ಟು ಔನತ್ಯಕ್ಕೆ ಕೊಂಡೊಯ್ಯಬೇಕು. ಹಾಗಾಗಿಯೇ ಕಾಫಿ ದಸರೆಯನ್ನು ಆಯೋಜಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದರು. ಕಾಫಿ ದಸರಾ ವಿಚಾರ ಸಂಕಿರಣದಲ್ಲಿ ವಿವಿಧ ತಜ್ಞರು ವಿಜ್ಞಾನಿಗಳು ಕೃಷಿಕರು ಪಾಲ್ಗೊಂಡು ಕಾಫಿ ಉತ್ತೇಜನ ಸಂಬಂಧಿಸಿದಂತೆ ಹಲವು ಅಭಿಪ್ರಾಯ ಸಲಹೆ ಮಾರ್ಗದರ್ಶನ ನೀಡಿದ್ದಾರೆ. ತಜ್ಞರ ಅಭಿಪ್ರಾಯವನ್ನು ಕ್ರೊಢೀಕರಿಸಿ ಕಾಫಿ ಬೆಳೆಯಲ್ಲಿ ಮತ್ತಷ್ಟು ಉತ್ತಮ ಇಳುವರಿ ಪಡೆಯಲು ಶ್ರಮಿಸಬೇಕಿದೆ ಎಂದರು.
ಸಾಧಕ ಕೃಷಿಕರಿಗೆ ಸನ್ಮಾನ
ಸಾಧಕ ಕೃಷಿಕರಾದ ನಡಿಕೇರಿಯಂಡ ಬೋಸ್ ಮಂದಣ್ಣ ಕರಡದ ಬಿದಿರು ಕೃಷಿಕ ನಿಖಿಲ್ ರಾಮಮೂರ್ತಿ ಯಂತ್ರೋಪಕರಣಗಳ ತಯಾರಿಕೆಗಾಗಿ ವಿ.ಎ.ತಾಹಿರ್ ಜೇನುಕೃಷಿ ಸಾಧಕರಾದ ಶಿರಕಜೆ ಮಾದಪ್ಪ ಮರಗೋಡು ಗ್ರಾಮದ ಕಟ್ಟೆಮನೆ ಪ್ರೇಮಗಣೇಶ್ ಕರಿಮೆಣಸು ಕೃಷಿ ಸಾಧಕ ಎ.ಪಿ.ಸುಬ್ಬಯ್ಯ ಭತ್ತ ಕೃಷಿಕ ದೊಡ್ಡಳ್ಳಿ ಗ್ರಾಮದ ಬಸವಣ್ಣಯ್ಯ ಮತ್ತು ಹುಲುಸೆ ಗ್ರಾಮದ ಎಚ್.ಪಿ.ಪ್ರಸನ್ನ ಹಾಗೂ ಕೊಡಗು ಕಾಫಿ ಮಹಿಳಾ ಜಾಗೃತಿ ಸಂಘವನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.