ADVERTISEMENT

ಕೊಡವರ ಕುರಿತು ಸುಳ್ಳು ಚರಿತ್ರೆ; ಜಾಗೃತರಾಗಲು ಎನ್.ಯು.ನಾಚಪ್ಪ ಕರೆ

ತಿತಿಮತಿಯಲ್ಲಿ ಸಿಎನ್‌ಸಿಯಿಂದ 22ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:19 IST
Last Updated 16 ಡಿಸೆಂಬರ್ 2025, 7:19 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸದಸ್ಯರು ತಿತಿಮತಿಯಲ್ಲಿ ಸೋಮವಾರ ಮಾನವ ಸರಪಳಿ ರಚಿಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸದಸ್ಯರು ತಿತಿಮತಿಯಲ್ಲಿ ಸೋಮವಾರ ಮಾನವ ಸರಪಳಿ ರಚಿಸಿದರು   

ಮಡಿಕೇರಿ: ‘ಕೊಡವ ಕುರಿತು ಸುಳ್ಳು ಚರಿತ್ರೆಗಳನ್ನು ಬರೆಯುವವರ ವಿರುದ್ಧ ಕೊಡವರು ಜಾಗೃತರಾಗಬೇಕು, ಮುಂಬರುವ 16ನೇ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರು ಪ್ರತ್ಯೇಕವಾಗಿ ‘ಕೊಡವ’ ಎಂದೇ ದಾಖಲೀಕರಣ ಮಾಡಬೇಕು’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ (ಸಿಎನ್‌ಸಿ) ಎನ್.ಯು.ನಾಚಪ್ಪ ಕರೆ ನೀಡಿದರು.

ತಿತಿಮತಿಯಲ್ಲಿ ಈ ಕುರಿತು ಸಿಎನ್‌ಸಿ ಸೋಮವಾರ ಏರ್ಪಡಿಸಿದ್ದ 22ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಳೆದ 40 ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಮರೆಮಾಚಿ ಖಳನಾಯಕರಂತೆ ತೋರಿಸುವ ಹುನ್ನಾರ ನಡೆದಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದೇ ಕೆಲವರು ಪ್ರತಿಬಿಂಬಿಸುತ್ತಿದ್ದಾರೆ. ಈ ಕುರಿತು ಜನವರಿಯಿಂದ ಜನಜಾಗೃತಿ ಮೂಡಿಸಲಾಗುವುದು’ ಎಂದರು.

ADVERTISEMENT

‘ಜಿ.ರಿಚರ್ ಬರೆದ ‘ಕೂರ್ಗ್ ಗೆಜಿಟಿಯರ್’, ಡಿ.ಎನ್.ಕೃಷ್ಣಯ್ಯ ಅವರು ಬರೆದ ‘ಕೊಡಗಿನ ಇತಿಹಾಸ’, ಕೃಷ್ಣಮೂರ್ತಿ ಅವರು ಬರೆದ ‘ಪ್ರಾಚ್ಯ ಇತಿಹಾಸ ದಾಖಲೆ’, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಬರೆದ ‘ಚಿಕ್ಕವೀರ ರಾಜೇಂದ್ರ’ ಕೃತಿಗಳಲ್ಲಿ ಕೊಡವರ ನೈಜ ಚರಿತ್ರೆ ದಾಖಲಾಗಿದೆ. ಆದರೆ, ಈಗ ಕೆಲವರು ಇದಕ್ಕೆ ವಿರುದ್ಧವಾದ ಸುಳ್ಳು ಚರಿತ್ರೆಗಳನ್ನು ಬರೆಯಲಾರಂಭಿಸಿದ್ದಾರೆ’ ಎಂದು ಆರೋಪಿಸಿದರು.

ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ ‘ಸಂಘ’ ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ನೀಡಬೇಕು ಹಾಗೂ ಇನ್ನೂ ಮೊದಲಾದ ಹಕ್ಕೊತ್ತಾಯಗಳನ್ನು ಅವರು ಮಂಡಿಸಿದರು.

ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬುಟ್ಟಂಗಾಲ, ಹುದಿಕೇರಿ, ಕುಟ್ಟ ಮತ್ತು ಪಾಲಿಬೆಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು.

ಕಾಣತಂಡ ನವ್ಯಾ ನವೀನ್, ಪಾಳೆಂಗಡ ಮನು, ಬೊಳ್ಳಿಮಾಡ ನಂಜಪ್ಪ, ನೆಲ್ಲಮಕ್ಕಡ ವಿವೇಕ್, ಮನೆಯಪಂಡ ಬೋಪಣ್ಣ, ಕೊಕ್ಕಂಡ ದಿನೇಶ್, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಅಮ್ಮಂಡ ಶೆರಿನ್, ಅಮ್ಮಂಡ ಧನು, ಅಪ್ಪೆಂಗಡ ಮಾಲೆ, ಚೆಂಬಂಡ ಜನತ್, ಮನೆಯಪಂಡ ರತನ್ ಅಯ್ಯಪ್ಪ, ಸಂಜು ಕೋಣಿಯಂಡ, ಕಳ್ಳಿಚಂಡ ಅಶ್ವಥ್, ಕಳ್ಳಿಚಂಡ ಕಾವೇರಿಪ್ಪ, ಕಾಣತಂಡ ನವೀನ್, ಸಣ್ಣುವಂಡ ಮಂದಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.