
ನಾಪೋಕ್ಲು: ಮಳೆ ಮೋಡಗಳು ಚದುರಿ ಬಿಸಿಲು ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ಕಾಫಿ ಬೆಳೆಗಾರರಿಗೂ ಬಿಸಿ ಮುಟ್ಟಿದೆ.
ಕಾಫಿ ತೋಟಗಳಲ್ಲಿ ಬಿರುಸಿನ ಕೆಲಸಗಳಾಗಬೇಕಿದ್ದು, ಕಾರ್ಮಿಕರಿಗಾಗಿ ಬೆಳೆಗಾರರು ಅಡ್ಡಾಡುವ ದೃಶ್ಯಗಳು ಕಂಡು ಬರುತ್ತಿವೆ.
ಇಲ್ಲಿನ ಕಾಫಿ ತೋಟಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೆ, ಕೆಲಸ ಬಿರುಸುಗೊಳ್ಳುತ್ತಿದೆ. ವಿಶೇಷವಾಗಿ, ತೋಟಗಳಲ್ಲಿ ಕಳೆ ನಿರ್ಮೂಲನೆ ಮಾಡುವ ಹೆರತೆ ಕೆಲಸ ತುರ್ತಾಗಿ ಆಗಬೇಕಿದೆ. ಕಾಫಿ ಹಣ್ಣಾಗುತ್ತಿದ್ದಂತೆ ಕಾಫಿ ಕೊಯ್ಲು ಮಾಡಲು ಕಾಫಿ ಗಿಡಗಳ ಬಳಿಗೆ ತೆರಳಲು ಕಳೆ ನಿರ್ಮೂಲನೆ ಅತ್ಯಾವಶ್ಯಕ. ಹೆರತೆ ಕೆಲಸ ಈ ಹಿಂದಿನಿಂದ ರೂಢಿಯಲ್ಲಿದ್ದ ಕೆಲಸ. ಕಾಫಿಯ ತೋಟಗಳು ಕಳೆ ನಿರ್ಮೂಲನೆಗೊಂಡು ಸ್ವಚ್ಛಗೊಂಡಂತೆ ಕೆಲವೇ ದಿನಗಳಲ್ಲಿ ಕಾಫಿ ಕೊಯ್ಲು ಆರಂಭವಾಗುತ್ತದೆ. ತೋಟಗಳಲ್ಲಿ ಅಡ್ಡಾಡುವ ರಸ್ತೆ, ಗಿಡಗಳ ಬುಡಕ್ಕೆ ತೆರಳಲು ಅನುಕೂಲವಿದ್ದರೆ ಕಾಫಿ ಕೊಯ್ಲು ಸುಗಮ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಕಾಫಿ ತೋಟಗಳನ್ನು ಕೆಲಸಗಳು ಏರುಪೇರು ಆಗುತ್ತಿವೆ.
ಕಾರ್ಮಿಕರ ಕೊರತೆಯಿಂದ ಹಾಗೂ ಹೆಚ್ಚುತ್ತಿರುವ ವೆಚ್ಚದಿಂದಾಗಿ ಕಾಫಿ ತೋಟಗಳಲ್ಲಿ ಗಿಡದ ಬುಡಗಳನ್ನು ಸ್ವಚ್ಛಗೊಳಿಸುವ ಹೆರತೆ ಕೆಲಸಕ್ಕೆ ವಿದಾಯ ಹೇಳಲಾಗುತ್ತಿದೆ. ಅತಿ ಹೆಚ್ಚು ಕಾರ್ಮಿಕರ ಅವಲಂಬನೆ, ನಿರೀಕ್ಷೆಗೂ ಮೀರಿದ ಖರ್ಚು, ಬೆಳೆಗಾರರನ್ನು ಹೈರಾಣು ಮಾಡುತ್ತಿವೆ. ಹಾಗಾಗಿ, ಕಳೆನಾಶಕ ಸಿಂಪಡಣೆ, ಕಳೆಕೊಚ್ಚುವ ಯಂತ್ರಗಳ ಬಳಕೆ ಸೇರಿದಂತೆ ಪರ್ಯಾಯ ವಿಧಾನಗಳತ್ತ ಬೆಳೆಗಾರರು ಮನಸ್ಸು ಮಾಡುತ್ತಿದ್ದಾರೆ.
ಕಳೆಕೊಚ್ಚುವ ಯಂತ್ರಗಳಿಗೆ ಬೇಡಿಕೆ ಹೆಚ್ಚಳ
ವರ್ಷದ ಬಹುತೇಕ ದಿನಗಳಲ್ಲಿ ಮಳೆ ಸುರಿಯುವುದರಿಂದ ಹೆರತೆ ಕೆಲಸ ಮಾಡಿದರೂ, ಕೆಲವೇ ದಿನಗಳಲ್ಲಿ ಮತ್ತೆ ಕಳೆ ಹುಟ್ಟಿಕೊಳ್ಳುತ್ತದೆ. ಕೂಲಿ ಕಾರ್ಮಿಕರಿಗೆ ನೀಡಿದ ಹಣ ವ್ಯರ್ಥವಾಗುತ್ತದೆ ಎಂಬ ಅಭಿಪ್ರಾಯ ಬೆಳೆಗಾರರದ್ದು. ಅಂತೆಯೇ, ಹಲವೆಡೆ ಇದೀಗ ಕಳೆ ಕೊಚ್ಚುವ ಯಂತ್ರಗಳ ಬಳಕೆಯಾಗುತ್ತಿದೆ. ಕಳೆ ನಾಶಕಗಳನ್ನು ಬಳಸುವುದರಿಂದಲೂ ಕಳೆ ನಿರ್ಮೂಲನೆ ಮಾಡಬಹುದಾಗಿದೆ. ಆದರೆ, ಪದೇಪದೇ ಕಳೆನಾಶಕ ಬಳಸುವುದರಿಂದ ಭೂಮಿಯ ಫಲವತ್ತತೆ ಕಡಿಮೆ ಆಗಬಹುದು ಎಂಬ ಆತಂಕ ಬೆಳೆಗಾರರದ್ದು. ಹಾಗಾಗಿ, ಕಳೆ ಕೊಚ್ಚುವ ಯಂತ್ರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹತ್ತಿಪ್ಪತ್ತು ಕಾರ್ಮಿಕರು ಒಗ್ಗೂಡಿ ಕಳೆ ಕೊಚ್ಚುವ ಯಂತ್ರದ ಮೂಲಕ ಗಂಟೆ ಲೆಕ್ಕದಲ್ಲಿ ಕೆಲಸ ನಿರ್ವಹಿಸುವುದರಿಂದ ಬಹುಬೇಗನೆ ಕಳೆ ನಿರ್ಮೂಲನೆ ಮಾಡಬಹುದಾಗಿದೆ ಹಣ ಉಳಿತಾಯ ಜೊತೆಗೆ ಶ್ರಮವೂ ಉಳಿತಾಯ. ಈ ನಿಟ್ಟಿನಲ್ಲಿ ಬಹುತೇಕ ಕಡೆಗಳಲ್ಲಿ ಕಳೆ ಕೊಚ್ಚುವ ಯಂತ್ರಗಳ ಸದ್ದು ಇದೀಗ ಕೇಳಿ ಬರುತ್ತಿದೆ.
ಕಳೆ ಕೊಚ್ಚುವ ಯಂತ್ರಗಳನ್ನು ಬಳಸುವ ಕಾರ್ಮಿಕರು ಗಂಟೆಗೆ ₹300 ರಿಂದ ₹350 ದರ ನಿಗದಿಪಡಿಸಿದ್ದಾರೆ. ಕೆಲಸ ಬಿರುಸಿನಿಂದ ಸಾಗುತ್ತದೆ. 10-20 ಕಾರ್ಮಿಕರು ಒಗ್ಗೂಡಿ ವಾಹನಗಳ ಮೂಲಕ ಕಾಫಿ ಬೆಳಗಾರರ ತೋಟಗಳಿಗೆ ತೆರಳಿ ಕೆಲಸ ನಿರ್ವಹಿಸುತ್ತಾರೆ. ಅತ್ಯಲ್ಪ ಅವಧಿಯಲ್ಲಿ ಕೆಲಸ ಪೂರೈಸುವತ್ತ ಕಾಫಿ ಬೆಳಗಾರರು ಬೆಳೆಗಾರರು ಚಿತ್ತ ಹರಿಸುತ್ತಿದ್ದಾರೆ.
‘ಮಳೆಯಿಂದಾಗಿ ತೋಟದಲ್ಲಿ ಕಳೆ ಜಾಸ್ತಿ ಇದೆ. ಎಕರೆಗೆ ₹ 7 ಸಾವಿರದಂತೆ ಕಳೆ ನಿರ್ಮೂಲನೆಗೆ ವಹಿಸಿದ್ದೇನೆ. ಕೊಣ್ಣಂಗೇರಿಯಿಂದ ಅಸ್ಸಾಂ ವಲಸಿಗ ಕಾರ್ಮಿಕರು ತಂಡದಲ್ಲಿ ಬಂದು ಕೆಲಸ ನಿರ್ವಹಿಸುತ್ತಾರೆ. ಶೀಘ್ರ ಕಳೆ ನಿರ್ಮೂಲನಾ ಕೆಲಸ ಮುಗಿಯುತ್ತದೆ. ಕಾಫಿ ಕೊಯ್ಲಿಗೂ ಆತಂಕ ಇಲ್ಲ’ ಎಂದು ಬೆಳೆಗಾರ ಪೊನ್ನಣ್ಣ ಹೇಳಿದರು.
ಸ್ಥಳೀಯ ಕಾರ್ಮಿಕರಿಗೂ ಕೊರತೆ ಇರುವುದರಿಂದ ಅಸ್ಸಾಂ ವಲಸಿಗ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಕಾಫಿ ತೋಟಗಳ ಬಹುತೇಕ ಕೆಲಸಗಳನ್ನು ವಲಸಿಗ ಕಾರ್ಮಿಕರನ್ನು ಬಳಸಿ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ತೋಟದ ಕೆಲಸ ನಿರ್ವಹಣೆ ಬಗ್ಗೆ ತಿಳುವಳಿಕೆ ಇಲ್ಲದಿದ್ದರೂ, ಅಂತಹ ಕಾರ್ಮಿಕರನ್ನು ಬಳಸಿ ತೋಟದ ಕೆಲಸಗಳನ್ನು ಪೂರೈಸುವ ಅನಿವಾರ್ಯತೆಗೆ ಬೆಳೆಗಾರರು ಸಿಲುಕಿದ್ದಾರೆ.
ಯಂತ್ರದ ಬಳಕೆಯಿಂದ ಖರ್ಚು ಕಡಿಮೆ
‘ಗಂಟೆಗೆ ₹ 300ರಂತೆ ಕಳೆ ಕೊಚ್ಚುವ ಯಂತ್ರ ಬಳಸಿ ತೋಟದ ಕಳೆನಿರ್ಮೂಲನೆ ಕೆಲಸ ಪೂರೈಸಲಾಗಿದೆ. ಪೂರ್ತಿ ತೋಟದ ಕಳೆ ನಿರ್ಮೂಲನೆ ಮಾಡಲು ₹ 180000 ಖರ್ಚು ಆಯಿತು. ಕೇವಲ ಒಂದು ವಾರದಲ್ಲಿ ಕೆಲಸ ಪೂರ್ಣಗೊಂಡಿದೆ. ಈ ಹಿಂದಿನಂತೆ ಸಾಂಪ್ರದಾಯಿಕವಾಗಿ ಹೆರತೆ ಕೆಲಸ ಮಾಡಿದ್ದರೆ ₹ 3 ಲಕ್ಷ ಖರ್ಚಾಗುತ್ತಿತ್ತು. ಜೊತೆಗೆ ತಿಂಗಳುಗಟ್ಟಲೆ ಕಾರ್ಮಿಕರನ್ನು ದುಡಿಸಿಕೊಳ್ಳಬೇಕಾಗಿತ್ತು. ಕಡಿಮೆ ಖರ್ಚಿನಲ್ಲಿ ತೋಟದ ಕಳೆ ನಿರ್ಮೂಲನೆ ಆಗಿದೆ’ ಎಂದು ಸ್ಥಳೀಯ ಕಾಫಿ ಬೆಳೆಗಾರ ಮಧುಸೂದನ್ ಹೇಳುತ್ತಾರೆ.