ಸಾಂದರ್ಭಿಕ ಚಿತ್ರ
(ಎ.ಐ ಚಿತ್ರ)
ಮಡಿಕೇರಿ: ಈ ವರ್ಷ ರಾಜ್ಯದಲ್ಲಿ 23 ಹೊಸ ಕಾನೂನು ಕಾಲೇಜುಗಳು ಆರಂಭವಾಗಿದ್ದು, ಆ ಪೈಕಿ ಕೊಡಗಿನ ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿಯೂ ಹೊಸ ಕಾಲೇಜು ಶುರುವಾಗಿದೆ. ಈ ಮೂಲಕ ಇದು ಕೊಡಗು ಜಿಲ್ಲೆಯ ಮೊದಲ ಕಾನೂನು ಪದವಿ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧೀನದಲ್ಲಿರುವ ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಕೆವಿವಿ ಎಜುಕೇಷನಲ್ ಟ್ರಸ್ಟ್ ಸಹಯೋಗದೊಂದಿಗೆ ಪದವಿ ನಂತರ 3 ವರ್ಷಗಳ ಕಾನೂನು ಪದವಿ ಕಾಲೇಜು ನೂತನವಾಗಿ ಆರಂಭವಾಗಿದ್ದು, ಪ್ರವೇಶಾತಿಗೆ ಆ. 28 ಕೊನೆಯ ದಿನ. ಸೆಪ್ಟೆಂಬರ್ ಮೊದಲ ವಾರದಲ್ಲಿ ತರಗತಿಗಳು ಆರಂಭವಾಗುತ್ತವೆ’ ಎಂದು ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೆಪಂಡ ಸುಗುಣ ಮುತ್ತಣ್ಣ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೊಸೈಟಿಯ ಗೌರವ ಕಾರ್ಯದರ್ಶಿ ಕುಲ್ಲಚಂಡ ಪಿ.ಬೋಪಣ್ಣ ಮಾತನಾಡಿ, ‘ಈ ಕಾನೂನು ಪದವಿ ಕಾಲೇಜು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ಮಹಾವಿಶ್ವವಿದ್ಯಾಲಯದ ಮಾನ್ಯತೆ ಒಳಪಟ್ಟಿದ್ದು, ದೆಹಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದನೆಗೊಂಡಿದೆ’ ಎಂದರು.
ಕೆವಿವಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಿ.ಎನ್.ನಾಗೇಂದ್ರ ಮಾತನಾಡಿ, ‘3 ವರ್ಷದ ಕಾನೂನು ಪದವಿ ಶಿಕ್ಷಣವನ್ನು ಅತ್ಯಾಧುನಿಕ ಸೌಲಭ್ಯದೊಂದಿಗೆ ನುರಿತ ಉಪನ್ಯಾಸಕರು, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಮಾದರಿ ಕೋರ್ಟ್, ಇಂಟರ್‌ನ್‌ಶಿಪ್ ಸಹಾಯ, ಪ್ರಾಯೋಗಿಕ ತರಗತಿಗಳು, ಕರ್ನಾಟಕ ಕಾನೂನು ಅಕಾಡೆಮಿಯೊಂದಿಗೆ ಆನ್‌ಲೈನ್ ಉಪನ್ಯಾಸಗಳು, ವಸತಿ ನಿಲಯ, ಬಸ್ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದು ಹೇಳಿದರು.
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಮಾಹಿತಿಗಾಗಿ ಮೊ: 8792839176, 9844231191 ಸಂಪರ್ಕಿಸಬಹುದು ಎಂದರು.
ಕಾರ್ಯದರ್ಶಿ ವೇದಿಕಾ ಹಾಗೂ ಸದಸ್ಯ ಟ್ರಸ್ಟಿ ಪ್ರಶಾಂತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.