ADVERTISEMENT

ರಾಜಾಸೀಟ್‌ ಉದ್ಯಾನ ಈಗ ಪುಷ್ಪೋದ್ಯಾನ

4 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ, ಮನ ಸೆಳೆಯುತ್ತಿವೆ ವೈವಿಧ್ಯಮಯ ಹೂಗಳು

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 4:50 IST
Last Updated 25 ಜನವರಿ 2025, 4:50 IST
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ‘ಕೊಡಗಿನ ಜೇನು’ ಕುರಿತ ಪುಷ್ಪ ಅಲಂಕೃತ ಫಲಕ ಎಲ್ಲರನ್ನೂ ಸೆಳೆಯುತ್ತಿದೆ  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ‘ಕೊಡಗಿನ ಜೇನು’ ಕುರಿತ ಪುಷ್ಪ ಅಲಂಕೃತ ಫಲಕ ಎಲ್ಲರನ್ನೂ ಸೆಳೆಯುತ್ತಿದೆ  ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಮಡಿಕೇರಿ: ಒಂದೆಡೆ ಪುಷ್ಪಗಳಿಂದ ನಿರ್ಮಿಸಿದ ಓಂಕಾರೇಶ್ವರ ದೇಗುಲದ ಮಾದರಿ, ಮತ್ತೊಂದೆಡೆ ಹೂಗಳಿಂದ ಅಲಂಕೃತವಾದ ಬೃಹತ್ ಚಿಟ್ಟೆ, ಜೇನುನೊಣಗಳ ಮಾದರಿಗಳು, ಒಂದೇ ಸಮನೆ ದೃಷ್ಟಿ ಹರಿಸಿದಷ್ಟೂ ದೂರ ಕಣ್ಣಿಗೆ ಸಿಕ್ಕುವ ಅರಳಿದ ಹೂಗಳ ರಾಶಿ, ಇದನ್ನೆಲ್ಲ ನೋಡುತ್ತಾ ಹೆಜ್ಜೆ ಇಡುತ್ತಾ ದಾರಿ ಮುಗಿಯುತ್ತಿದ್ದಂತೆ ಕಣ್ಣಿಗೆ ಸಿಕ್ಕುವ ಬಿಸಿಲಿನಲ್ಲೂ ಮಂಜನ್ನು ಹೊದ್ದ ಗಿರಿಶಿಖರ ಶ್ರೇಣಿಗಳು...

ಹೀಗೆ, ಶುಕ್ರವಾರ ಇಲ್ಲಿನ ರಾಜಾಸೀಟ್ ಉದ್ಯಾನ ಕಂಡು ಬಂತು. ಇಳಿ ಸಂಜೆಯಲ್ಲಿ ಸೂರ್ಯ ಪಡುವಣದಲ್ಲಿ ಅಸ್ತಮಿಸುತ್ತಿದ್ದಂತೆ ಇಲ್ಲಿ ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರೆಯಿತು. ಬಂದಿದ್ದ ಪ್ರವಾಸಿಗರು, ಅಲ್ಪಸ್ವಲ್ಪ ಸ್ಥಳೀಯರು ಅಪರೂಪದ ಈ ದೃಶ್ಯಗಳನ್ನು ಕಣ್ತುಂಬಿಕೊಂಡರು.

ಹೂಗಳಿಂದ ಅಲಂಕರಿಸಿದ್ದ ಬಾರ್ಬಿ ಡಾಲ್, ಡೊರೆಮಾನ್, ಮೋಟು ಪತ್ಲು ಮಾದರಿಗಳು ಚಿಣ್ಣರನ್ನು ಸೂಜಿಗಲ್ಲಿನಂತೆ ಸೆಳೆದರೆ, ಯುವಕ, ಯುವತಿಯರನ್ನು ನಾಲ್ಕಕ್ಕೂ ಅಧಿಕ ಕಡೆ ನಿರ್ಮಿಸಲಾಗಿದ್ದ ಸೆಲ್ಫಿ ಜ್ಹೋನ್‌ಗಳು ಬರಸೆಳೆದವು. ಗಣರಾಜ್ಯೋತ್ಸವದ ಅಂಗವಾಗಿ ಯೋಧ, ಫಿರಂಗಿ ಹಾಗೂ ರಾಷ್ಟ್ರಧ್ವಜದ ಕಲಾಕೃತಿಗಳು ದೇಶಭಕ್ತರನ್ನು ಆಕರ್ಷಿಸಿದರೆ, ಬೋನ್ಸಾಯ್ ಗಿಡಗಳು, ಇಕೆಬಾನ ಹೂವಿನ ಜೋಡನೆಗಳು ಅಚ್ಚರಿಗೆ ತಳ್ಳಿದವು.

ADVERTISEMENT

ಕಳೆದ ಬಾರಿಯಂತೆ ಈ ಬಾರಿಯೂ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜವಾಹರ್ ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯ್ ಪಟೇಲ್, ಡಾ. ಎಪಿಜೆ ಅಬ್ದುಲ್ ಕಲಾಂ, ಸರ್.ಎಂ.ವಿಶ್ವೇಶ್ವರಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್, ಸುಭಾಷ್‌ಚಂದ್ರ ಬೋಸ್, ಮನಮೋಹನ್ ಸಿಂಗ್, ಕುವೆಂಪು, ರಾಜಕುಮಾರ್, ಪುನೀತ್ ರಾಜ್‌ಕುಮಾರ್, ರೋಹನ್ ಬೋಪಣ್ಣ, ಸಚಿನ್ ತಂಡೂಲ್ಕರ್ ಹೀಗೆ ಸುಮಾರು 50ಕ್ಕೂ ಹೆಚ್ಚು ಮಹನೀಯರನ್ನು ವಿವಿಧ ಬಗೆಯ ತರಕಾರಿಗಳು, ಹಣ್ಣುಗಳಲ್ಲಿ ಕೆತ್ತಿದ್ದು ವಿಶೇಷವಾಗಿತ್ತು.

ಒಟ್ಟು 7 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ ಮೊದಲಾದ ಸುಮಾರು 20 ಸಾವಿರ ವಿವಿಧ ಜಾತಿಯ ಹೂವುಗಳು ಇಲ್ಲಿವೆ. ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದ ಕಲಾಕೃತಿಯನ್ನು 22 ಅಡಿ ಎತ್ತರದಲ್ಲಿ 30 ಅಡಿ ಉದ್ದ, 38 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ನಿರ್ಮಿಸಲಾಗಿದೆ.

ತಡವಾಗಿ ಉದ್ಘಾಟನೆ

ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿತ್ತು. ಆದರೆ ಶಾಸಕ ಡಾ.ಮಂತರ್‌ಗೌಡ ಅವರು ತಡವಾಗಿ ಬಂದ ಕಾರಣ ಉದ್ಘಾಟನೆಯಾಗುವಷ್ಟರಲ್ಲಿ ಸಂಜೆ 5 ಗಂಟೆ ದಾಟಿತ್ತು. ಜ. 27ರವರೆಗೂ ನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8.30ರವರೆಗೂ ಸಾರ್ವಜನಿಕರಿಗೆ ವೀಕ್ಷಣೆಗೆ ಇದು ಲಭ್ಯವಿದೆ.

ಒಂದು ತಿಂಗಳವರೆಗಾದರೂ ಫಲಪುಷ್ಪ ಪ್ರದರ್ಶನ ನಡೆಯಲಿ: ಶಾಸಕ ಮಂತರ್‌ಗೌಡ

ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಶಾಸಕ ಡಾ.ಮಂತರ್‌ಗೌಡ ‘ಈ ಬಾರಿ 4 ದಿನಗಳ ಕಾಲ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಹಾಗೂ ಓಂಕಾರೇಶ್ವರ ದೇಗುಲದ ಮಾದರಿ ಹಾಗೂ ಕೊಡಗಿನ ಜೇನಿನ ಮಾದರಿ ವಿಶೇಷವಾಗಿದೆ’ ಎಂದು ಹೇಳಿದರು.

ಪ್ರದರ್ಶನವನ್ನು ಇನ್ನಷ್ಟು ವಿಸ್ತರಿಸಬೇಕು ಕನಿಷ್ಠ ಒಂದು ತಿಂಗಳವರೆಗಾದರೂ ಫಲಪುಷ್ಪ ಪ್ರದರ್ಶನಗಳು ಇಲ್ಲಿ ನಡೆಯಬೇಕು. ಸಾರ್ವಜನಿಕರು ಸ್ವಚ್ಛತೆಗೆ ಒತ್ತು ನೀಡಬೇಕು. ವಾರಾಂತ್ಯವನ್ನು ಇಲ್ಲಿ ಸಂಭ್ರಮದಿಂದ ಕಳೆಯಬಹುದು ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ಯೋಗೇಶ್ ಹಿರಿಯ ಸಹಾಯಕ ನಿರ್ದೇಶಕ ಎನ್.ಎಸ್.ಪಣೀಂದ್ರ ಸಹಾಯಕ ನಿರ್ದೇಶಕ ಮುತ್ತಪ್ಪ ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ನಗರಸಭೆ ಸದಸ್ಯರು ಭಾಗವಹಿಸಿದ್ದರು.

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಶಾಸಕ ಡಾ.ಮಂತರ್‌ಗೌಡ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಯುವತಿಯರು ಹಾಗೂ ಮಹಿಳೆಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯುತ್ತಿರುವ ಓಂಕಾರೇಶ್ವರ ದೇಗುಲದ ಮಾದರಿ  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯುತ್ತಿರುವ ಓಂಕಾರೇಶ್ವರ ದೇಗುಲದ ಮಾದರಿ  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಫಲಪುಷ್ಪ ಪ್ರದರ್ಶನದಲ್ಲಿ ಚಿಣ್ಣರನ್ನು ಸೆಳೆಯುತ್ತಿರುವ ಕಲಾಕೃತಿಗಳು ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.