ADVERTISEMENT

ಗೌರಿ ಗಣೇಶೋತ್ಸವ, ಈದ್ ಮಿಲಾದ್ | ಡಿ.ಜೆ ಬಳಕೆಗೆ ಇಲ್ಲ ಅವಕಾಶ: ಸುಂದರ್ ರಾಜ್

ವಿರಾಜಪೇಟೆ: ಗೌರಿಗಣೇಶೋತ್ಸವ, ಈದ್ ಮಿಲಾದ್ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 4:20 IST
Last Updated 5 ಸೆಪ್ಟೆಂಬರ್ 2024, 4:20 IST
ಶಾಂತಿಸಭೆಯಲ್ಲಿ ಪ್ರಮುಖರು ಭಾಗವಹಿಸಿದ್ದರು.
ಶಾಂತಿಸಭೆಯಲ್ಲಿ ಪ್ರಮುಖರು ಭಾಗವಹಿಸಿದ್ದರು.   

ವಿರಾಜಪೇಟೆ: ಹಬ್ಬಗಳ ಆಚರಣೆಗೆ ಇಲಾಖೆ ಸಕಲ ರೀತಿಯಿಂದಲೂ ಸಹಕಾರ ನೀಡಲಿದೆ. ಆದರೆ ನ್ಯಾಯಾಲಯದ ಆದೇಶವನ್ನು ಮೀರಿ ಉತ್ಸವದ ಸಂದರ್ಭ ಡಿ.ಜೆ ಬಳಸುವಂತಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಸ್ಪಷ್ಟವಾಗಿ ಹೇಳಿದರು.

ಮುಂಬರುವ ಗೌರಿ, ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಇಲ್ಲಿನ ಸಮುಚ್ಛಯ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡಲೇ ಬೇಕಿರುವುದರಿಂದ ಅಬ್ಬರದ ಸಂಗೀತ (ಡಿ.ಜೆ) ಬಳಸುವಂತಿಲ್ಲ. ಸೆ. 17ರಂದು ನಡೆಯುವ ಶೋಭಾಯಾತ್ರೆಯ ಸಂದರ್ಭ ನಗರದಲ್ಲಿ ಯಾವುದೇ ರೀತಿಯ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಸೆ.16 ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆಯನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಉತ್ಸವದ ಸಂದರ್ಭದಲ್ಲಾಗಲಿ ಕಾನೂನು ಉಲ್ಲಂಘನೆಯಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಡಿ.ವೈ.ಎಸ್ಪಿ ಮೋಹನ್ ಕುಮಾರ್ ಅವರು ಮಾತನಾಡಿ, ಉತ್ಸವ ಸಮಿತಿಗಳು ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ಒದಗಿಸಬೇಕು. ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ ಇಲಾಖೆಯಿಂದ ಒದಗಿಸಲಾಗುತ್ತದೆ. ಜನಸ್ನೇಹಿ ಉತ್ಸವ ಆಚರಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಎಸ್.ಐ. ಪ್ರಮೋದ್ ಕುಮಾರ್, ಪೊಲೀಸ್ ಸಿಬ್ಬಂದಿಗಳು, ಪಟ್ಟಣದ ವಿವಿಧ ಸಮುದಾಯಗಳ ಪ್ರಮುಖರು, ಉತ್ಸವ ಸಮಿತಿಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.‌

ವಿರಾಜಪೇಟೆ ಪಟ್ಟಣದಲ್ಲಿ 22 ಮುಖ್ಯ ಗಣೇಶೋತ್ಸವ ಸಮಿತಿಗಳು ಹಾಗೂ ಇನ್ನಿತರೇ ಸಮಿತಿಗಳೂ ಸೇರಿ ಸುಮಾರು 25ಕ್ಕೂ ಹೆಚ್ಚು ಕಡೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಜೃಂಭಣೆಯಿಂದ ಉತ್ಸವ ಆಚರಿಸಲಾಗುತ್ತದೆ. 11 ದಿನಗಳ ಕಾಲ ವೈಭವೋಪೇತವಾದ ಆರಾಧನೆ ನಡೆಯುತ್ತದೆ. ಈ ವೇಳೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಗೊಳ್ಳುತ್ತದೆ. ಸೆ. 17ರಂದು ಸಂಜೆ ಶೋಭಾಯಾತ್ರೆ ಆರಂಭವಾಗಿ ಮರುದಿನ ಬೆಳಿಗ್ಗೆ ಗೌರಿಕೆರೆಯಲ್ಲಿ ಗಣೇಶ ಮೂರ್ತಿಗಳನ್ನೆಲ್ಲ ಸಾಮೂಹಿಕವಾಗಿ ವಿಸರ್ಜಿಸಲಾಗುತ್ತದೆ.

ವಿರಾಜಪೇಟೆಯಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.