ADVERTISEMENT

ಸಿದ್ದಾಪುರ | ತ್ಯಾಜ್ಯದ ರಾಶಿ: ರೋಗದ ಭೀತಿ

ರೆಜಿತ್‌ಕುಮಾರ್ ಗುಹ್ಯ
Published 15 ಮೇ 2025, 4:18 IST
Last Updated 15 ಮೇ 2025, 4:18 IST
<div class="paragraphs"><p>ಮೈಸೂರು ರಸ್ತೆಯಲ್ಲಿ ಕಸ ತುಂಬಿರುವ ಟ್ರಾಕ್ಟರ್ ಹಾಗೂ ರಸ್ತೆ ಬದಿಯಲ್ಲಿರುವ ಕಸದ ರಾಶಿ</p></div>

ಮೈಸೂರು ರಸ್ತೆಯಲ್ಲಿ ಕಸ ತುಂಬಿರುವ ಟ್ರಾಕ್ಟರ್ ಹಾಗೂ ರಸ್ತೆ ಬದಿಯಲ್ಲಿರುವ ಕಸದ ರಾಶಿ

   

ಸಿದ್ದಾಪುರ: ಪಟ್ಟಣದ ವಿವಿಧ ಭಾಗದಲ್ಲಿ ಕಸದ ರಾಶಿ ತುಂಬಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದೆ.

ಪಟ್ಟಣದ ಬಸ್‌ ನಿಲ್ದಾಣ, ಮೈಸೂರು ರಸ್ತೆ, ಕರಡಿಗೋಡು ರಸ್ತೆ, ಹಳೇ ಸಿದ್ದಾಪುರ, ಮಲಯಾಳಂ ಶಾಲೆಯ ಮುಂಭಾಗ, ಮಾರುಕಟ್ಟೆ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಕಸದ ರಾಶಿ ತುಂಬಿದ್ದು, ದುರ್ನಾತ ಬೀರುತ್ತಿದೆ.

ADVERTISEMENT

ಮೈಸೂರು ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಕಸ ತೆಗೆಯುವ ಟ್ರಾಕ್ಟರ್ ನಿಂತಿದ್ದು, ಟ್ರಾಕ್ಟರ್‌ನಲ್ಲಿ ಕಸ ತುಂಬಿ ನೆಲಕ್ಕೆ ಬೀಳುತ್ತಿದೆ. ಇದಲ್ಲದೇ ಸ್ಥಳೀಯರು ಇಲ್ಲೆ ಕಸವನ್ನು ಹಾಕುತ್ತಿದ್ದು, ತೊಳೆತ ತ್ಯಾಜ್ಯದಿಂದ ದುರ್ನಾತ ಬೀರುತ್ತಿದೆ.

ಸರ್ಕಾರಿ ಮಲಯಾಳಂ ಶಾಲೆಯ ಮುಂಭಾಗದಲ್ಲೇ ಕಸದ ರಾಶಿ ತುಂಬಿದ್ದು, ಸಮೀಪದಲ್ಲೇ ಮೂರು ಶಾಲೆಗಳಿವೆ. ಕೊಳೆತ ತ್ಯಾಜ್ಯದ ದುರ್ನಾತದಿಂದಾಗಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹಳೇ ಸಿದ್ದಾಪುರದ ಸಮೀಪ ಮುಖ್ಯ ರಸ್ತೆಯ ಬದಿಯಲ್ಲಿ ರಸ್ತೆಯುದ್ದಕ್ಕೂ ಕಸದ ರಾಶಿ ಬಿದ್ದಿದೆ. ಮಾರುಕಟ್ಟೆಯ ಸಮೀಪದ ರಸ್ತೆಯಲ್ಲಿ ರಾಶಿಗಟ್ಟಲೇ ತ್ಯಾಜ್ಯ ಹಾಕಲಾಗಿದೆ. ಸಿದ್ದಾಪುರ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಕಸದ ತ್ಯಾಜ್ಯ ಹಾಕಲಾಗಿದ್ದು, ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಈಗಾಗಲೇ ಮಳೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಮಳೆಯ ಸಂದರ್ಭ ಕೊಳೆತ ತ್ಯಾಜ್ಯಗಳು ಮತ್ತಷ್ಟು ಕೊಳೆತು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಶೀಘ್ರದಲ್ಲಿ ಕಸ ವಿಲೇವಾರಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇನ್ನೂ ಸಿಗದ ಜಾಗ:

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿಗೆ ಈ ಹಿಂದೆ ಕೊಡಗು ಶ್ರೀರಂಗಪಟ್ಟಣ ಗ್ರಾಮದಲ್ಲಿ ಜಾಗ ಗುರುತಿಸಿ, ಗ್ರಾಮ ಪಂಚಾಯಿತಿಗೆ ಜಾಗ ಹಸ್ತಾಂತರಿಸಲಾಗಿತ್ತು. ಆದರೆ, ಈ ಜಾಗದ ಸಮೀಪದಲ್ಲಿ ತೋಡು ಹರಿಯುತ್ತಿರುವುದಾಗಿ ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದು, ಕಸ ವಿಲೇವಾರಿಗೆ ತಡೆ ತಂದಿದ್ದರು. ಇದಾದ ಬಳಿಕ ದಾನಿಯೊಬ್ಬರು ಮಾಲ್ದಾರೆ ಗ್ರಾಮದಲ್ಲಿ ಸಿದ್ದಾಪುರ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ತಲಾ ಅರ್ಧ ಎಕರೆ ಜಾಗವನ್ನು ನೀಡಿದ್ದು, ಕಸ ವಿಲೇವಾರಿ ಮಾಡುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೇ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಕಸವನ್ನು ಬೇರ್ಪಡಿಸಿ, ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆ ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ.

ಕಸ ಸಂಗ್ರಹಿಸುತ್ತಿಲ್ಲ: ಗ್ರಾಮ ಪಂಚಾಯಿತಿ ಮನೆ ಮನೆಗೆ ತೆರಳಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕಸ ಸಂಗ್ರಹಿಸಬೇಕಿತ್ತು. ಆದರೆ, ಗ್ರಾಮ ಪಂಚಾಯಿತಿ ಸೂಕ್ತ ಸೂಕ್ತ ರೀತಿಯಲ್ಲಿ ಕಸ ಸಂಗ್ರಹಿಸುತ್ತಿಲ್ಲ. ಬೆಳಗ್ಗಿನ ಜಾವ ಜನರು ಕೆಲಸಕ್ಕೆ ತೆರಳುವ ಮುಂಚೆ ಕಸ ಸಂಗ್ರಹಿಸುವ ಬದಲು ತಡವಾಗಿ ಕಸದ ವಾಹನ ಹೋಗುತ್ತಿದೆ. ಹಾಗಾಗಿ, ಸಾರ್ವಜನಿಕರು ಕಸವನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥ ಮಣಿ ಆರೋಪಿಸಿದರು.

ಸಿದ್ದಾಪುರ ಮಾರುಕಟ್ಟೆ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ
ಕಸ ಸಂಗ್ರಹಿಸುವವರು ತಡವಾಗಿ ಬರುವುದರಿಂದ ಕಸವನ್ನು ಮನೆಯಲ್ಲೇ ಇಟ್ಟು ಕೆಲಸಕ್ಕೆ ತೆರಳುತ್ತಾರೆ. ಸಂಜೆ ಅದೇ ಕಸವನ್ನು ರಸ್ತೆ ಬದಿಗೆ ಹಾಕುತ್ತಿದ್ದು ಇದರಿಂದಾಗಿ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ
ಅಫ್ಸಲ್ ಗ್ರಾಮಸ್ಥ
ಕಸ ವಿಲೇವಾರಿಗೆ ಜಾಗದ ಕೊರತೆ ಇರುವುದರಿಂದ ಕಸ ವಿಲೇವಾರಿಯಾಗುತ್ತಿಲ್ಲ. ಕೆಲವು ಭಾಗದ ಕಸವನ್ನು ವಿಲೇವಾರಿ ಮಾಡಲಾಗಿದೆ. ಶೀಘ್ರದಲ್ಲಿ ಉಳಿದ ಕಸವನ್ನು ತೆರವುಗೊಳಿಸಲಾಗುವುದು
ಪಳನಿಸ್ವಾಮಿ ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.