ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡಬೇಕು’ ಎಂದು ವಿಶ್ವಕರ್ಮ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಜೆ.ದೇವದಾಸ್ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ವೇಳೆ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಲ್ಲಿ ‘ಹಲವು ವರ್ಷಗಳಿಂದ ಈ ಕುರಿತು ಮನವಿ ಮಾಡುತ್ತಾ ಬರಲಾಗಿದೆ. ಈ ವರ್ಷವಾದರೂ ಜಾಗ ನೀಡಿ’ ಎಂದು ಕೋರಿದರು.
ಇದಕ್ಕೂ ಮುನ್ನ ವೇದಿಕೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ‘ದೇಶಕ್ಕೆ ವಿಶ್ವಕರ್ಮ ಸಮಾಜದವರ ಕೊಡುಗೆ ಅಪಾರವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಯಾವುದೇ ಗೃಹ ನಿರ್ಮಾಣ ಸೇರಿದಂತೆ ಹಲವು ಕಟ್ಟಡ ಕೆಲಸಗಳು, ಮರಗೆಲಸ, ಉಳುಮೆ ಮಾಡುವ ಕೆಲಸದ ಉಪಕರಣಗಳನ್ನು ವಿಶ್ವಕರ್ಮರು ತಯಾರು ಮಾಡುತ್ತಾರೆ. ರಾಷ್ಟ್ರದ ಅಭಿವೃದ್ಧಿ ಹಾಗೂ ಕೈಗಾರಿಕೆಗಳ ಬೆಳವಣಿಗೆಯಲ್ಲಿ ವಿಶ್ವಕರ್ಮ ಸಮಾಜದವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ, ‘ಎಲ್ಲ ಕುಲಕಸುಬುಗಳನ್ನೂ ಗೌರವಿಸಬೇಕು. ಎಲ್ಲಿ ಕ್ರಿಯಾ ಚೈತನ್ಯ ಇರುತ್ತದೆ. ಅಲ್ಲಿ ಕೆಲಸವನ್ನು ಕಾಣಬಹುದು. ಆ ನಿಟ್ಟಿನಲ್ಲಿ ಕಬ್ಬಿಣ, ಮರ, ಚಿನ್ನ, ಹೀಗೆ ಪಂಚ ರೀತಿಯ ಕಾರ್ಯ ಕೈಗೊಂಡು ಕಾಯಕ ವೃತ್ತಿಯಲ್ಲಿ ದೇವರನ್ನು ಕಾಣುತ್ತಾರೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೆಗೌಡ ಮಾತನಾಡಿ, ‘ವಿಶ್ವಕರ್ಮ ಸಂಸ್ಕೃತಿಯು ಸಮಾಜದಲ್ಲಿ ವಿಶಿಷ್ಟತೆ ಹೊಂದಿದೆ. ವಿಶ್ವಕರ್ಮ ದೇವರ ರೂಪ ಎಂದರೆ ತಪ್ಪಾಗಲಾರದು’ ಎಂದು ತಿಳಿಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕೋರನ ಸರಸ್ವತಿ ಮಾತನಾಡಿದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಜಗದೀಶ್ ಆಚಾರ್ಯ, ಮುಖಂಡರಾದ ಪ್ರಕಾಶ್ ಆಚಾರ್ಯ, ಅಶೋಕ್ ಆಚಾರ್, ನಾಗರಾಜ ಆಚಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಕುಮಾರ, ಸಾಹಿತಿ ಜೆ.ಸೋಮಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.