
ಗೋಣಿಕೊಪ್ಪಲು ಬಳಿಯ ನಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನಕ್ಕೆ ಸಿದ್ಧವಾದ ಸಂದರ್ಭ (ಎಡಚಿತ್ರ). ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಶಿಕ್ಷಕರೊಂದಿಗೆ ಅರಣ್ಯ ಇಲಾಖೆ ನೌಕಕರರು ಶಾಲೆಯ ಆವರಣದಲ್ಲಿ ವಿವಿಧ ಜಾತಿಯ 1ಬೀಜ ನೆಡುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು
ಗೋಣಿಕೊಪ್ಪಲು: ಈ ಶಾಲೆಯಲ್ಲಿ ಇರುವುದು ಕೇವಲ 21 ಮಕ್ಕಳು. ಆದರೆ, ಎಲ್ಲರೂ ವಿವಿಧ ಸ್ಪರ್ಧೆಗಳಲ್ಲಿ ಮುಂದಿದ್ದು, ಪ್ರಥಮ ಸ್ಥಾನಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಈ ಭಾಗದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
1ರಿಂದ 5ನೇ ತರಗತಿಯವರೆಗೆ ಇರುವ ಪೊನ್ನಂಪೇಟೆ ತಾಲ್ಲೂಕಿನ ನಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವುದು ಕೇವಲ 21 ವಿದ್ಯಾರ್ಥಿಗಳು. ಈಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಈ ಶಾಲೆಯ 7 ಮಂದಿ ಮಕ್ಕಳು ಮೊದಲ ಸ್ಥಾನ ಪಡೆದು, ಕ್ಲಸ್ಟರ್ ಮಟ್ಟದ ಉಳಿದ ಶಾಲೆಗಳು ಹುಬ್ಬೇರುವಂತೆ ಮಾಡಿದ್ದಾರೆ.
ಕಳೆದ ಬಾರಿ ತಾಲ್ಲೂಕು ಪಂಚಾಯಿತಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 1ರಿಂದ 4ನೇ ತರಗತಿಯವರೆಗೆ ಹಾಗೂ 5ರಿಂದ 7ನೇ ತರಗತಿವರೆಗಿನ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸುವಲ್ಲಿ ಶಾಲೆ ಯಶಸ್ವಿಯಾಗಿದೆ. ಕಳೆದ ಬಾರಿ ನಡೆದ ಜಾನಪದ ನೃತ್ಯದ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ತಂಡವು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿ ಪ್ರದರ್ಶನ ನೀಡಿದೆ. ಗ್ರಾಮ ಪಂಚಾಯಿತಿ ಮಟ್ಟದ ಕಲಿಕಾ ಆಂದೋಲನದಲ್ಲಿ ನಡೆದ ಗಣಿತ ಪರೀಕ್ಷೆಯಲ್ಲಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದಿದ್ದಾನೆ. ಈ ಎಲ್ಲ ಸಾಧನೆಗಳು, ವಿದ್ಯಾರ್ಥಿಗಳು ಕಡಿಮೆಯಾದರೂ ಈ ಭಾಗದ ಉತ್ತಮ ಶಾಲೆ ಎನ್ನುವ ಹೆಸರು ಪಡೆಯುವಂತೆ ಮಾಡಿದೆ.
ವಿದ್ಯಾರ್ಥಿಗಳ ಕೊರತೆಯಿಂದ ಬಹುತೇಕ ಮುಚ್ಚುವ ಹಂತ ತಲುಪಿರುವ ದಕ್ಷಿಣ ಕೊಡಗಿನ ಬಹಳಷ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಈ ಶಾಲೆಯಲ್ಲಿನ ಗಿರಿಜನ ಮಕ್ಕಳು ತಮ್ಮ ಅಸಾಧಾರಣ ಪ್ರತಿಭಾ ಪ್ರದರ್ಶನದಿಂದ ಶಾಲೆಯನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನೃತ್ಯ, ಕ್ಲೇ ಮಾಡಲಿಂಗ್ ಮೊದಲಾದವುಗಳಲ್ಲಿ ಮುಂದಿದ್ದಾರೆ. ಶಾಲೆಯ ಇಬ್ಬರು ಶಿಕ್ಷಕಿಯರೂ ಅಷ್ಟೇ ಕೌಶಲ ಹೊಂದಿದ್ದು, ಮಕ್ಕಳ ಅಭಿರುಚಿ ಅರಿತು ಅವರಿಗೆ ಅಕ್ಷರ ಕಲಿಸುವ ಕೆಲಸ ಮಾಡುತ್ತಿದ್ದಾರೆ.
ಈ ಶಾಲೆಯಲ್ಲಿ 20 ವರ್ಷಗಳ ಹಿಂದೆ 250ರಿಂದ 300 ವಿದ್ಯಾರ್ಥಿಗಳಿದ್ದರು. ಆದರೆ, ಈಗ ಈ ಸಂಖ್ಯೆ ಕೇವಲ 21ಕ್ಕೆ ಇಳಿದಿದೆ.
ಈ ಶಾಲೆ ಸ್ಥಾಪನೆಯಾಗಿದ್ದು 1961ರಲ್ಲಿ. ಶಿಕ್ಷಣ ದಾನಿ ಪುಚ್ಚಿಮಾಡ ಡಿ ಅಪ್ಪಯ್ಯ ಶಾಲೆಗೆ 3 ಎಕರೆಯಷ್ಟು ಭೂಮಿ ನೀಡಿದರು. ಇಂದು ಈ ಶಾಲೆಯಲ್ಲಿ ಓದಿದ ನೂರಾರು ಮಂದಿ ವಿದ್ಯಾವಂತರು ದೇಶದಾದ್ಯಂತ ಇದ್ದು, ಉನ್ನತ ಬದುಕು ಕಂಡುಕೊಂಡಿದ್ದಾರೆ.
ಪೊನ್ನಂಪೇಟೆ, ಕಿರುಗೂರು, ಪೊನ್ನಪ್ಪಸಂತೆ, ಬಾಳೆಲೆ ನಡುವಿನ ಮುಖ್ಯರಸ್ತೆಯಲ್ಲಿರುವ ಈ ಶಾಲೆಯ ಆವರಣದಲ್ಲಿ ಮಾವು, ಸಪೋಟ, ಕಿತ್ತಲೆ, ಪಪ್ಪಾಯ, ಬೆಣ್ಣೆ ಹಣ್ಣು, ಹಲಸಿನ ಮರಗಳಿವೆ. 10ಕ್ಕೂ ಹೆಚ್ಚು ತೆಂಗಿನ ಮರಗಳಿವೆ. ತೆಂಗಿನಕಾಯಿಗಳನ್ನು ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತದೆ. ಉಳಿದ ಎಲ್ಲ ಹಣ್ಣುಗಳು ಮಕ್ಕಳಿಗಾಗಿ ಮೀಸಲಿವೆ.
‘ಕೂಲಿ ಕಾರ್ಮಿಕ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿರುವ ಇಂತಹ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡುತಿದ್ದಾರೆ ಶಾಲೆಯ ಶಿಕ್ಷಕ ವೃಂದ ಹಾಗೂ ಊರಿನ ಶಿಕ್ಷಣ ದಾನಿಗಳು. ಆಶಾ ಕಾರ್ಯಕರ್ತೆಯರು ಕುಡಿಯುವ ನೀರಿನ ಶುದ್ಧೀಕರಣ ಯಂತ್ರ, ನಲ್ಲೂರಿನ ವ್ಯವಸಾಯ ಸೇವಾ ಸಹಕಾರ ಸಂಘ ಹಾಗೂ ಯುವಕ ಸಂಘವು ರ‍್ಯಾಕ್‌ಗಳನ್ನು ನೀಡಿದ್ದಾರೆ. ಗ್ರಾಮದ ಶಿಕ್ಷಣ ದಾನಿಗಳು ಪ್ರತಿ ವರ್ಷ ಹಣ ನೀಡಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸಿಕೊಡುತ್ತಿದ್ದಾರೆ. ಈ ಬಾರಿ ಕೇರಳ ಪ್ರವಾಸ ಹೋಗುವ ಯೋಜನೆ ರೂಪಿಸಿದ್ದೇವೆ ’ ಎಂದು ಶಿಕ್ಷಣ ದಾನಿಗಳ ಸಹಕಾರವನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಎಂ.ಎನ್.ಸಂಧ್ಯಾ.
ದಾನಿ ಟಿ.ಟಿ.ಪ್ರಭು ವಿದ್ಯಾರ್ಥಿಗಳಿಗೆ 5 ಟೇಬಲ್ ನೀಡಿದ್ದಾರೆ. ಅವರ ಸೋದರ ಟಿ.ಟಿ.ವಿಜಯ 20 ಕುರ್ಚಿ ನೀಡಿದ್ದಾರೆ. ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯವರು ಶಾಲಾ ಕೊಠಡಿಗೆ ಮತ್ತು ಆವರಣಕ್ಕೆ ಟೈಲ್ಸ್ ಹಾಕಿಸಿಕೊಟ್ಟಿದ್ದಾರೆ. ರೈತ ಸಂಘ, ಯುವಕ ಸಂಘ, ವಿಎಸ್ಎಸ್ ಸೊಸೈಟಿಗಳೂ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
-ಎಂ.ಎನ್.ಸಂಧ್ಯಾ, ಮುಖ್ಯ ಶಿಕ್ಷಕ
ಕೆ.ಎನ್.ರಾಧ್, ಶಿಕ್ಷಕ
ಶಾಲೆಯ ಅಭಿವೃದ್ಧಿ ಮತ್ತು ಆಡಳಿತ ಮಂಡಳಿ, ಗ್ರಾಮದ ಶಿಕ್ಷಣ ದಾನಿಗಳ ಸಹಕಾರದಿಂದ ಶಾಲೆಗೆ ಎಲ್ಲ ಸೌಕರ್ಯ ಒದಗಿಸಿಕೊಳ್ಳಲಾಗಿದೆ. ಇಲಾಖೆಯೂ ಕೂಡ ಅಗತ್ಯ ನೀಡುತ್ತಿದೆ.-ಎಂ.ಎನ್.ಸಂಧ್ಯಾ, ಮುಖ್ಯ ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.