ಗೋಣಿಕೊಪ್ಪಲು: ಮಹಿಳೆಯರು ಮೈಚಳಿ ಬಿಟ್ಟು ಕ್ರೀಡೆ, ಮನರಂಜನೆ, ವ್ಯಾಪಾರ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶನಿವಾರ ಇಲ್ಲಿನ ದಸರಾ ಮೈದಾನದಲ್ಲಿ ಸಂಭ್ರಮಿಸಿದರು.
ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮಂಜುಳಾ ಅವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಮಹಿಳೆಯರು ಹೂವಿನ ಅಲಂಕಾರ, ತಿಂಡಿತಿನಿಸು ಮಾಡುವುದು, ಮೆಹಂದಿ ಹಚ್ಚುವುದು, ಆಭರಣ ಮೊದಲಾದ ಅಲಂಕಾರ ವಸ್ತುಗಳ ವ್ಯಾಪಾರ, ಬಟ್ಟೆ ವ್ಯಾಪಾರ ಮೊದಲಾದವುಗಳ ವ್ಯಾಪಾರ ಮಾಡಿ ಸಂಜೆ ವರೆಗೂ ಮೈದಾನದಲ್ಲಿ ಮುಕ್ತವಾಗಿ ಬೆರೆತರು.
ಕ್ರೀಡೆಯಲ್ಲಿ ಆಸಕ್ತಿ ಇರುವ ಮಹಿಳೆಯರು ಕ್ರೀಡಾ ಸ್ಪರ್ಧೆಗಳಾದ ಲಿಂಬು–ಚಮಚ ಓಟ, ಗೋಣಿಚೀಲದ ಓಟ, ಕಣ್ಣಿಗೆ ಬಟ್ಟೆಕಟ್ಟಿ ಬಕೆಟ್ ಒಡೆಯುವುದು, ಸಂಗೀತ ಕುರ್ಚಿ, ಪಾಸಿಂಗ್‌ದ ಬಾಲ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗೋಣಿಚೀಲ ಓಟದ ವೇಳೆಮುಗ್ಗರಿಸಿ ಬೀಳುವ ಪರಿ ನಗೆ ಮೂಡಿಸುತ್ತಿತ್ತು.
ಕೆಲವರು ಮನೆಯಲ್ಲಿ ತಯಾರಿಸಿದ ಸಾಂಬಾರ್ ಪೌಡರ್, ತಿಂಡಿ ತಿನಿಸುಗಳ ವಸ್ತುಗಳನ್ನು ಅಚ್ಚುಕಟ್ಟಾಗಿ ತಮ್ಮದೇ ಬ್ರಾಂಡ್ ಇಟ್ಟು ವ್ಯಾಪಾರ ಮಾಡಿದರು. ಕೆಲವರು ರಚಿಯಾದ ತಿಂಡಿತಿನಿಸುಗಳನ್ನು ತಯಾರಿಸಿ ತಿಂಡಿ ಪ್ರಿಯರಿಗೆ ಉಣಬಡಿಸಿದರು. ವ್ಯಾಪಾರದಲ್ಲಿ ಮಹಿಳೆಯರೇ ಹೆಚ್ಚಿನ ಗ್ರಾಹಕರಾಗಿದ್ದರು. ಜತೆಗೆ ವೀಕ್ಷಕರು ಮತ್ತು ತೀರ್ಪುಗಾರರೂ ಮಹಿಳೆಯರೇ ಆಗಿದ್ದರು. ಬಿಸಿಲಿನ ತಾಪಕ್ಕೆ ತಲೆಯ ಮೇಲೆ ಬಿಳಿಟೊಪ್ಪಿ ಹಾಕಿ ಮೈದಾನಕ್ಕಿಳಿದ ಮಹಿಳಾ ತೀರ್ಪುಗಾರರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಮಕ್ಕಳು ತಾಯಿಯ ಆಟ ನೋಡಿ ಆನಂದಿಸಿದರೆ, ಕೆಲವು ತಾಯಂದಿರು ತಮ್ಮ ಮಕ್ಕಳ ಆಟ ನೋಡಿ ಸಂಭ್ರಮಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪದ ಗೀತೆ, ನೃತ್ಯ ಸಭಿಕರನ್ನು ರಂಜಿಸಿದರು. ತೀತಿರ ಚೋಂದಮ್ಮ ಉದ್ಘಾಟಿಸಿದರು. ದಸರಾ ಸಮಿತಿ ಕಾರ್ಯದರ್ಶಿ ಶೀಲಾ ಬೋಪಣ್ಣ, ಸದಸ್ಯರಾದ ಚಂದನಾ ಮಂಜುನಾಥ್, ವಾಮನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.