ಗೋಣಿಕೊಪ್ಪಲು: ಇಲ್ಲಿನ ದಸರಾ ಮೈದಾನದಲ್ಲಿ ಮಂಗಳವಾರ ಮಕ್ಕಳದೇ ಸಂಭ್ರಮ. ಮಕ್ಕಳ ದಸರಾ ಉತ್ಸವದ ಅಂಗವಾಗಿ ಸೈಕಲ್ ರೇಸ್,ಬಿಲ್ಲುಗಾರಿಕೆ, ಏಕಪಾತ್ರ ಅಭಿನಯ, ವೇಷಭೂಷಣ ಸ್ಪರ್ಧೆ, ಜನಪದ ನೃತ್ಯಗಳಲ್ಲಿ ಚಿಣ್ಣರು ಸಂಭ್ರಮಿಸಿದರು.
ಶಾಲೆಗೆ ದಸರಾ ರಜೆ ಇರುವುದರಿಂದತಮ್ಮ ಪೋಷಕರು ಮತ್ತು ಶಿಕ್ಷಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಬೆಳಗಿನಿಂದಲೇ ಪಾಲ್ಗೊಂಡು ಖುಷಿಪಟ್ಟರು.
ಸೈಕಲ್ ರೇಸ್ ಗಾಗಿ ಕೆಲವರು ಸಾವಿರಾರು ರೂಪಾಯಿಸಿ ವ್ಯಯಿಸಿ ಹೊಸ ಸೈಕಲ್ ಖರೀದಿಸಿದ್ದರೆ ಮತ್ತೆ ಕೆಲವರು ಶಾಲೆಯಲ್ಲಿ ಕೊಟ್ಟಿದ್ದ ಹಳೆ ಸೈಕಲ್ ಸರಿಪಡಿಸಿಕೊಂಡು ಸ್ಪರ್ಧೆಗೆ ಆಗಮಿಸಿದ್ದರು. ದಸರಾ ಮೈದಾನದಿಂದ ಕಿತ್ತಳೆ ಸಹಕಾರ ಸಂಘ, ಕೃಷಿ ವಿಜ್ಞಾನ ಕೇಂದ್ರ ಮೂಲಕ ಮರಳಿ ದಸರಾ ಮೈದಾನಕ್ಕೆ ಬರುವ ತೀವ್ರ ಪೈಪೋಟಿ ಇತ್ತು. ಕೆಲವರು ಮುನ್ನುಗ್ಗುವ ಭರದಲ್ಲಿ ಎಡವಿ ಬೀಳುತ್ತಿದ್ದರೆ ಮತ್ತೆ ಕೆಲವರು ಸೈಕಲ್ ಚೈನ್ ಕಳಚಿ ಬೆವರು ಹನಿಯೊಂದಿಗೆ ಸರಿಪಡಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಛದ್ಮವೇಷ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ರಾಮ, ಹನುಮಂತ, ಶಿವ, ಪಾರ್ವತಿ, ಪರಶುರಾಮ, ರಾಧಾಕೃಷ್ಣ, ಮುದ್ದುಕೃಷ್ಣ, ಜಟಾಯು ಮುಂತಾದ ಪೌರಾಣಿಕ ಮತ್ತು ಧಾರ್ಮಿಕ ಪಾತ್ರಗಳಲ್ಲಿ ಮಿಂಚಿದರು. ಕೆಲವರು ವಚನಕಾರ್ತಿ ಅಕ್ಕಮಹಾದೇವಿ, ವೀರ ವನಿತೆ ಒನಕೆ ಓಬವ್ವ, ಸರಸ್ವತಿ ವೇಷ ತೊಟ್ಟು ಗಮನ ಸೆಳೆದರು. ಕೋಲಾಟ, ಸುಗ್ಗಿಕುಣಿತ, ಬಾಗ್ಯದ ಬಳೆಗಾರ ಹಾಡುಗಳ ಮೂಲಕ ಜನಪದ ಸೊಗಡನ್ನು ಉಣಬಡಿಸಿದರು.
ಮಕ್ಕಳ ದಸರಾ ಸಮಿತಿ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಉದ್ಘಾಟನೆಯಲ್ಲಿ ಗೋಣಿಕೊಪ್ಪಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಕೆ.ತಕ್ಷಿತಾ ಅಧ್ಯಕ್ಷತೆ ವಹಿಸಿದ್ದುದು ವಿಶೇಷ ವಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜೆ.ಆನಂದ, ಬಿಆರ್‌ಪಿ ಕಳಕಂಡ ಪಿ.ಮಹೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಸೋಮಯ್ಯ, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಸಹಾಯಕ ನಿರ್ದೇಶಕ ಕೆ.ಆರ್.ರಾಜೇಶ್, ಸಿಆರ್ ಪಿ ಬಿ.ಕೆ.ರಾಧಾ, ಮಕ್ಕಳ ದಸರಾ ಸಮಿತಿ ಕಾರ್ಯದರ್ಶಿ ಟಿ.ಕೆ.ವಾಮನ, ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯದರ್ಶಿ ಕಂದ ದೇವಯ್ಯ, ಚೆಪ್ಪುಡೀರ ದ್ಯಾನ್ ಸುಬ್ಬಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.