ಗೋಣಿಕೊಪ್ಪಲು: ಇಲ್ಲಿನ ಅರುವತ್ತೊಕ್ಕಲು ಕಾಡ್ಲಯ್ಯಪ್ಪ ದೇವರ ವಾರ್ಷಿಕೋತ್ಸವ ಶನಿವಾರ ಮತ್ತು ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ದೇವರ ಕಾಡಿನ ದಟ್ಟ ಗಿಡಮರಗಳ ನಡುವೆ ಇರುವ ದೇವಸ್ಥಾನದ ಆವರಣದಲ್ಲಿ ಭಕ್ತರು ಪೂಜೆ ನೆರವೇರಿಸಿ ಭಕ್ತಿ ಮೆರೆದರು.
ಕಾಡ್ಯಮಾಡ ಕುಟುಂಬದ ಐನ್ ಮನೆಯಿಂದ ಶನಿವಾರ ದೇವರ ಭಂಡಾರ ತೆಗೆದು ದೇವಸ್ಥಾನದ ಬಳಿಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ದೇವರಿಗೆ ಅಭಿಷೇಕ ಮಾಡಿಸಿ ಬಳಿಕ ಆಭರಣ ತೊಡೆಸಿ ಅಲಂಕಾರ ಮಾಡಲಾಯಿತು. ಪಣಿಕ್ಕ ಸಮುದಾಯದವರು ದೇವರಿಗೆ ಆಭರಣ ಹಾಕಿ, ಹೂವಿನ ಅಲಂಕಾರ ಮಾಡಿದರು.
ದೇವರಕಾಡಿನ ಕಾಡ್ಲಯ್ಯಪ್ಪ ದೇವಸ್ಥಾನದಲ್ಲಿ ಭಕ್ತರು ಎರಡು ದಿನಗಳ ಕಾಲ ದೇವರ ಕಾರ್ಯ ನಡೆಸಿ ಪುನೀತರಾದರು. ಶನಿವಾರ ಸಂಜೆ ವಿವಿಧ ವೇಷ ಧರಿಸಿದ ಭಕ್ತರು ಹಾಡು ಹೇಳಿಕೊಂಡು ಕುಣಿಯುತ್ತಾ ಮನೆಕಳಿಯಾಟ ನಡೆಸಿದರು. ಭಾನುವಾರ ಮುಂಜಾನೆ ವೇಳೆಗೆ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕೊಂಡ ತುಳಿದು ಭಕಿ ಭಾವ ಮೆರೆದರು. ಧಗಧಗಿಸುತ್ತಿದ್ದ ಕೊಂಡವನ್ನು ಪೊಲವಪ್ಪ ದೇವರೊಂದಿಗೆ ಭಕ್ತರು ಕೂಡ ತುಳಿದು ಆನಂದಿಸಿದರು. ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಡ್ಯಮಾಡ ಪ್ರೀತ್ ಅವರ ನೇತೃತ್ವದಲ್ಲಿ ನಡೆದ ದೇವತಾ ಕಾರ್ಯದಲ್ಲಿ ಜಮ್ಮಡ, ಕೊಪ್ಪೀರ, ಗುಮ್ಮಟೀರ, ಮದ್ರೀರ, ಅಚ್ಚಿಯಂಡ, ಪಣಿಕ್ಕ ಸೇರಿದಂತೆ ಇತರ ಏಳು ಕುಟುಂಬದವರು ಒಗ್ಗೂಡಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಸಂಜೆ ಮರಳಿ ದೇವರ ಭಂಡಾರ ಪೆಟ್ಟಿಗೆಯನ್ನು ಕಾಡ್ಯಮಾಡ ಕುಟುಂಬದ ಐನ್ ಮನೆಗೆ ತಂದು ಇಡುವ ಮೂಲಕ ದೇವರ ವಾರ್ಷಿಕೋತ್ಸವಕ್ಕೆ ತೆರೆಬಿದ್ದಿತು. ಇದರ ಜತೆಗೆ ಕಾಡ್ಯಮಾಡ ಕುಟುಂಬದವರು ಏರ್ಪಡಿಸಿದ್ದ ಪ್ರಸಾದ ಸ್ವೀಕರಿಸಿ 15 ದಿನಗಳಿಂದ ಇದ್ದ ದೇವಕಟ್ಟು (ನಿರ್ಬಂಧ) ಕ್ಕೆ ತೆರೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.