ADVERTISEMENT

ಗೋಣಿಕೊಪ್ಪಲು: ಶಾಸಕ ಮುನಿರತ್ನ ವಿರುದ್ಧ ಆಕ್ರೋಶ

ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:04 IST
Last Updated 24 ಸೆಪ್ಟೆಂಬರ್ 2024, 14:04 IST
ಗೋಣಿಕೊಪ್ಪಲಿನಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು
ಗೋಣಿಕೊಪ್ಪಲಿನಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಗೋಣಿಕೊಪ್ಪಲು: ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರರೊಬ್ಬರು ಲಂಚ ನೀಡಲು ನಿರಾಕರಿಸಿದ್ದಕ್ಕೆ ಜಾತಿನಿಂದನೆ ಮಾಡಿದ  ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗೋಣಿಕೊಪ್ಪಲಿನ ಆರ್‌ಎಂಸಿ ಆವರಣದಿಂದ ಬಸ್‌ ನಿಲ್ದಾಣದವರೆಗೆ ನೀಲಿ ಧ್ವಜ ಹಿಡಿದು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ದಲಿತ ವ್ಯಕ್ತಿಯ ಬಗ್ಗೆ ಕೇವಲವಾಗಿ ಮಾತನಾಡಿರುವ ಮುನಿರತ್ನ ಜನಪ್ರತಿನಿಧಿಯಾಗಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಅಲ್ಲದೆ ಮಹಿಳೆಯರ ಬಗ್ಗೆಯೂ ಕೆಟ್ಟ ನಡತೆ ತೋರಿರುವ ಅವರು ಶಾಸಕ ಸ್ಥಾನಕ್ಕೆ ಅಪಚಾರ ಎಸಗಿದ್ದಾರೆ. ಕೂಡಲೇ ವಿಧಾನಸಭಾ ಅಧ್ಯಕ್ಷರು ಅವರನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸ್ಥಳೀಯ ಸಬ್ ಇನ್‌ಸ್ಪೆಕ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್.ಆರ್ ಪರಶುರಾಮ ಅವರು, ‘ಸರ್ಕಾರ ಭೂಮಿ ಇರುವವರಿಗೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದು ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ಜನತೆಗೆ ಅನ್ಯಾಯ ಮಾಡಿದಂತಾಗಿದೆ’ ಎಂದರು.

‘ನಿವೇಶನಕ್ಕಾಗಿ ನೂರಾರು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಬಡವರಿಗೆ ಇಂದಿಗೂ ನ್ಯಾಯ ದೊರಕಿಲ್ಲ. ಸರ್ಕಾರ ಗುತ್ತಿಗೆ ನೀಡಲು ರೂಪಿಸಿರುವ ಯೋಜನೆಯನ್ನು ಮರುಪರಿಶೀಲಿಸಿ ಬಡವರಿಗೆ ಸರ್ಕಾರಿ ಭೂಮಿಯಲ್ಲಿ ನಿವೇಶನ ನೀಡಬೇಕು. ಈ ಬಗ್ಗೆ ಜನಪರ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳು ಗಂಭೀರವಾಗಿ ಚಿಂತಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.