ಸೋಮವಾರಪೇಟೆ: ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಲು ಶಿಕ್ಷಣ ಸಂಸ್ಥೆಗಳು ಅನಿವಾರ್ಯ. ಸರ್ಕಾರಿ ಶಾಲೆಗಳ ಉಳಿವಿನತ್ತಲೂ ಪೋಷಕರು ಗಮನ ಹರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಜಿ. ಮೇದಪ್ಪ ಹೇಳಿದರು.
ತಾಲ್ಲೂಕಿನ ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಶತಮಾನೋತ್ಸವ ಆಚರಣಾ ಸಮಿತಿ, ಶಾಲಾಭಿವೃದ್ಧಿ ಸಮಿತಿ ವತಿಯಿಂದ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ಶತಮಾನೋತ್ಸವದ ಸ್ಮರಣ ಸಂಚಿಕೆ ವಿತರಣೆ, ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಣೆ, ಸನ್ಮಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಉಳಿವಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಅನಿವಾರ್ಯವಾಗಿದೆ ಎಂಬುದನ್ನು ಅರಿತು ಶಾಂತಳ್ಳಿಯಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸಲಾಗಿದೆ. ಕಂಪ್ಯೂಟರ್ ಯುಗದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಅವಶ್ಯ. ಉದ್ಯೋಗಕ್ಕೂ ಅನಿವಾರ್ಯ ಎಂದರು.
ಸರ್ಕಾರಿ ಶಾಲೆಯ ಶತಮಾನೋತ್ಸವ ಆಚರಣೆ, ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಆರಂಭಕ್ಕೆ ಸಹಕರಿಸಿದ ದಾನಿಗಳ ಸಹಕಾರ ಸದಾ ಸ್ಮರಣೀಯ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯ ಪರಮೇಶ್ವರ ಸ್ವಾಮಿ ಮಾತನಾಡಿ, ಮಾತೃ ಭಾಷೆಯಾಗಿ ಕನ್ನಡಕ್ಕೆ ಅಗ್ರ ಸ್ಥಾನ ನೀಡಲೇಬೇಕಿದೆ. ಆದರೆ, ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಕಲಿಕೆ ಅನಿವಾರ್ಯ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಡುಪಿಯ ಮಹೇಶ್ ಶೆಣೈ, ಸಮಾಜದ ಋಣವನ್ನು ಸಮಾಜಮುಖಿ ಕಾರ್ಯಗಳ ಮೂಲಕ ತೀರಿಸಬೇಕು. ಹಾಗಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದರು.
ವೇದಿಕೆಯಲ್ಲಿ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷೆ ಸವಿತಾ ವಿಜಯ್, ಸಮಿತಿ ಗೌರವಾಧ್ಯಕ್ಷ ಕೆ.ಎಸ್. ರಾಮಚಂದ್ರ, ಕೆ.ಟಿ. ರಾಜಶೇಖರ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್, ಸಮಿತಿಯ ಉಪಾಧ್ಯಕ್ಷ ಮನೋಹರ್, ಎಸ್‌ಡಿಎಂಸಿ ಅಧ್ಯಕ್ಷ ಕೆ.ಸಿ. ಗುರುಪ್ರಸಾದ್, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಡಿ. ಬಸವರಾಜು, ಶಾಲಾ ಸಮಿತಿ ಕಾರ್ಯದರ್ಶಿ ಪ್ರೇಮ್ ಸಾಗರ್, ಹಿರಿಯ ಸಾಹಿತಿ ಜಲಾ ಕಾಳಪ್ಪ, ಜಿ.ಪಂ. ಎಂಜಿನಿಯರ್ ವೀರೇಂದ್ರ, ಜಿ.ಪಂ. ಮಾಜಿ ಸದಸ್ಯ ಎಚ್.ಎಸ್. ವೆಂಕಪ್ಪ, ನಿವೃತ್ತ ಶಿಕ್ಷಕ ಚಾವಾಡಿಮನೆ ಶಿವಕುಮಾರ್, ತಾಲ್ಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಇತರರು ಇದ್ದರು.
ಹಿರಿಯ ಸಾಹಿತಿ ಜಲಾ ಕಾಳಪ್ಪ ಅವರು ರಚಿಸಿರುವ ‘ಇತಿಹಾಸ ಪ್ರಸಿದ್ಧ ಶಾಂತಳ್ಳಿ ವೈಭವ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಗ್ರಾಮದ ಮಾಜಿ ಸೈನಿಕರು, ಶಾಲಾ ಸ್ಥಾಪನೆಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ, ಟೈಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.