ಶನಿವಾರಸಂತೆ: ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕುಶಾಲನಗರ ಡಿವೈಎಸ್‍ಪಿ ಗಂಗಾಧರಪ್ಪ ಅಧ್ಯಕ್ಷತೆಯಲ್ಲಿ ಪಟ್ಟಣದ ಆರ್‍ವಿ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ವ್ಯಾಪ್ತಿಯ ಗೌರಿಗಣೇಶ ನಾನಾ ಸೇವಾ ಸಮಿತಿಯ ಸಭೆ ಈಚೆಗೆ ನಡೆಯಿತು.
ಸೇವಾ ಸಮಿತಿ ಸಭೆಯಲ್ಲಿ ಮಾತನಾಡಿದ ಡಿವೈಎಸ್‍ಪಿ ಗಂಗಾಧರಪ್ಪ, ‘ಗೌರಿಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ನಂತರ ಸೇವಾ ಸಮಿತಿಯವರು ಕಾನೂನು ನಿಯಮವನ್ನು ಪಾಲಿಸಬೇಕು. ಡಿ.ಜೆ, ಧ್ವನಿವರ್ಧಕ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಶಬ್ದ ಕಡಿಮೆ ಇರಬೇಕು. ಪ್ಲೆಕ್ಸ್ ಅಳವಡಿಸುವಾಗ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಅಳವಡಿಕೆ ಸಂದರ್ಭ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಪರವಾನಗೆ ಪಡೆದುಕೊಳ್ಳಬೇಕು. ಯಾವುದೇ ಗಲಭೆಯಾಗದಂತೆ ಸೇವಾ ಸಮಿತಿಯವರು ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ರಾತ್ರಿ 10 ಗಂಟೆಯ ನಂತರ ಎಲ್ಲೂ ಶಬ್ಧಮಾಲಿನ್ಯ ಆಗಬಾರದು. ಇದೀಗ ಕೆರೆಗಳಲ್ಲಿ ನೀರು ಸಂಗ್ರಹ ಹೆಚ್ಚಾಗಿರುತ್ತದೆ. ಗೌರಿಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಸೂಕ್ತ ಪರಿಣಿತರನ್ನು ಮಾತ್ರ ಕೆರೆಗೆ ಇಳಿಸಬೇಕು. ಕೆರೆಯಲ್ಲಿ ನೀರು ಮಲೀನವಾಗದಂತೆ ಎಚ್ಚರವಹಿಸಬೇಕು. ಗಣೇಶ ವಿಸರ್ಜನೆಯವರೆಗೂ ಪ್ರತಿನಿತ್ಯ ಸೇವಾ ಸಮಿತಿಯ ಸ್ವಯಂ ಸೇವಕರು ಪ್ರತಿಷ್ಠಾಪನೆ ಮಾಡಿರುವ ಸ್ಥಳದಲ್ಲಿರಬೇಕು, ಚಿಕ್ಕಪುಟ್ಟ ಜಗಳ ಗಲಾಟೆ ಸೇರಿದಂತೆ ಏನೆ ಅಹಿತಕರ ಘಟನೆಯಾದರೂ ಆಯೋಜಕರೆ ಜವಾಬ್ದಾರರಾಗುತ್ತಾರೆ’ ಎಂದರು.
ಸಭೆಯಲ್ಲಿ ಶನಿವಾರಸಂತೆ ಸಿಪಿಐ ಪ್ರೀತಂ ಡಿ.ಶ್ರೇಯಕರ್, ಠಾಣಾಧಿಕಾರಿ ಗೋವಿಂದರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.