
ವಿರಾಜಪೇಟೆ: ‘ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮದ್ದು. ಇಂದು ಪ್ರಪಂಚದಾದ್ಯಂತ ಹಿಂದೂ ಧರ್ಮದ ಆಚಾರ, ವಿಚಾರಗಳ ಬಗ್ಗೆ ಎಲ್ಲರಲ್ಲೂ ಆಸಕ್ತಿ ಮೂಡುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋ ಪ್ರಮುಖ ಸಂಚಾಲಕ ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯಪಟ್ಟರು.
ಸಮೀಪದ ಕೆದಮುಳ್ಳೂರು ಗ್ರಾಮದ ತೆರ್ಮೆಮೊಟ್ಟೆಯಲ್ಲಿ ಕೆದಮುಳ್ಳೂರು ಮಂಡಲ ಹಾಗೂ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಈಚೆಗೆ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬ ವ್ಯಕ್ತಿಯೂ ತಾನು ಹಿಂದೂ ಎಂಬ ಆತ್ಮವಿಶ್ವಾಸವನ್ನು ಗೌರವದಿಂದ ಪ್ರದರ್ಶಿಸಬೇಕಾಗಿದೆ. ಹಿಂದೂ ಸಮಾಜ ಇಂದು ಅತ್ಯಂತ ವಿಶಾಲವಾಗಿ, ಸದೃಢವಾಗಿ ಬೆಳೆದಿದೆ. ತನ್ನ ವಿರುದ್ಧ ನಡೆಯುವ ಎಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಶಕ್ತಿ ಸಾಮರ್ಥ್ಯ ಹಿಂದೂ ಸಮಾಜಕ್ಕಿದೆ. ಹಿಂದೂ ಧರ್ಮ ಸಮಾನತೆಯನ್ನು ಸಾರುವ ಧರ್ಮವಾಗಿದೆ. ಸಂಸ್ಕೃತಿ, ಸಂಸ್ಕಾರ, ಸಂವೇದನೆ, ಭ್ರಾತೃತ್ವ, ಗೌರವ, ಗೋಪೂಜೆ ಮುಂತಾದ ಧರ್ಮ ಪ್ರೇರಣೆಯಾಗುವ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿವೆ. ನಾವೆಲ್ಲರೂ ಒಂದಾಗಿ ನಮ್ಮ ಧರ್ಮ ಹಾಗೂ ಸಂಸ್ಕೃತಿ ಉಳಿಸುವ ಸಂಕಲ್ಪ ಮಾಡೋಣ’ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ಎಂ.ಎಂ. ಪರಮೇಶ್ವರ ಮಾತನಾಡಿ, ‘ನಮ್ಮ ಧರ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯತೆ ಆಗಿದೆ. ಜಗತ್ತಿನ ಎಲ್ಲ ಕ್ಷೇತ್ರಕ್ಕೂ ಕೊಡುಗೆ ನೀಡಿರುವುದು ಹಿಂದೂ ಸಮಾಜ’ ಎಂದರು.
ಪ್ರಾಧ್ಯಾಪಕ ಜವರೇಗೌಡ ಅವರು ದೇವರಕಾಡು, ಪರಿಸರದ ಬಗ್ಗೆ ಕಾಳಜಿ ಕುರಿತು ಮಾತನಾಡಿದರು. ಆರಂಭದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತೆರ್ಮೆಮೊಟ್ಟೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಆರಂಭವಾದ ಶೋಭಾಯಾತ್ರೆಯು ತೆರ್ಮೆಮೊಟ್ಟೆ ಮೈದಾನದಲ್ಲಿ ಕೊನೆಗೊಂಡಿತ್ತು. ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮದ ಹಿಂದೂ ಬಾಂಧವರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಪ್ರತಿಭೆಗಳಿಗೆ ಪಂಚಾಯಿತಿ ಸದಸ್ಯ ಕೆ.ಆರ್. ರಾಮಯ್ಯ ಪ್ರತಿಭಾ ಪುರಸ್ಕಾರ ನೀಡಿದರು.
ಆಯೋಜನಾ ಸಮಿತಿಯ ಸಂಚಾಲಕ ಮಾಳೇಟಿರ ಸನ್ನಿ ಕಾರ್ಯಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಫ್ರಿ ಉತ್ತಪ್ಪ, ಅಮ್ಮುಣಿಚಂಡ ರಂಜನ್ ನಂಜಪ್ಪ, ಉಪನ್ಯಾಸಕಿ ಚೈತ್ರ ಜಿ.ಟಿ,ಹಿಂದೂ ಸಂಗಮ ಆಯೋಜನಾ ಸಮಿತಿಯ ಸದಸ್ಯರು, ಕಾರ್ಯಕರ್ತರು, ಸ್ಥಳೀಯ ದೇವಸ್ಥಾನ ಸಮಿತಿ ಮುಖಂಡರು, ಸಂಘ ಸಂಸ್ಥೆಯ ಪ್ರಮುಖರು, ವಿನಾಯಕ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.