ಕುಶಾಲನಗರ: ಪಟ್ಟಣದ ಸಾಯಿ ಬಡಾವಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 6 ಗಂಟೆಯಿಂದ ದೇವರಿಗೆ ವಿಶೇಷ ಆರತಿ ಕಾರ್ಯಕ್ರಮಗಳು, ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣದ ದೇವಾಲಯಗಳ ಒಕ್ಕೂಟದ ಸಮಿತಿಯ ಪ್ರತಿನಿಧಿಗಳು ಫಲತಾಂಬೂಲಗಳೊಂದಿಗೆ ದೇವಾಲಯಕ್ಕೆ ಬಂದು, ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇವಾಲಯದಲ್ಲಿ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಸಾಯಿ ಬಾಬಾ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಅಷ್ಟ ಅಭಿಷೇಕ ಕಾರ್ಯಕ್ರಮ ಜರುಗಿತು. ಸಾಯಿಬಾಬಾ ಮೂರ್ತಿಗೆ ಬೃಹತ್ ಪುಷ್ಪಾಹಾರ ಹಾಗೂ ವಿವಿಧ ಪುಷ್ಪಗಳಿಂದ ಶೃಂಗಾರ ಮಾಡಲಾಗಿತ್ತು.
ದೇವಾಲಯ ಅರ್ಚಕ ನವೀನ್ ಕುಮಾರ್ ಶುಕ್ಲ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಪಟ್ಟಣ ಸೇರಿ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗುಡ್ಡೆಹೊಸೂರು,ಕೊಪ್ಪ, ಕೂಡಿಗೆ, ಕಣಿವೆ, ಗೊಂದಿಬಸವನಹಳ್ಳಿ, ಚಿಕ್ಕತ್ತೂರು, ಹಾರಂಗಿ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಭಕ್ತರು ಆಗಮಿಸಿ, ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ದೇವಾಲಯ ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು, ಟ್ರಸ್ಟ್ ಸದಸ್ಯರಾದ ಎಂ. ಮುನಿಸ್ವಾಮಿ, ಕೆ.ಓಬಳ ರೆಡ್ಡಿ, ಬಿ.ಜಿ.ರವಿಕುಮಾರ್, ನಂಜುಂಡಸ್ವಾಮಿ, ಅಮೃತ್ ರಾಜ್, ಶ್ರೀಪತಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಸೇವಾ ಸಮಿತಿ ಸದಸ್ಯರು ಹಾಗೂ ವಿವಿಧ ದೇವಾಲಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಅನ್ನಸಂತರ್ಪಣೆ: ಗುರು ಪೂರ್ಣಿಮೆ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.