
ಕುಶಾಲನಗರ: ಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿವಿಧ ಉತ್ಸವಗಳ ಮಂಟಪಗಳ ಶೋಭಾಯಾತ್ರೆ ವೇಳೆ ಬುಧವಾರ ನಸುಕಿನ 3 ಗಂಟೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಕೂಡುಮಂಗಳೂರು, ಕೂಡಿಗೆ ಹನುಮ ಸೇನಾ ಸಮಿತಿಯ ಉತ್ಸವ ಮಂಟಪದ ಪ್ರದರ್ಶನದ ವೇಳೆ ಸಿಡಿಸಿದ ಪಟಾಕಿಯಿಂದ ಬೆಂಕಿ ಕಿಡಿ ಉತ್ಸವದ ಆಂಜನೇಯ ಮೂರ್ತಿಯೊಂದರ ಕೈಯೊಳಗೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿತು. ಬೃಹತ್ ಆಂಜನೇಯ ಮೂರ್ತಿಗೆ ಬೆಂಕಿ ಆವರಿಸಿ ಗಾಳಿಗೆ ಬೆಂಕಿಯ ಜ್ವಾಲೆ ಧಗಧಗನೆ ಉರಿಯತೊಡಗಿತು.
ಉತ್ಸವದ ಪ್ರದರ್ಶನ ವೀಕ್ಷಣೆ ಮಾಡುತ್ತಿದ್ದ ಜನರು ಹಾಗೂ ಸಮಿತಿ ಕಾರ್ಯಕರ್ತರು ಚದುರಿ ಹೋದರು. ಕೆಲವು ಯುವಕರು ತಮ್ಮ ಮೊಬೈಲ್‌ನಿಂದ, ಉರಿಯುತ್ತಿರುವ ಮಂಟಪದ ವಿಡಿಯೊ, ಫೋಟೋ ತೆಗೆಯುತ್ತಿದ್ದರು. ಸ್ಥಳಕ್ಕೆ ತಕ್ಷಣ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಬಹುಮಾನ ವಿಜೇತ ಉತ್ಸವ: ಶೋಭಾಯಾತ್ರೆಯಲ್ಲಿ ಗುಡ್ಡೆಹೊಸೂರು-ಬಸವನಹಳ್ಳಿಯ ವೀರಾಂಜನೇಯ ಸೇವಾ ಸಮಿತಿಗೆ ಪ್ರಥಮ ಬಹುಮಾನ ದೊರೆತಿದೆ. ಹಾರಂಗಿ ಗ್ರಾಮದ ವೀರ ಹನುಮ ಸೇವಾ ಸಮಿತಿಗೆ ದ್ವಿತೀಯ ಬಹುಮಾನ, ಎಚ್.ಆರ್.ಪಿ.ಕಾಲೊನಿಯ ಅಂಜನೀಪುತ್ರ ಸಮಿತಿಗೆ ತೃತೀಯ ಬಹುಮಾನ ಹಾಗೂ ಕೂಡಿಗೆ-ಕೂಡುಮಂಗಳೂರಿನ ಹನುಮ ಸೇನೆಗೆ ನಾಲ್ಕನೇ ಬಹುಮಾನ ದೊರೆತಿದೆ ಎಂದು ದಶಮಂಟಪಗಳ ಸೇವಾ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.