ADVERTISEMENT

ಡಿಸೆಂಬರ್‌ನಲ್ಲಿ ಹಾರಂಗಿ ಹೂಳು ತೆರವು: ಸಚಿವ ಎಸ್‌. ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 12:12 IST
Last Updated 31 ಆಗಸ್ಟ್ 2019, 12:12 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಸಚಿವ ಎಸ್.ಸುರೇಶ್‌ ಕುಮಾರ್‌ ಬಾಗಿನ ಅರ್ಪಿಸಿದರು
ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಸಚಿವ ಎಸ್.ಸುರೇಶ್‌ ಕುಮಾರ್‌ ಬಾಗಿನ ಅರ್ಪಿಸಿದರು   

ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದು ಡಿಸೆಂಬರ್‌ನಿಂದ ಹೂಳು ತೆರವು ಕಾರ್ಯ ಆರಂಭಿಸಲಾಗುವುದು ಎಂದು ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಇಲ್ಲಿ ಶನಿವಾರ ಹೇಳಿದರು.

ಹಾರಂಗಿಯಲ್ಲಿ ಮಾತನಾಡಿದ ಅವರು, ‘ಹೂಳು ತೆರವು ಕಾರ್ಯಕ್ಕೆ ₹132 ಕೋಟಿ ಬಿಡುಗಡೆಯಾಗಿದೆ. ಈಗ ಹೂಳು ತೆರವು ಮಾಡಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ, ಡಿಸೆಂಬರ್‌ ಮೊದಲ ವಾರದಲ್ಲಿ ತೆರವು ಕಾರ್ಯ ನಡೆಸಲಾಗುವುದು’ ಎಂದು ಹೇಳಿದರು.

ಕೊಡಗು ಪ್ಯಾಕೇಜ್‌ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು₹ 536 ಕೋಟಿ ಘೋಷಿಸಿದ್ದು, ಮೊದಲ ಹಂತದಲ್ಲಿ ₹ 100 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

‘ತೋರದಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿಲ್ಲ. ಅವರ ಕುಟುಂಬಕ್ಕೆ ತಲಾ ₹ 1 ಲಕ್ಷ ವಿತರಿಸಲಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಇನ್ನೂ ಹೆ‌ಚ್ಚಿನ ಪರಿಹಾರ ನೀಡಲಾಗುವುದು. ಸದ್ಯದಲ್ಲೇ ಆ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಡಿಕೆಶಿಗೆ ದೇವರು ಒಳ್ಳೆಯದ್ದು ಮಾಡಲಿ:

‘ಬಿಜೆಪಿ ಯಾರ ವಿರುದ್ಧವೂ ದ್ವೇಷ ಸಾಧಿಸುತ್ತಿಲ್ಲ. ಇ.ಡಿ ವಿಚಾರದಲ್ಲಿ ಕಾನೂನಿನಂತೆ ಕ್ರಮ ಆಗಲಿದೆ. ಡಿ‌.ಕೆ‌.ಶಿವಕುಮಾರ್‌ಗೆ ದೇವರು ಒಳ್ಳೆಯದ್ದು ಮಾಡಲಿ ಅಂತಾ ನಾವೂ ಬಯಸುತ್ತೇವೆ’ ಎಂದು ಇ.ಡಿ (ಜಾರಿ ನಿರ್ದೇಶನಾಲಯ) ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪಕ್ಕೆ ಸಚಿವರು ಉತ್ತರಿಸಿದರು.

ಯಡಿಯೂರಪ್ಪ ಅವರು ಈಗಾಗಲೇ ಹಾನಿ ಕುರಿತ ಸಂಪೂರ್ಣ ವಿವರವನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಅವರು, ನೆರೆ ಹಾನಿ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಹೋಗಿದ್ದಾರೆ. ರಾಜ್ಯಕ್ಕೆ ದೊಡ್ಡಮೊತ್ತದ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ವೈಜ್ಞಾನಿಕ ಅಧ್ಯಯನ:

ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕುಸಿತದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲು ಚಿಂತಿಸಲಾಗಿದೆ. ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದೇನೆ. ಜಿಲ್ಲೆಯಲ್ಲಿ ಸುರಕ್ಷಿತವಲ್ಲದ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರನ್ನು ಶಾಶ್ವತ ಸ್ಥಳಾಂತರಕ್ಕೂ ಚಿಂತಿಸಲಾಗಿದೆ. ಕಳೆದ ಸಾಲಿನ ನಿರಾಶ್ರಿತರಿಗೆ ಶೀಘ್ರವೇ ಮನೆಗಳನ್ನು ಹಸ್ತಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.